ಶಿವಮೊಗ್ಗ: ಆಕೆ ಕಿರುತೆರೆ ನಟಿ, ಅಲ್ಲದೇ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೂಡ ಹೌದು. ಜನಪ್ರತಿನಿಧಿಯಾಗಿ ಜನಪರವಾಗಿರಬೇಕಿದ್ದ ಆಕೆ ಈಗ ತಲೆಮರೆಸಿಕೊಂಡಿದ್ದಾರೆ. ಇದೀಗ ಆಕೆಯ ವಿರುದ್ಧ ಶಿವಮೊಗ್ಗ ಜಿಲ್ಲೆಯ ಹೊಸನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧನಕ್ಕೆ ಬಲೆ ಬೀಸಿದ್ದಾರೆ.
ಈಕೆಯ ಹೆಸರು ಎನ್.ವಿ. ಲಲಿತಾ. ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆನ್ನಲಾಗಿದೆ. ಈಕೆ ಈ ಭಾಗದಲ್ಲಿ ಮೀಟರ್ ಬಡ್ಡಿದಂಧೆ ನಡೆಸುತ್ತಿದ್ದರು. ಮೀಟರ್ ಬಡ್ಡಿ ಎಂದರೆ ಸಾಲ ನೀಡಿದ ಹಣಕ್ಕೆ ಹೆಚ್ಚಿನ ಬಡ್ಡಿಯನ್ನು ಗಂಟೆ, ದಿನದ ಲೆಕ್ಕದಲ್ಲಿ ಹಾಕುವುದು. ಈಕೆ ಇದನ್ನೇ ವೃತ್ತಿಯಾಗಿಸಿಕೊಂಡಿದ್ದರು.
ಪಡೆದ ಸಾಲಕ್ಕೆ ಮೀಟರ್ ಬಡ್ಡಿ ಕೊಡದವರಿಗೆ ಇನ್ನಿಲ್ಲದಂತೆ ಕಿರುಕುಳ ನೀಡುತ್ತಿದ್ದರು. ಈಕೆಯ ಕಿರುಕುಳದಿಂದ ಬೇಸತ್ತ ಕಾರಣಗಿರಿ ಮೋಹನ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಕೇಸು ದಾಖಲಿಸಿಕೊಂಡ ಹೊಸನಗರ ಠಾಣೆ ಪೊಲೀಸರು ನಟಿಯನ್ನು ಬಂಧಿಸಲು ಮನೆಗೆ ಹೋದಾಗ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.