ಕರ್ನಾಟಕ

ಮೂಡದ ಬಿಬಿಎಂಪಿ ಮೈತ್ರಿ: ಕಾಂಗ್ರೆಸ್-ಜೆಡಿಎಸ್ ಮಧ್ಯೆ ಆಗದ ರಾಜಿ…!

Pinterest LinkedIn Tumblr

bbmp kai

ಬೆಂಗಳೂರು, ಆ.31: ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬಿಬಿಎಂಪಿ ಗದ್ದುಗೆ ಏರಲು ಹವಣಿಸುತ್ತಿರುವ ಕಾಂಗ್ರೆಸ್ಸಿಗೆ ಕಾಂಗ್ರೆಸ್ಸಿಗರೇ ಮಗ್ಗಲು ಮುಳ್ಳಾಗಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮೂಲಕ ಬಿಬಿಎಂಪಿ ಅಧಿಕಾರ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿದ್ದ ಸಿಎಂ ಸಿದ್ದು ಬಣಕ್ಕೆ ಮೂಲ ಕಾಂಗ್ರೆಸಿಗರು ಕೊಡಲಿ ಪೆಟ್ಟು ನೀಡುವ ಮೂಲಕ ಮೇಯರ್ ಮೈತ್ರಿಗಿರಿ ವಿವಾಹಕ್ಕೆ ಮೊದಲೇ ವಿಚ್ಛೇದನ ಎಂಬಂತಾಗಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಮೂಲ ಮತ್ತು ವಲಸೆ ಕಾಂಗ್ರೆಸ್ಸಿಗರ ನಡುವೆ ಅಸಮಾಧಾನ, ಅತೃಪ್ತಿ ಹೊಗೆಯಾಡುತ್ತಲೇ ಇದೆ. ಬಿಬಿಎಂಪಿ ಮೇಯರ್ ಚುನಾವಣೆ ಸಂದರ್ಭದಲ್ಲಿ ಇದು ಬೆಂಕಿಯ ಜ್ವಾಲೆಯಾದರೂ ಆಶ್ಚರ್ಯವಿಲ್ಲ. ಕಾಂಗ್ರೆಸ್‌ನ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ನಿನ್ನೆ ಮೈಸೂರಿನಲ್ಲಿ ಮಾತನಾಡಿ, ಮೈತ್ರಿ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಅದು ಸ್ಥಳೀಯ ಮುಖಂಡರ ವಿವೇಚನಕ್ಕೆ ಬಿಟ್ಟಿದ್ದು ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.

ಇತ್ತ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಜೆಡಿಎಸ್ ರಾಜ್ಯಾಧ್ಯಕ್ಷ , ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕುಹುಕದ ಮಾತುಗಳನ್ನಾಡುವ ಮೂಲಕ ಮೈತ್ರಿಗೆ ಹುಳಿ ಹಿಂಡುವ ಕೆಲಸ ಮಾಡಿದ್ದಾರೆ. ಇಷ್ಟಲ್ಲದೆ, ಬಿಬಿಎಂಪಿ ಜೆಡಿಎಸ್ ಜೊತೆ ಮೈತ್ರಿಗೆ ಅವಕಾಶ ನೀಡಬೇಡಿ ಎಂದು ಸಿದ್ದರಾಮಯ್ಯ ಅವರ ಸಚಿವ ಸಂಪುಟದ ಕೆಲ ಸಚಿವರು ಹೈಕಮಾಂಡ್‌ಗೆ ಪತ್ರ ಬರೆದಿರುವುದು ತಿಳಿದುಬಂದಿದೆ.

ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಮೂಲ ಕಾಂಗ್ರೆಸ್ಸಿಗರು ಮತ್ತು ವಲಸೆ ಕಾಂಗ್ರೆಸ್ಸಿಗರ ನಡುವಿನ ಹಗ್ಗಜಗ್ಗಾಟ ದಿನೇ ದಿನೇ ಹೆಚ್ಚಾಗಿ ಜೆಡಿಎಸ್ ಜೊತೆಗಿನ ಮೈತ್ರಿ ಬಿಕ್ಕಟ್ಟು ಉಲ್ಬಣಗೊಳ್ಳತೊಡಗಿದೆ. ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯಲೇಬೇಕೆಂದು ಸಿದ್ದರಾಮಯ್ಯ ನೇತೃತ್ವದ ಬಣ ತೀವ್ರ ಕಸರತ್ತು ನಡೆಸುತ್ತಿತ್ತು. ಮೈತ್ರಿ ಇನ್ನೇನು ಫಲ ನೀಡಿತು ಎನ್ನುವಷ್ಟರಲ್ಲಿಯೇ ಕೆಪಿಸಿಸಿ ಅಧ್ಯಕ್ಷರ ಆಪ್ತರಾಗಿರುವ ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾದ ಎ.ಕೆ.ಅಂಟನಿಗೆ ಪತ್ರ ಬರೆದು ಜೆಡಿಎಸ್ ಜೊತೆಗಿನ ಮೈತ್ರಿಗೆ ಅವಕಾಶ ನೀಡಬೇಡಿ ಎಂದು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇದರ ಜೊತೆಗೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಪತ್ರ ಬರೆದಿರುವ ಆರು ಮಂದಿ ಸಚಿವರು ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿಯಾದರೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಪೆಟ್ಟು ಬೀಳುತ್ತದೆ. ಮೈತ್ರಿ ಈ ಹಿಂದೆ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿಯಾದ ಸಂದರ್ಭದಲ್ಲಿ ನಮ್ಮ ಪಕ್ಷ ಅನುಭವಿಸಿದ ಕಿರುಕುಳವನ್ನು ನಾವು ಮರೆಯುವಂತಿಲ್ಲ. ಈಗ ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯುವ ಸಲುವಾಗಿ ಮೈತ್ರಿ ಮಾಡಿಕೊಂಡರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ ಎನ್ನಲಾಗಿದೆ.

ಬಿಬಿಎಂಪಿ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತವಿಲ್ಲದೆ ಅತಂತ್ರ ಸ್ಥಿತಿ ಇದೆ. ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇಂತಹ ಸಂದರ್ಭದಲ್ಲಿ ರಾಜಕೀಯ ಹೊಂದಾಣಿಕೆಗಳ ಮೂಲಕ ಜನಾದೇಶವನ್ನು ಉಲ್ಲಂಘಿಸಿದರೆ ನೈತಿಕತೆಯ ಪ್ರಶ್ನೆ ಎದುರಾಗುತ್ತದೆ. ಕಾಂಗ್ರೆಸ್ ಪಕ್ಷದ ಮೇಲಿನ ನಂಬಿಕೆ ಹಾಳಾಗುತ್ತದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿಗೆ ಅವಕಾಶ ನೀಡಬಾರದೆಂದು ಹೈಕಮಾಂಡ್‌ಗೆ ಸಚಿವರು ಪತ್ರದ ಮೂಲಕ ಒತ್ತಾಯಿಸಿರುವ ಅಂಶಗಳು ಬೆಳಕಿಗೆ ಬಂದಿವೆ. ಇದಲ್ಲದೆ ಕಾನೂನು ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಜೆಡಿಎಸ್ ಪಕ್ಷದಿಂದ ಮೈತ್ರಿ ಪ್ರಸ್ತಾಪ ಬಂದಿಲ್ಲ. ಹೈಕಮಾಂಡ್ ಮಟ್ಟದಲ್ಲಿ ಮೈತ್ರಿ ಪ್ರಸ್ತಾಪವಿಲ್ಲ. ಇದೇನಿದ್ದರೂ ಸ್ಥಳೀಯ ಮಟ್ಟದಲ್ಲಿ ನಡೆಯುವ ಪ್ರಕ್ರಿಯೆ ಎಂದು ಹೇಳುವ ಮೂಲಕ ಬಿಬಿಎಂಪಿ ಮೈತ್ರಿಗೆ ಬ್ರೇಕ್ ಹಾಕುವ ಪ್ರಯತ್ನ ನಡೆಸಿದ್ದಾರೆ ಎಂದೇ ವ್ಯಾಖ್ಯಾನಿಸಲಾಗಿದೆ.

ಅತ್ತ ಪಕ್ಷೇತರರನ್ನು ಕರೆದೊಯ್ದಿರುವ ಶಾಸಕರಾದ ಬೈರತಿ ಬಸವರಾಜ್, ಮುನಿರತ್ನಂ ಅವರ ವಿರುದ್ಧವೂ ಕೆಪಿಸಿಸಿ ಅಧ್ಯಕ್ಷರು ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಮತ್ತೊಂದು ಮೂಲದ ಪ್ರಕಾರ ಕೋಮುವಾದಿ ಶಕ್ತಿಗಳನ್ನು ದೂರವಿಡಲು ಜಾತ್ಯತೀತ ಶಕ್ತಿಗಳೊಂದಿಗೆ ಕೈ ಜೋಡಿಸಲು ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆಯಾದರೂ ರಾಜ್ಯದಲ್ಲಿ ಮೂಲ ಕಾಂಗ್ರೆಸ್ ಮತ್ತು ವಲಸೆ ಕಾಂಗ್ರೆಸ್ಸಿಗರ ನಡುವಿನ ವಿವಾದ ತಾರಕಕ್ಕೇರಿರುವುದು ಜನಜನಿತವಾಗಿದೆ.

Write A Comment