ಬೆಂಗಳೂರು, ಆ.31: ರೈತರು, ವಿದ್ಯಾರ್ಥಿಗಳು ಹಾಗೂ ವಿವಿಧ ಚಳವಳಿಗಾರರ ವಿರುದ್ಧ ಬೇರೆ ಬೇರೆ ಠಾಣೆಗಳಲ್ಲಿ ದಾಖಲಾಗಿರುವ 8 ಪ್ರಕರಣಗಳನ್ನು ವಾಪಸ್ ಪಡೆಯಲು, ಇದಲ್ಲದೆ, ಕಲಬುರಗಿಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಸ್ಥಾಪನೆ, 253ಜೀವಾವಧಿ ಶಿಕ್ಷೆ ಕೈದಿಗಳ ಬಿಡುಗಡೆ ಸೇರಿದಂತೆ ಹಲವಾರು ಮಹತ್ವದ ವಿಚಾರಗಳನ್ನು ಇಂದಿನ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆ ದಾಂಡೇಲಿ ಪೊಲೀಸ್ ಠಾಣೆ, ಮೈಸೂರುನಗರ ಲಕ್ಷ್ಮೀಪುರಂ ಪೊಲೀಸ್ ಠಾಣೆ, ಹುಬ್ಬಳ್ಳಿ ಉಪನಗರ ಠಾಣೆ, ಬೆಳಗಾವಿಹಿರೇಬಾಗೇವಾಡಿ ಪೊಲೀಸ್ ಠಾಣೆ, ವಿಜಯಪುರ ಇಂಡಿ ಠಾಣೆ , ದಕ್ಷಿಣ ಕನ್ನಡ ವಿಟ್ಲ ಠಾಣೆ, ಬೆಂಗಳೂರು ನಗರ ಸದಾಶಿವನಗರ ಠಾಣೆ, ಗದಗ ಜಿಲ್ಲೆ ಶಿರಹಟ್ಟಿ ಠಾಣೆ ಸೇರಿದಂತೆ ವಿವಿಧೆಡೆ ರೈತರು ಹಾಗೂ ಚಳವಳಿಗಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಲಾಗುತ್ತಿದೆ.
ಅದೇ ರೀತಿ ಎನ್‌ಎಸ್‌ಯುಐ ಕಾರ್ಯಕರ್ತರ ವಿರುದ್ಧ ಮೈಸೂರು ನಗರ ದೇವರಾಜ ಠಾಣೆ, ಕೃಷ್ಣರಾಜಠಾಣೆ, ಲಕ್ಷ್ಮೀಪುರಂ ಠಾಣೆಗಳಲ್ಲಿ ದಾಖಲಾಗಿರುವ ಹಲವಾರು ಪ್ರಕರಣಗಳನ್ನು ಹಿಂಪಡೆಯಲಾಗಿದೆ.
ಜೀವಾವಧಿ ಶಿಕ್ಷೆ ಅನುಭವಿಸಿರುವ 253 ಕೈದಿಗಳ ಬಿಡುಗಡೆಗೆ ಸಂಪುಟ ಸಭೆ ಶಿಫಾರಸ್ಸು ಮಾಡಿದೆ. ಕರ್ನಾಟಕ, ತಮಿಳುನಾಡು, ಕೇರಳ ಗಡಿಭಾಗದಲ್ಲಿ ನಕ್ಸಲ್ ನಿಗ್ರಹಕ್ಕೆ ವಿಶೇಷ ಪಡೆ ನಿಯೋಜಿಸಲಾಗುತ್ತಿದೆ. ಗ್ರಾಮೀಣ ಮತ್ತು ನಗರಪ್ರದೇಶದ ಪರಿಶಿಷ್ಟ ಜಾತಿ, ಪಂಗಡದ ವಸತಿ ರಹಿತರಿಗೆ ಹೊಸದಾಗಿ ಡಾ.ಅಂಬೇಡ್ಕರ್ ವಸತಿ ಯೋಜನೆ ಆರಂಭಿಸಲು ಅನುಮತಿ ನೀಡಲಾಗಿದೆ. ಕಲಬುರಗಿಯಲ್ಲಿ ನೂತನವಾಗಿ 15 ಕೋಟಿ ರೂ. ವೆಚ್ಚದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಸ್ಥಾಪಿಸಲಾಗುತ್ತಿದೆ.
ಸ್ವಂತ ನಿವಾಸದಲ್ಲಿ ವಾಸ ಮಾಡುತ್ತಿರುವ ಸಚಿವರ ಬಾಡಿಗೆ ಭತ್ಯೆ ಪರಿಷ್ಕರಿಸಲಾಗಿದೆ. ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ಅಭ್ಯರ್ಥಿಗಳು ಲಭ್ಯವಿಲ್ಲದೆ ಬಾಕಿ ಉಳಿದಿರುವ ಸರ್ಕಾರಿ ಹುದ್ದೆಗಳನ್ನು ಬ್ಯಾಕ್‌ಲಾಗ್ ಹುದ್ದೆಗಳೆಂದು ಪರಿಗಣಿಸಲಾಗಿದೆ. 2005-06ನೇ ಸಾಲಿನಲ್ಲಿ ಬಿಬಿಎಂಪಿಯ ರಸ್ತೆ ಡಾಂಬರೀಕರಣ ಕಾಮಗಾರಿಯಲ್ಲಿ ನಡೆದಿರುವ ಅಕ್ರಮಗಳನ್ನು ತನಿಖೆಗೆ ಒಳಪಡಿಸಲು ನಿರ್ಧರಿಸಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಬಹಳ ದಿನಗಳಿಂದ ಬಾಕಿ ಉಳಿದಿರುವ 20 ಪೈಸೆ ಪ್ರೋತ್ಸಾಹ ಧನ ಮಂಜೂರು ಮಾಡಲಾಗಿದೆ. ರಾಜ್ಯದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರ ನಿವೃತ್ತಿ ನಂತರ ಹೊಸ ಮುಖ್ಯ ಕಾರ್ಯದರ್ಶಿ ನೇಮಕದ ಅಧಿಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಲಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ವಿ.ಪಿ.ಬಳಿಗಾರ್ ಅವರನ್ನು ಕೆಎಟಿಗೆ ಸದಸ್ಯರನ್ನಾಗಿ ನೇಮಿಸಲು ಚರ್ಚೆ ನಡೆಸಲಾಗಿದೆ. ನಾನಾ ಪ್ರಮುಖ ವಿಷಯಗಳ ಬಗ್ಗೆ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ.
