ಕರ್ನಾಟಕ

ಕಲಬುರ್ಗಿ ಹತ್ಯೆ: ಹುಟ್ಟೂರಲ್ಲಿ ನೀರವ ಮೌನ

Pinterest LinkedIn Tumblr

4

ಸಿಂದಗಿ: ನಾಡಿನ ಖ್ಯಾತ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಊರು ಸಿಂದಗಿ ತಾಲ್ಲೂಕಿನ ಯರಗಲ್ ಬಿ.ಕೆ ಗ್ರಾಮದಲ್ಲಿ ಭಾನುವಾರ ಮೌನ ಆವರಿಸಿದೆ.

‘ನಮ್ಮೂರ ಜಾಣ ಮಲ್ಲೇಶಪ್ಪ (ಡಾ.ಎಂ.ಎಂ.ಕಲಬುರ್ಗಿ) ಇನ್ನಿಲ್ಲ’ ಎನ್ನುವ ದುಃಖ ಊರ ಹಿರಿಯರಲ್ಲಿ ತುಂಬಿಕೊಂಡಿತ್ತು. ಚಿಕ್ಕಮಕ್ಕಳ ಮುಖದಲ್ಲೂ ‘ಏನೋ ಆಗಿ ಹೋಗಿದೆ’ ಎಂಬ ದುಗುಡೆ ಎದ್ದು ಕಾಣುತ್ತಿತ್ತು.

ಅವರ ಮನೆ ‘ಮಹಾಮನೆ’ಯಲ್ಲಿ ನಿಶ್ಯಬ್ದ ನೆಲೆಸಿತ್ತು. ಮನೆ ಸದಸ್ಯ ವೀರಣ್ಣ ಕಲಬುರ್ಗಿ ದುಃಖತಪ್ತರಾಗಿ ಮನೆ ಹೊರಗೆ ನಿಂತುಕೊಂಡಿದ್ದರು.

‘ಕನ್ನಡ ಶಾಲೆಯಲ್ಲಿ ಓದುತ್ತಿದ್ದಾಗಲೇ ಮಲ್ಲೇಶಪ್ಪ ತುಂಬಾ ಜಾಣನಾಗಿದ್ದ. ನಮ್ಮೂರ ಕೀರ್ತಿ ಪತಾಕೆ ನಾಡಿನಾದ್ಯಂತ ಹಾರಿಸಿದ ಗೆಳೆಯ ಇನ್ನಿಲ್ಲ ಅನ್ನೋದು ಅತ್ಯಂತ ಆಘಾತಕಾರಿಯಾಗಿದೆ ಎಂದು ಅವರ ಸಹಪಾಠಿ ಚನ್ನಬಸಪ್ಪ ಹಂಗರಗಿ ದುಃಖ ತೋಡಿಕೊಂಡರು.

‘ನನ್ನ ಕಾಕಾ ಅಜಾತಶತ್ರು. ಹೀಗೆ ಹತ್ಯೆಯಾಗುವಂಥ ದ್ವೇಷ ಯಾರೊಂದಿಗೂ ಬೆಳೆಸಿಕೊಂಡವರಲ್ಲ’ ಎಂದು ರೈತ ಗುಂಡಣ್ಣ ಕಲಬುರ್ಗಿ, ಶಿವಲಿಂಗ ಕಲಬುರ್ಗಿ ಕಣ್ಣೀರಿಟ್ಟರು.

ಈಡೇರದ ಆಶಯ: ಡಾ.ಕಲಬುರ್ಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬೇಕಿತ್ತು. ಅಲ್ಲದೇ ಗ್ರಾಮದ ಬಳಿ ಇರುವ ಚಾಲುಕ್ಯ ಕಾಲದ ರಾಮತೀರ್ಥ ದೇಗುಲವನ್ನು ಜೀರ್ಣೋದ್ಧಾರ ಮತ್ತು ಸಿಂದಗಿಯಲ್ಲಿ ವೃತ್ತಿರಂಗಭೂಮಿಯ ಮಹಾನ್ ಕಲಾವಿದ ಇದೇ ತಾಲ್ಲೂಕಿನ ಹಂದಿಗನೂರ ಸಿದ್ರಾಮಪ್ಪ ಅವರ ಹೆಸರಿನಲ್ಲಿ ರಂಗಮಂದಿರ ಮಾಡಬೇಕೆನ್ನುವ ಆಶಯ ಹೊಂದಿದ್ದರು ಎಂದು ಗ್ರಾಮಸ್ಥರು ‘ಪ್ರಜಾವಾಣಿ’ಗೆ ತಿಳಿಸಿದರು.

ಗೆಳೆಯರ ಕಂಬನಿ: ಮಾಜಿ ಸಚಿವ, ಸ್ಥಳೀಯ ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿ ಅಧ್ಯಕ್ಷ ಎಂ.ಸಿ.ಮನಗೂಳಿ (ಡಾ.ಕಲಬುರ್ಗಿ ಜೊತೆ ಒಂದೇ ಕೋಣೆಯಲ್ಲಿದ್ದು ಪ್ರೌಢಶಿಕ್ಷಣ ಮುಗಿಸಿದವರು) ಡಾ.ಎಂ.ಎಂ.ಕಲಬುರ್ಗಿ ಹತ್ಯೆ ನಾಗರಿಕ ಸಮಾಜ ತಲೆ ತಗ್ಗಿಸುವಂಥದ್ದಾಗಿದೆ ಎಂದು ಕಂಬನಿ ಮಿಡಿದರು.

Write A Comment