ಕರ್ನಾಟಕ

ಜೆಡಿಎಸ್-ಕಾಂಗ್ರೆಸ್ ಮೈತ್ರಿಯನ್ನು ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ

Pinterest LinkedIn Tumblr

siddarama_y

ಬೆಂಗಳೂರು, ಆ. 29: ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೆ ಪವಿತ್ರ. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡರೆ ಅಪವಿತ್ರವೇ ಎಂದು ಕೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಬಿಎಂಪಿಯಲ್ಲಿ ಜೆಡಿಎಸ್ ಜೊತೆ ಕೈ ಜೋಡಿಸುವುದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಬಿಬಿಎಂಪಿ ನೂತನ ಸದಸ್ಯರ ಸಭೆಯಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ವೇಳೆ ಮುಖ್ಯಮಂತ್ರಿಯವರು, ಜೆಡಿಎಸ್-ಕಾಂಗ್ರೆಸ್ ಮೈತ್ರಿಯನ್ನು ಸಮರ್ಥಿಸಿಕೊಂಡರು. ಇದು ಬೆಂಗಳೂರು ನಗರ ಶಾಸಕರಿಗೆ ಸಂಬಂಧಪಟ್ಟ ವಿಷಯ. ನನಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಬಿಜೆಪಿ ನಾಯಕರು ಟೀಕಿಸುವಂತೆ ಕಾಂಗ್ರೆಸ್ ಜೆಡಿಎಸ್ ಜತ ಕೈ ಜೋಡಿಸಿದರೆ ಅಪವಿತ್ರ ಮೈತ್ರಿ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದರು.

ಅಧಿಕಾರಕ್ಕಾಗಿ ಬಿಜೆಪಿಯವರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಪ್ರಯತ್ನ ನಡೆಸಿಲ್ಲವೇ? ಅದು ಮಾತ್ರ ಪವಿತ್ರ ಹೇಗಾಗುತ್ತದೆ ಎಂದು ತಿರುಗೇಟು ನೀಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಬಿಬಿಎಂಪಿ ಬೆಳವಣಿಗೆಗಳ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಅಮಾಯಕರಂತೆ ಜಾರಿಕೊಂಡರು. ಒಂದು ವೇಳೆ ನಮ್ಮ ಪಕ್ಷದ ಶಾಸಕರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಬಿಬಿಎಂಪಿ ಅಧಿಕಾರ ಹಿಡಿಯುವ ಪ್ರಯತ್ನ ನಡೆಸಿದ್ದರೆ ನನ್ನ ಗಮನಕ್ಕೆ ಬರಬೇಕಿತ್ತು. ಆದರೆ ಈ ವರೆಗೂ ನನಗೆ ಯಾವುದೇ ಮಾಹಿತಿಯಿಲ್ಲ. ಮಾಧ್ಯಮಗಳ ವರದಿ ನಿಜವೇ ಆಗಿದ್ದರೆ ನಮ್ಮ ಶಾಸಕರಿಂದ ವಿವರಣೆ ಪಡೆಯುತ್ತೇನೆ ಎಂದು ಹೇಳಿದರು.

ನಿನ್ನೆಯವರೆಗೂ ಕಂಡೂ ಕಾಣದಂತಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪ್ರಯತ್ನಗಳು ರಾತ್ರಿಯಿಂದೀಚೆಗೆ ಚುರುಕು ಪಡೆದುಕೊಂಡಿವೆ. ಬಿಜೆಪಿ ನಾಯಕರು ಜೆಡಿಎಸ್ ಮುಖಂಡರ ಜೊತೆ ಮಾತುಕತೆಗೆ ಮುಂದಾಗುತ್ತಿದ್ದಂತೆ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ನೇರವಾಗಿ ಅಖಾಡಕ್ಕಿಳಿದಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ 1987-95ರ ನಡುವಿನ ಅವಧಿಯಲ್ಲಿ ಪ್ರಾರಂಭವಾದ ಅನುದಾನಿತ ಪದವಿಪೂರ್ವ ಕಾಲೇಜುಗಳ ಬಾಕಿ ಇರುವ 51 ಉಪನ್ಯಾಸಕರಿಗೆ ವೇತನಾನುದಾನ ಬಿಡುಗಡೆ ಮಾಡುವ ಕುರಿತು ಸಭೆ ನಡೆಸಲು ಸಮಯ ನಿಗದಿಯಾಗಿತ್ತು. ಆನಂತರ ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಿಸಿ ಕೋಲಾರ ಕಿರಿಯ ಕೆರೆಗಳಿಗೆ ತುಂಬಿಸುವ ಏತ ನೀರಾವರಿ ಯೋಜನೆ ಬಗ್ಗೆಯೂ ಸಭೆ ನಡೆಯಬೇಕಿತ್ತು. ಆದರೆ ಬಿಜೆಪಿ ಹೆಚ್ಚು ಚುರುಕಾಗುತ್ತಿದ್ದಂತೆ ತಮ್ಮ ಅಧಿಕೃತ ಕಾರ್ಯಕ್ರಮಗಳನ್ನು ದಿಢೀರ್ ರದ್ದುಪಡಿಸಿದ ಮುಖ್ಯಮಂತ್ರಿ ಅವರು ಕೆಪಿಸಿಸಿ ಕಚೇರಿಗೆ ಆಗಮಿಸಿ ಪಕ್ಷದ ಬಿಬಿಎಂಪಿ ಸದಸ್ಯರ ಜೊತೆ ಚರ್ಚೆ ಆರಂಭಿಸಿದ್ದಾರೆ.

ಇನ್ನೊಂದೆಡೆ ಪಕ್ಷೇತರ ಬಿಬಿಎಂಪಿ ಸದಸ್ಯರನ್ನು ಶಾಸಕ ಬೈರತಿ ಬಸವರಾಜ್ ಕೇರಳ ರಾಜ್ಯ ಪ್ರವಾಸಕ್ಕೆ ಕಳುಹಿಸಿದ್ದಾರೆ ಎಂಬ ಮಾಹಿತಿಗಳಿವೆ. ಶತಾಯಗತಾಯ ಅಧಿಕಾರ ಹಿಡಿಯಲೇಬೇಕೆಂಬ ಪ್ರಯತ್ನದಲ್ಲಿರುವ ಕಾಂಗ್ರೆಸ್ ಶಾಸಕರು, ಸಂಸದರು, ರಾಜ್ಯಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರ ಬಲವನ್ನು ಕ್ರೋಢೀಕರಿಸಿಕೊಂಡು ಜೆಡಿಎಸ್ ಹಾಗೂ ಪಕ್ಷೇತರ ಮೈತ್ರಿಯೊಂದಿಗೆ ಮೇಯರ್ ಚುನಾವಣೆ ಗೆಲ್ಲುವ ಕಸರತ್ತಿಗೆ ಕೈ ಹಾಕಿದೆ.

Write A Comment