ಬೆಳಗಾವಿ: ಬೆಳಗಾವಿಯ ನಂದಗಡ ಗ್ರಾಮದಲ್ಲಿ ಹನುಮ ದೇವರ ಮೂರ್ತಿಯೊಂದು ಕಣ್ಣುಬಿಟ್ಟಿರುವ ಕುರಿತು ವದಂತಿಗಳು ಹಬ್ಬಿದ್ದು, ಮೂರ್ತಿಯನ್ನು ನೋಡಲು ಸುತ್ತಮುತ್ತಲಿನ ಗ್ರಾಮದಿಂದ ಜನಸಾಗರವೇ ಹರಿದುಬರುತ್ತಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ನಂದಗಡ ಗ್ರಾಮದ ಬಳಿ ಇರುವ ಆಲದ ಮರದ ಕೆಳಗೆ ಪ್ರತಿಷ್ಠಾಪಿಸಲಾಗಿರುವ ಆಂಜನೇಯನ ಮೂರ್ತಿ ಕಣ್ಣು ತೆರೆದಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ವಿಸ್ಮಯವನ್ನು ನೋಡಲು ಸುತ್ತಮುತ್ತಲಿನ ನೂರಾರು ಹಳ್ಳಿಗಳಿಂದ ಜನಸಾಗರವೇ ಹರಿದುಬರುತ್ತಿದೆ.
ಮೂಲಗಳ ಪ್ರಕಾರ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳದ ಸಮೀಪದಲ್ಲಿಯೇ ಈ ಮೂರ್ತಿ ಇದ್ದು, 4 ವರ್ಷಗಳ ಹಿಂದೆ ಭಕ್ತರೊಬ್ಬರು ಈ ಮೂರ್ತಿಯನ್ನು ಆಲದ ಮರದೆ ಕೆಳಗೆ ಇಟ್ಟು ಹೋಗಿದ್ದರು ಎಂದು ತಿಳಿದುಬಂದಿದೆ. ಅಂದಿನಿಂದ ಈ ಮೂರ್ತಿಗೆ ಪ್ರತಿನಿತ್ಯ ಪೂಜೆ ನಡೆಯುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಗುರುವಾರ ಬೆಳಗ್ಗೆ ಭಕ್ತರೊಬ್ಬರು ಈ ಮೂರ್ತಿಗೆ ಪೂಜೆ ಸಲ್ಲಿಸುತ್ತಿದ್ದ ವೇಳೆ ಹನುಮ ಮೂರ್ತಿ ಇದ್ದಕ್ಕಿದ್ದಂತೆಯೇ ಕಣ್ಣು ತೆರೆಯಿತು ಎಂದು ವದಂತಿ ಹಬ್ಬಿದ್ದು, ವದಂತಿಯನ್ನು ನಂಬಿದ ಜನ ಆಂಜನೇಯನ ವಿಗ್ರಹ ನೋಡಲು ತಂಡೋಪತಂಡವಾಗಿ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ.
ಇನ್ನು ವಿಗ್ರಹ ಕಣ್ಣು ತೆರೆದಿದೆ ಎನ್ನುವ ವಿಚಾರವನ್ನು ಅದೇ ಗ್ರಾಮದ ಹೆಸರು ಹೇಳಲಿಚ್ಛಿಸದ ಕೆಲ ಗ್ರಾಮಸ್ಥರು ನಂಬಲು ಸಿದ್ಧರಿಲ್ಲ. ವಿಗ್ರಹ ತುಂಬಾ ಹಳೆಯದ್ದಾಗಿದ್ದು, ನಿತ್ಯ ಎಣ್ಣೆಯಿಂದ ಅಭಿಷೇಕ ಮಾಡಲಾಗುತ್ತಿತ್ತು. ಬಹುಶಃ ವಿಗ್ರಹವನ್ನು ಮತ್ತೆ ಸ್ವಚ್ಛವಾಗಿ ತೊಳೆದರೆ ವಿಗ್ರಹ ಮತ್ತೆ ತನ್ನ ಹಳೆಯ ರೂಪಕ್ಕೆ ಮರಳಬಹುದು ಎಂದು ಹೇಳಿದ್ದಾರೆ.
ಇದೀಗ ಈ ವಿಗ್ರಹದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಮತ್ತು ವಾಟ್ಸಅಪ್ ನಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.