ನವದೆಹಲಿ: ಕಳಸಾ ಬಂಡೂರಿ ಮತ್ತು ಮಹದಾಯಿ ಯೋಜನೆ ಜಾರಿ ವಿಚಾರವಾಗಿ ಕರ್ನಾಟಕದ ಸರ್ವ ಪಕ್ಷ ನಿಯೋಗ ಸೋಮವಾರ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಿಯೋಗಕ್ಕೆ ಪ್ರಧಾನಿ ಮೋದಿಯವರ ಪ್ರತಿಕ್ರಿಯೆ ನಿರಾಶೆ ಮೂಡಿಸಿದೆ.
ಇದು ಮೂರು ರಾಜ್ಯಗಳ ವಿಚಾರವಾದ್ದರಿಂದ ತಾನು ಒಂದು ರಾಜ್ಯದ ಪರವಾಗಿ ನಿಲುವು ತೆಗೆದುಕೊಳ್ಳಲು ಆಗುವುದಿಲ್ಲ. ಮೂರು ರಾಜ್ಯಗಳ ಸರ್ವ ಪಕ್ಷಗಳ ನಾಯಕರನ್ನು ಕರೆತನ್ನಿ. ಆನಂತರ ಬೇಕಾದರೆ ಚರ್ಚಿಸೋಣ ಎಂದು ಕರ್ನಾಟಕದ ನಿಯೋಗಕ್ಕೆ ಪ್ರಧಾನಿಗಳು ನಿಷ್ಠುರವಾಗಿ ಹೇಳಿ ಕಳುಹಿಸಿದ್ದಾರೆ.
ಈ ನಿಯೋಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಜಗದೀಶ್ ಶೆಟ್ಟರ್, ಕೆಎಸ್ ಈಶ್ವರಪ್ಪ, ಹೆಚ್.ಡಿ. ರೇವಣ್ಣ ಮೊದಲಾದವರಿದ್ದರು. ದೆಹಲಿಯಲ್ಲಿ ಪ್ರಧಾನಿಯವರ 7 ಆರ್ ಸಿಆರ್ ನಿವಾಸಕ್ಕೆ ಹೋಗುವ ಮುನ್ನ ಕರ್ನಾಟಕ ಭವನದಲ್ಲಿ ಎಲ್ಲ ಪಕ್ಷಗಳ ನಾಯಕರು ಸಭೆ ಸೇರಿ ಮಾತುಕತೆ ನಡೆಸಿದ್ದರು. ಆದರೆ, ಪ್ರಧಾನಿಯಿಂದ ಇಂಥ ಪ್ರತಿಕ್ರಿಯೆ ಬರುತ್ತದೆಂದು ಯಾವ ನಾಯಕರೂ ಅಂದಾಜು ಮಾಡಿರಲಿಲ್ಲ.
ಮಹಾರಾಷ್ಟ್ರ ಮತ್ತು ಗೋವಾದ ಕಾಂಗ್ರೆಸ್ ಮುಖಂಡರೊಂದಿಗೆ ಮಾತುಕತೆ ನಡೆಸಿ ಒಂದು ನಿರ್ಧಾರಕ್ಕೆ ಬನ್ನಿ ಎಂದು ಮೋದಿಯವರು ರಾಜ್ಯದ ಕಾಂಗ್ರೆಸ್ಸಿಗರಿಗೆ ಹೇಳಿರುವುದು ತಿಳಿದುಬಂದಿದೆ. ಅದೇ ರೀತಿ ಬಿಜೆಪಿಯವರಿಗೂ ಆಯಾ ರಾಜ್ಯಗಳ ಬಿಜೆಪಿ ಮುಖಂಡರೊಂದಿಗೆ ಚರ್ಚಿಸಲು ಮೋದಿ ಸಲಹೆ ನೀಡಿದ್ದಾರೆನ್ನಲಾಗಿದೆ. ಮೋದಿಯವರ ಈ ಪ್ರತಿಕ್ರಿಯೆಗೆ ಬಸವರಾಜ್ ಹೊರಟ್ಟಿ ಮತ್ತಿತರ ರಾಜ್ಯ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ.