ಹೊಸದಿಲ್ಲಿ: ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಹೊಂಚು ಹಾಕುತ್ತ ತಲೆ ಮರೆಸಿಕೊಂಡು ತಿರುಗುತ್ತಿದ್ದ ಪಾಕಿಸ್ತಾನ ಮೂಲದ ಇಬ್ಬರು ಲಷ್ಕರೆ ಉಗ್ರರನ್ನು ದಕ್ಷಿಣ ಗುಜರಾತ್‌ನ ತಾಪಿಯಲ್ಲಿ ಬುಧವಾರ ಬಂಧಿಸಲಾಗಿದೆ.
ಉಧಂಪುರ ದಾಳಿಯಲ್ಲಿ ಜೀವಂತವಾಗಿ ಸೆರೆಸಿಕ್ಕ ಉಗ್ರ ನಾವೇದ್ ಯಾಕೂಬ್ ಮಂಪರು ಪರೀಕ್ಷೆ ವೇಳೆ ಬಾಯಿಬಿಟ್ಟಿದ್ದ ವಿವರಗಳನ್ನು ಆಧರಿಸಿ ಈ ಇಬ್ಬರು ಉಗ್ರರ ರೇಖಾಚಿತ್ರಗಳನ್ನು ಮಂಗಳವಾರವಷ್ಟೇ ಬಿಡುಗಡೆ ಮಾಡಲಾಗಿತ್ತು.
ಪಂಜಾಬ್‌ನ ದೀನಾನಗರ ದಾಳಿಗೂ ಮುಂಚೆ ಭಾರತಕ್ಕೆ ನಾವೇದ್ ಜತೆಯೇ ಇವರು ಭಾರತಕ್ಕೆ ನುಸುಳಿದ್ದರು. ಮುಂಬಯಿ ದಾಳಿಯ ರೀತಿ ಭಾರತದಲ್ಲಿ ಮತ್ತೊಂದು ಸುತ್ತಿನ ರಕ್ತಪಾತ ನಡೆಸಲು ಇವರು ಹೊಂಚು ಹಾಕುತ್ತಿದ್ದರು.
ನಿಲ್ಲದ ಪಾಕ್ ತಗಾದೆ
ಭಾರತ ಮತ್ತು ಪಾಕಿಸ್ತಾನ ನಡುವಿನ ಶಾಂತಿ ಮಾತುಕತೆಗೆ ಪಾಕ್ ಕಡೆಯಿಂದ ವಿಘ್ನ ಎದುರಾಗಿದೆ. ಇದೇ ಭಾನುವಾರ ಆಯೋಜನೆಯಾಗಿರುವ ಉಭಯ ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ (ಎನ್‌ಎಸ್‌ಎ) ಮಟ್ಟದ ಮಾತುಕತೆಗೂ ಮುನ್ನ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರಿಗೆ ಮಾತುಕತೆ ಆಹ್ವಾನವನ್ನು ಪಾಕ್ ನೀಡಿದೆ. ಇದರಿಂದ ಕೆಂಡವಾಗಿರುವ ಭಾರತ, ಪಾಕ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್ ಅವರು ಹುರಿಯತ್ ನಾಯಕರನ್ನು ಭೇಟಿ ಮಾಡಿದ್ದೇ ಆದರೆ ಮಾತುಕತೆ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದೆ. ಹಾಗೆಯೇ, ಪಾಕ್ ಆಹ್ವಾನವನ್ನು ಧಿಕ್ಕರಿಸುವಂತೆ ಹುರಿಯತ್ ನಾಯಕರಿಗೆ ಸೂಚಿಸಿದೆ.
ಇತ್ತೀಚೆಗೆ ರಷ್ಯಾದ ಯುಫಾದಲ್ಲಿ ನಡೆದ ಬ್ರಿಕ್ಸ್ ಮತ್ತು ಶಾಂಘೈ ವ್ಯಾಪಾರ ಸಹಕಾರ ಒಕ್ಕೂಟದ ಸಮಾವೇಶದ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕ್ ಪ್ರಧಾನಿ ನವಾಜ್ ಷರೀಫ್ ಮಾತುಕತೆ ನಡೆಸಿದ್ದು, ಎನ್‌ಎಸ್‌ಎ ಮಟ್ಟದ ಸಭೆ ಆಯೋಜಿಸಲು ನಿರ್ಧರಿಸಿದ್ದರು.
ಪಂಜಾಬ್‌ನ ದೀನಾನಗರ ಹಾಗೂ ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ನಡೆದ ಉಗ್ರ ದಾಳಿ ಹಾಗೂ ಗಡಿಯಲ್ಲಿ ನಿಲ್ಲದ ಗುಂಡಿನ ದಾಳಿ ಹಿನ್ನೆಲೆಯಲ್ಲಿ ಭಾರತ ಹಾಗೂ ಪಾಕ್‌ನ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ಧೋವಲ್ ಹಾಗೂ ಸರ್ತಾಜ್ ಅಜೀಜ್ ನಡುವೆ ಆ.23ರಂದು ನಡೆಯುವ ಸಭೆ ಮಹತ್ವದ್ದಾಗಿದೆ.
ಆದರೆ, ಈ ಸಭೆಗೂ ಮುನ್ನ ದಿಲ್ಲಿಯಲ್ಲಿರುವ ಪಾಕ್ ರಾಯಭಾರಿ ಅಬ್ದುಲ್ ಬಸಿತ್ ಅವರು ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರಾದ ಸಯ್ಯದ್ ಅಲಿ ಶಾ ಗಿಲಾನಿ, ಮಿರ್‌ವಾಯಿಜ್ ಉಮರ್ ಫಾರೂಕ್ ಅವರನ್ನು ಭೇಟಿಗೆ ಆಹ್ವಾನಿಸಿರುವುದು ಭಾರತಕ್ಕೆ ಕಿರಿಕಿರಿ ತರಿಸಿದೆ. ಆದರೂ, ಮಾತುಕತೆ ಸಫಲವಾಗಲು ತಾನು ಪ್ರಯತ್ನಿಸುವುದಾಗಿ ಭಾರತ ಹೇಳಿದೆ.
ತನ್ನ ಎಚ್ಚರಿಕೆಯನ್ನೂ ಮೀರಿ ಸರ್ತಾಜ್ ಅವರು ಹುರ‌್ರಿಯತ್ ನಾಯಕರ ಜತೆ ಮಾತುಕತೆಗೆ ಮುಂದಾದರೆ ಆ ಕ್ಷಣದ ಸನ್ನಿವೇಶಕ್ಕೆ ತಕ್ಕಂತೆ ನಿರ್ಧಾರ ಕೈಗೊಳ್ಳುವುದಾಗಿ ಸರಕಾರದ ಮೂಲಗಳು ಹೇಳಿವೆ. ಇಷ್ಟಾದರೂ ಪಾಕ್ ರಾಯಭಾರ ಕಚೇರಿಯು ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.
ಪಾಕ್‌ನ್ ಇಂಥ ವರ್ತನೆಯಿಂದಲೇ ಕಳೆದ ವರ್ಷದ ಜುಲೈನಲ್ಲಿ ನಡೆಯಬೇಕಿದ್ದ ಉಭಯ ದೇಶಗಳ ವಿದೇಶಾಂಗ ಕಾರ‌್ಯದರ್ಶಿಗಳ ಮಟ್ಟದ ಮಾತುಕತೆ ಕೊನೆ ಗಳಿಗೆಯಲ್ಲಿ ರದ್ದುಗೊಂಡಿತ್ತು. ಸಭೆಗೂ ಮುನ್ನ ಪಾಕ್ ಹೈಕಮಿಷನರ್ ಅಬ್ದುಲ್ ಬಸಿತ್ ಅವರು ಹುರಿಯತ್ ನಾಯಕರನ್ನು ಮನೆಗೆ ಕರೆಸಿಕೊಂಡು ಮಾತನಾಡಿದ್ದರು. ಈ ಬಾರಿಯೂ ಕೊನೆ ಕ್ಷಣದವರೆಗೂ ಕಾದು ನೋಡುವ ತಂತ್ರವನ್ನು ಭಾರತ ಸರಕಾರ ಅನುಸರಿಸಲಿದೆ ಎಂದು ಮೂಲಗಳು ಹೇಳಿವೆ. —
ಆಹ್ವಾನ ಒಪ್ಪಿಕೊಂಡ ನಾಯಕರು
ಶ್ರೀನಗರ: ಪಾಕ್ ಹೈಕಮಿಷನರ್ ದೂರವಾಣಿ ಮೂಲಕ ನೀಡಿದ ಆಹ್ವಾನವನ್ನು ಹುರಿಯತ್ ನಾಯಕ ಗಿಲಾನಿ ಒಪ್ಪಿಕೊಂಡಿದ್ದು, ಅವರು ಮಾತುಕತೆಗೆ ದಿಲ್ಲಿಗೆ ತೆರಳಲಿದ್ದಾರೆ. ಇತರ ನಾಯಕರಾದ ಮಿರ್‌ವಾಯಿಜ್ ಉಮರ್ ಫಾರೂಕ್, ಯಾಸಿನ್ ಮಲಿಕ್ ಮತ್ತು ನಯೀಮ್ ಖಾನ್ ಸಹ ಆಹ್ವಾನ ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ. ಇತ್ತೀಚೆಗೆ ಈದ್ ಹಬ್ಬದ ನಿಮಿತ್ತ ದಿಲ್ಲಿಯಲ್ಲಿರುವ ಪಾಕ್ ರಾಯಭಾರ ಕಚೇರಿ ನೀಡಿದ್ದ ಔತಣಕೂಟವನ್ನು ಗಿಲಾನಿ ನಿರಾಕರಿಸಿದ್ದರು. ಯುಫಾ ಭೇಟಿಯ ವೇಳೆ ಮೋದಿ-ಷರೀಫ್ ಅವರು ಕಾಶ್ಮೀರ ವಿಷಯ ಚರ್ಚಿಸಲಿಲ್ಲ ಎಂದು ಮುನಿಸಿಕೊಂಡು ಈದ್ ಆಹ್ವಾನವನ್ನು ಗಿಲಾನಿ ನಿರಾಕರಿಸಿದ್ದರು. —
ಮಧ್ಯಸ್ಥಿಕೆಗೆ ಪಾಕ್ ಆಗ್ರಹ
ವಿಶ್ವಸಂಸ್ಥೆ: ಕಾಶ್ಮೀರ ವಿವಾದದ ಇತ್ಯರ್ಥಕ್ಕೆ ಪಾಕ್ ಮತ್ತೆ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಗೆ ಆಗ್ರಹಿಸಿದೆ. ವಿಶ್ವಸಂಸ್ಥೆಯಲ್ಲಿ ವಿಷಯ ಪ್ರಸ್ತಾಪಿಸಿ ಅಂತಾರಾಷ್ಟ್ರೀಯ ಸಮುದಾಯ ಮತ್ತು ಇಸ್ಲಾಮಿಕ್ ಸಹಕಾರ ಸಂಸ್ಥೆಯ ಮಧ್ಯಪ್ರವೇಶಕ್ಕೆ ಒತ್ತಾಯಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಆಯೋಜಿಸಿದ್ದ ಪ್ರಾದೇಶಿಕ ಸಂಸ್ಥೆಗಳು ಮತ್ತು ಸಮಕಾಲಿನ ಜಾಗತಿಕ ಭದ್ರತಾ ಸವಾಲುಗಳ ಕುರಿತ ಚರ್ಚೆ ವೇಳೆ ಪಾಕ್ ಪ್ರತಿನಿಧಿ ಮಲೀಹಾ ಲೋಧಿ ಅವರು ಈ ಒತ್ತಾಯ ಮಾಡಿದ್ದಾರೆ. ”ಜಾಗತಿಕ ಶಾಂತಿ ಮತ್ತು ಸಮೃದ್ಧಿಯ ಪ್ರಚಾರಕ್ಕೆಇಸ್ಲಾಮಿಕ್ ಸಹಕಾರ ಸಂಸ್ಥೆಯ 57 ಸದಸ್ಯರು ಶ್ರಮಿಸಲು ಸಿದ್ಧರಿದ್ದಾರೆ. ವಿಶ್ವಸಂಸ್ಥೆ ಮತ್ತು ವಿಶ್ವ ಸಮುದಾಯ ಒಗ್ಗೂಡಿದರೆ ಕಾಶ್ಮೀರ ವಿವಾದ ಸೇರಿದಂತೆ ಪಾಲೆಸ್ತೀನ್ ಸಮಸ್ಯೆ ಮತ್ತು ಮಧ್ಯಪ್ರಾಚ್ಯದಲ್ಲಿನ ಸಂಘರ್ಷಗಳನ್ನು ತಡೆಯಬಹುದು. ಹೀಗಾಗಿ ವಿಶ್ವಸಂಸ್ಥೆಯು ಸಂಧಾನಕ್ಕೆ ಮುಂದಾಗಬೇಕು,” ಎಂದು ಅವರು ಹೇಳಿದ್ದಾರೆ. —
ನಿಲ್ಲದ ಗುಂಡಿನ ಮೊರೆತ
ಜಮ್ಮು: ಕಾಶ್ಮೀರ ಗಡಿಯಲ್ಲಿ ಪಾಕ್ ಪಡೆಗಳು ಕದನ ವಿರಾಮ ಮುಂದುವರಿಸಿದ್ದು, ಮಂಗಳವಾರ ರಾತ್ರಿ ಆರಂಭಗೊಂಡ ಗುಂಡಿನ ಚಕಮಕಿ ಬುಧವಾರವೂ ಮುಂದುವರಿದಿದೆ. ಎರಡು ದಿನಗಳಿಂದ ಜಮ್ಮುವಿನ ಆರ್.ಎಸ್.