ಬೆಂಗಳೂರು, ಆ.29: ಬಿಬಿಎಂಪಿ ಅಧಿಕಾರ ಗದ್ದುಗೆ ಏರಲು ತೀವ್ರ ಪೈಪೋಟಿಗೆ ಬಿದ್ದಿರುವ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು, ಜೆಡಿಎಸ್ ಸಖ್ಯ ಬೆಳೆಸಲು ದುಂಬಾಲು ಬಿದ್ದಿದ್ದಾರೆ.
ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳ ಮೇಲೆ ಕಣ್ಣಿಟ್ಟಿರುವ ಎರಡೂ ರಾಷ್ಟ್ರೀಯ ಪಕ್ಷಗಳು, ಜೆಡಿಎಸ್‌ನ `ದಳ`ಪತಿಗಳಿಗೆ ಗಾಳ ಹಾಕುತ್ತಿದ್ದಾರೆ. ಜೆಡಿಎಸ್ ನಾಯಕರೇ `ಕಿಂಗ್ ಮೇಕರ್`ಗಳಾಗಿದ್ದು, ಅವರು ಕೈಗೊಳ್ಳುವ ನಿರ್ಧಾರ ಬಿಬಿಎಂಪಿ ರಾಜಕೀಯ ಭವಿಷ್ಯ ನಿರ್ಧರಿಸಲಿದೆ.
ಒಂದೆಡೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಇಂದು ಬೆಳಿಗ್ಗೆ ಜೆಡಿಎಸ್‌ನ ಸರ್ವೋಚ್ಛ ನಾಯಕ ಎಚ್.ಡಿ. ದೇವೇಗೌಡರನ್ನು ಅವರ ಪದ್ಮನಾಭನಗರದ ನಿವಾಸದಲ್ಲಿ ಭೇಟಿ ಮಾಡಿ, `ಮೈತ್ರಿ` ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ.
ಮತ್ತೊಂದೆಡೆ ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್, ಚಿಕ್ಕಮಗಳೂರಿನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಜೆಡಿಎಸ್ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.
ಈ ನಡುವೆ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಪಕ್ಷದ ಕಛೇರಿಯಲ್ಲಿಂದು ನೂತನ ಕಾರ್ಪೊರೇಟರ್‌ಗಳು ಸಭೆ ಸೇರಿ ಜೆಡಿಎಸ್ ಜತೆ ಮೈತ್ರಿ, ಅಧಿಕಾರ ಹಂಚಿಕೆ ಕುರಿತು ಸುದೀರ್ಘವಾಗಿ ಚರ್ಚಿಸಿದರು.
ಜೆಡಿಎಸ್ ಜತೆ ಸೇರಿ ಬಿಬಿಎಂಪಿ ಅಧಿಕಾರ ಹಿಡಿಯಬೇಕೆಂಬ ಉತ್ಸಾಹದಲ್ಲಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ದಿನೇಶ್ ಗುಂಡೂರಾವ್ ಅವರಿಂದು ಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು `ಕಾವೇರಿ`ಯಲ್ಲಿ ಭೇಟಿ ಮಾಡಿ ಇದುವರೆಗಿನ ವಿದ್ಯಮಾನಗಳು, ಮುಂದೆ ಅನುಸರಿಸಬೇಕಾದ ತಂತ್ರಗಾರಿಕೆ ಕುರಿತು ಚರ್ಚಿಸಿದರು.
ಗುಟ್ಟುಬಿಡದ ದೇವೇಗೌಡರು
ಕಾಂಗ್ರೆಸ್ ಅಥವಾ ಬಿಜೆಪಿಗೆ ಬೆಂಬಲ ನೀಡುವ ಸಂಬಂಧ ಮಾಜಿ ಪ್ರಧಾನಿ ದೇವೇಗೌಡ ಅಥವಾ ಕುಮಾರಸ್ವಾಮಿ ಅವರಿನ್ನೂ ಬಹಿರಂಗವಾಗಿ ಏನನ್ನೂ ಹೇಳಿಲ್ಲ.
ಇಂದು ಬೆಳಿಗ್ಗೆ ತಮ್ಮನ್ನು ಭೇಟಿ ಮಾಡಿದ ಕೇಂದ್ರ ಸಚಿವ ಸದಾನಂದಗೌಡರೊಂದಿಗೆ ಸಮಾಲೋಚನೆ ನಡೆಸಿದ ದೇವೇಗೌಡರು, ಸೆ. 2ರ ನಂತರ ಪಕ್ಷದ ತೀರ್ಮಾನ ತಿಳಿಸುವುದಾಗಿ ಹೇಳುವ ಮೂಲಕ ಮನದಾಳದ ರಹಸ್ಯ ಕಾಪಾಡಿಕೊಂಡಿದ್ದಾರೆ.
ದೇವೇಗೌಡರ ಭೇಟಿ ನಂತರ ಸುದ್ದಿಗಾರರ ಜತೆ ಮಾತನಾಡಿದ ಸದಾನಂದಗೌಡ, ಬಿಬಿಎಂಪಿ ಅಧಿಕಾರ ಹಿಡಿಯುವ ಸಂಬಂಧ ನಡೆದಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ದೇವೇಗೌಡರೊಂದಿಗೆ ಚರ್ಚಿಸಿದ್ದೇನೆ. ಮೈತ್ರಿ ವಿಚಾರದಲ್ಲಿ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಸೆ. 2ರ ನಂತರ ತಿಳಿಸುವೆ ಎಂದು ಹೇಳಿದ್ದಾರೆಂದರು.
ಬಿಜೆಪಿ ಕಛೇರಿಯಲ್ಲಿ ಹಿರಿಯ ಮುಖಂಡರ ಸಭೆ
ಜೆಡಿಎಸ್ ಜತೆ ಸೇರಿ ಬಿಬಿಎಂಪಿ ಅಧಿಕಾರ ಹಂಚಿಕೆ ಸಂಬಂಧ ಬಿಜೆಪಿ ಕಛೇರಿಯಲ್ಲಿ ಹಿರಿಯ ಮುಖಂಡರು ಹಾಗೂ ಪಾಲಿಕೆಗೆ ಆಯ್ಕೆಯಾದ ಸದಸ್ಯರು ಸುದೀರ್ಘ ಸಮಾಲೋಚನೆ ನಡೆಸಿದರು. ಸಭೆಯಲ್ಲಿ ಹಾಜರಿದ್ದ ಕೇಂದ್ರ ಸಚಿವ ಸದಾನಂದಗೌಡ ಅವರು, ದೇವೇಗೌಡರ ಜತೆ ನಡೆಸಿದ ಸಂಧಾನ ಮಾತುಕತೆ ವಿವರಗಳನ್ನು ಸಭೆಯ ಮುಂದಿಟ್ಟರು.
ಬಿಬಿಎಂಪಿ ಅಧಿಕಾರವನ್ನು ಶತಾಯ-ಗತಾಯ ಹಿಡಿಯಲೇಬೇಕೆಂಬ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಪಕ್ಷೇತರ ಸದಸ್ಯರ ಬೆಂಬಲ ಗಳಿಸುವ ಸಂಬಂಧ ಕಾರ್ಯತಂತ್ರ ರೂಪಿಸುವ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಗಿದೆ.
ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಹಾಜರಿದ್ದ ನಗರ ವ್ಯಾಪ್ತಿಯ ಸಚಿವರು, ಶಾಸಕರು, ಬಿಬಿಎಂಪಿ ಅಧಿಕಾರ ಹಿಡಿಯಲು ಜೆಡಿಎಸ್ ನಾಯಕರ ಬೆಂಬಲ ಪಡೆಯಲು ಅನುಸರಿಸಬೇಕಾದ ಕಾರ್ಯತಂತ್ರ ಕುರಿತು ಚರ್ಚಿಸಿದರು.
ಬಿಜೆಪಿ ತೆಕ್ಕೆಗೆ ಬಿಬಿಎಂಪಿ ಹೋಗದಂತೆ ಮಾಡಲು ಪಕ್ಷೇತರ ಸದಸ್ಯರ ಬೆಂಬಲ ಗಳಿಸಬೇಕೆಂಬ ವಿಚಾರವೂ ಪ್ರಸ್ತಾಪವಾಯಿತೆನ್ನಲಾಗಿದೆ.
ಒಟ್ಟಾರೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ವಲಯದಲ್ಲಿ ಬಿಬಿಎಂಪಿ ವಿಚಾರವೇ ದಿನವಿಡೀ ಚರ್ಚೆಯ ವಿಷಯವಾಗಿತ್ತು. ಹೆಜ್ಜೆ ಹೆಜ್ಜೆಗೂ ಒಂದೊಂದು ಬೆಳವಣಿಗೆ, ರಾಜಕೀಯ ತಿರುವು ಪಡೆದುಕೊಳ್ಳುತ್ತ, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆಡೆ ಮಾಡಿದೆ.