ಬೆಂಗಳೂರು: ಅನಾಥಾಶ್ರಮದಲ್ಲಿ ಆಶ್ರಯ ಪಡೆದಿದ್ದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಸೋಲದೇವನಹಳ್ಳಿ ಪೊಲೀಸರು ಅನಾಥಾಶ್ರಮದ ಮಾಲೀಕನನ್ನು ಬಂಧಿಸಿದ್ದಾರೆ.
ವಿಜಯ್ ರಾಜ್ (35) ಬಂಧಿತ ಆರೋಪಿ. ಸೋಲದೇವನಹಳ್ಳಿ ಸಮೀಪದ ಚಿಕ್ಕಸಂದ್ರದಲ್ಲಿರುವ 12 ವರ್ಷದ ಬಾಲಕಿಗೆ ಈತ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರ ಎಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ಬಾಲಕಿ ಕಳೆದ 3 ವರ್ಷದಿಂದ ಅನಾಥಾಶ್ರಮದಲ್ಲೇ ಆಶ್ರಯ ಪಡೆದು ಹತ್ತಿರದ ಖಾಸಗಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಳು. ಈಕೆಗೆ ತಂದೆ ಇಲ್ಲ. ತಾಯಿಗೆ ಮಗಳನ್ನು ಸಾಕಿ ಶಿಕ್ಷಣ ಕೊಡಿಸುವಷ್ಟು ಶಕ್ತಿಯಿಲ್ಲದ್ದರಿಂದ ಆಕೆಯನ್ನು ಅನಾಥಾಶ್ರಮದಲ್ಲೇ ಬಿಟ್ಟಿದ್ದರು. ಅನಾಥಾಶ್ರಮದಲ್ಲಿ ಶಿಕ್ಷಣದ ಜತೆಗೆ ಉಚಿತವಾಗಿ ಊಟ, ವಸತಿ ನೀಡಲಾಗುತ್ತಿತ್ತು.
ವಿಜಯ್‌ರಾಜ್ 2004ರಿಂದ ಅನಾಥಾಶ್ರಮವನ್ನು ನಡೆಸುತ್ತಿದ್ದ. ಆಶ್ರಮದಲ್ಲಿ ಒಟ್ಟು 32 ಬಾಲಕಿಯರಿದ್ದರು. ಕಳೆದ 2 ತಿಂಗಳಿಂದ ಈತ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ವಿಜಯ್‌ರಾಜ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಅಧಿಕಾರಿಗಳು, ಉಳಿದ ಬಾಲಕಿಯರಿಗೂ ಲೈಂಗಿಕ ಕಿರುಕುಳ ನೀಡಿದ್ದನೇ ಎನ್ನುವ ಬಗ್ಗೆ ಮಾಹಿತಿ ಸಂಗ್ರಹಿಸುವ ಕಾರ್ಯದಲ್ಲೂ ನಿರತರಾಗಿದ್ದಾರೆ.
ಓಡಿ ಬಂದ ಯುವತಿ
ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿದ್ದ ಬಾಲಕಿ ಬುಧವಾರ ಆಶ್ರಮದಿಂದ ಹೊರಗೆ ಓಡಿ ಬಂದಿದ್ದಳು. ಹೊರಗೆ ಬಂದು ಎಲ್ಲಿಗೆ ಹೋಗಬೇಕು ಎನ್ನುವುದನ್ನು ತಿಳಿಯದೆ ಅಳುತ್ತಿದ್ದ ಬಾಲಕಿಯನ್ನು ಸ್ಥಳೀಯ ಮಹಿಳೆಯೊಬ್ಬರು ಗಮನಿಸಿ ಆಕೆಯನ್ನು ಸಮೀಪದ ಠಾಣೆಗೆ ಕರೆದೊಯ್ದು ವಿಚಾರಿಸಿದಾಗ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಲೀಕನ ಬಂಧನದ ನಂತರ ಆಕೆಯನ್ನು ಪುನಃ ಅನಾಥಾಶ್ರಮಕ್ಕೆ ಕಳುಹಿಸುವ ಪ್ರಯತ್ನ ಮಾಡಿದರಾದರೂ ಆಕೆ ಅದಕ್ಕೆ ಒಪ್ಪಲಿಲ್ಲ. ರಾಮಮೂರ್ತಿನಗರದಲ್ಲಿ ಕೂಲಿ ಕೆಲಸ ಮಾಡುವ ಆಕೆಯ ತಾಯಿಯನ್ನು ಹುಡುಕುವ ಪ್ರಯತ್ನ ನಡೆಯುತ್ತಿದೆ. ಸದ್ಯ ಬಾಲಕಿ ಬಾಲಮಂದಿರದಲ್ಲಿ ಇದ್ದಾಳೆ. ಬಾಲಕಿಯ ತಾಯಿ ಸಿಕ್ಕ ಬಳಿಕ ಅವರ ಮೂಲಕ ಬಾಲಕಿಯನ್ನು ಇನ್ನಷ್ಟು ವಿಚಾರಣೆಗೆ ಒಳಪಡಿಸಿ ಮಾಹಿತಿ ಸಂಗ್ರಹಿಸಲಾಗುವುದು ಎಂದು ತಿಳಿಸಿರುವ ಸೊಲದೇವನಹಳ್ಳಿ ಠಾಣೆ ಪೊಲೀಸರು ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.