ಪುರ ಹಾಗೂ ಅರ್ನಿಯಾ ವಲಯದಲ್ಲಿ ಗುಂಡಿನ ದಾಳಿ ನಡೆಸಿದ್ದ ಪಾಕ್ ಪಡೆಗಳು ಬುಧವಾರ,ಫೂಂಛ್ ಜಿಲ್ಲೆಯ ಬಾಲ್‌ಕೋಟ್ ಮತ್ತು ಫೂಂಛ್ ವಲಯದಲ್ಲಿ ಭಾರತದ ಗಡಿ ಠಾಣೆ ಹಾಗೂ ನಾಗರಿಕ ಪ್ರದೇಶಗಳ ಮೇಲೆ ಗುಂಡಿನ ಮಳೆ ಸುರಿಸಿದೆ. ಇದಕ್ಕೆ ಭಾರತೀಯ ಪಡೆಗಳು ತಕ್ಕ ಪ್ರತ್ಯುತ್ತರ ನೀಡಿದ್ದು, ಈ ಚಕಮಕಿಯಲ್ಲಿ ಪ್ರಾಣಾಪಾಯವಾಗಿಲ್ಲ ಎಂದು ಸೇನಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಮನೀಶ್ ಮೆಹ್ತಾ ತಿಳಿಸಿದ್ದಾರೆ. —
ಶಾಲೆಗಳಿಗೆ ರಜೆ ರಜೌರಿ ಜಿಲ್ಲೆಯ ಮಂಜ್‌ಕೋಟ್ ವಲಯದಲ್ಲಿ ಪಾಕ್ ಪಡೆಗಳು ಷೆಲ್ ದಾಳಿ ನಡೆಸಿದ್ದರಿಂದ ಸ್ಥಳೀಯ ಆಡಳಿತವು ಶಾಲೆಗಳಿಗೆ ತಾತ್ಕಾಲಿಕ ರಜೆ ಘೋಷಿಸಿದೆ. ಕೆಲ ದಿನಗಳಿಂದ ನಡೆಯುತ್ತಿರುವ ಸಂಘರ್ಷದಲ್ಲಿ ಈ ವಲಯದ ಬಾಸೋನಿ ಗ್ರಾಮದ ಆರು ಮಂದಿ ಪಾಕ್ ಗುಂಡಿನ ದಾಳಿಗೆ ಗುರಿಯಾಗಿದ್ದರು. ಹೆಚ್ಚಿನ ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. —
ಜಮ್ಮು ಕಾಶ್ಮೀರದಲ್ಲಿ ಚುನಾಯಿತ ಸರಕಾರವಿದೆ. ಪಾಕ್ ರಾಯಭಾರಿಯು ರಾಜ್ಯದ ಪ್ರತ್ಯೇಕತಾವಾದಿಗಳನ್ನು ಆಹ್ವಾನಿಸುವ ಮೂಲಕ ಭಾರತದ ಏಕತೆ ಹಾಗೂ ಸಾರ್ವಭೌಮತೆಗೆ ಅಪಚಾರ ಎಸಗಿದ್ದಾರೆ. ಗಡಿ ಬಿಕ್ಕಟ್ಟು ಉಲ್ಬಣಗೊಂಡಿರುವ ಈ ಹೊತ್ತಿನಲ್ಲಿ ಪಾಕ್ ಜತೆಗೆ ನಡೆಸುವ ಮಾತುಕತೆಯಲ್ಲಿ ಅರ್ಥವಿಲ್ಲ. ಸರಕಾರದ ನೀತಿಯಲ್ಲಿ ದೂರದೃಷ್ಟಿಯ ಕೊರತೆ ಇದೆ.
– ಆನಂದ್ ಶರ್ಮಾ ಕಾಂಗ್ರೆಸ್ ನಾಯಕ —
ಗಡಿಯಲ್ಲಿ ಪಾಕ್ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ. ಗುಂಡಿನ ದಾಳಿ, ದ್ವಿಪಕ್ಷೀಯ ಮಾತುಕತೆ ಒಟ್ಟೊಟ್ಟಿಗೆ ನಡೆಯಲು ಸಾಧ್ಯವಿಲ್ಲ. ಕಿವುಡರೊಂದಿಗೆ ಮಾತುಕತೆ ನಡೆಸುವುದರಿಂದ ಯಾವುದೇ ಸಕಾರಾತ್ಮಕ ಫಲಿತಾಂಶ ನಿರೀಕ್ಷಿಸಲು ಸಾಧ್ಯವಿಲ್ಲ. ಈಗ ಪ್ರತ್ಯೇಕತಾವಾದಿಗಳ ಜತೆಗಿನ ಮಾತುಕತೆ ವಿಷಯವಂತೂ ಇನ್ನೂ ಅತಿರೇಕದ್ದು. ಪಾಕ್ ಜತೆ ಮಾತುಕತೆ ಸ್ಥಗಿತಗೊಳಿಸುವುದೇ ಉತ್ತಮ.
– ಯಶವಂತ್ ಸಿನ್ಹಾ ಬಿಜೆಪಿ ಧುರೀಣ