ಕರ್ನಾಟಕ

ನಕಲಿ ಸ್ಟಾಂಪ್ ಪೇಪರ್‌ಗಳನ್ನು ಸೃಷ್ಟಿಸಿ ವಂಚಿಸುತ್ತಿದ್ದ ನಾಲ್ವರ ಬಂಧನ

Pinterest LinkedIn Tumblr

bang

ಬೆಂಗಳೂರು,ಆ.11: ನಕಲಿ ಸ್ಟಾಂಪ್ ಪೇಪರ್‌ಗಳನ್ನು ಸೃಷ್ಟಿಸಿ ವಂಚಿಸುತ್ತಿದ್ದ ನಾಲ್ವರು ವಂಚಕರನ್ನು ಸಿಸಿಬಿ ಪೊಲೀಸರು ಬಂಧಿಸಿ ವಿವಿಧ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಕೃಷ್ಣ , ಶ್ರೀನಿವಾಸ್, ನರಸಿಂಹಮೂರ್ತಿ ಮತ್ತು ನದೀಮ್ ಬಂಧಿತ ವಂಚಕರಾಗಿದ್ದು , ಇವರಿಂದ ಅಪಾರ ಪ್ರಮಾಣದ ನಕಲಿ ಸ್ಟಾಂಪ್ ಪೇಪರ್‌ಗಳು, ಫ್ರಾಂಕಿಂಗ್, ನೋಟರಿ ಸೀಲು ಮತ್ತು ಸಹಿ ಮಾಡಿರುವ ನಕಲಿ ಖಾಲಿ ಸ್ಟಾಂಪ್ ಪೇಪರ್‌ಗಳು, 3 ಸಿಪಿಯು, ನೋಟರಿ ಸೀಲು ಮತ್ತು ಸ್ಟಿಕರ್‌ಗಳು ಹಾಗು

ಕೃತ್ಯಕ್ಕೆ ಬಳಸಿದ್ದ ಪರಿಕರಗಳನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಗರದಲ್ಲಿ ಇತ್ತೀಚೆಗೆ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿರುವವರ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಹಾವಳಿ ತಡೆಗಟ್ಟಲು ಸಿಸಿಬಿ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಾಗ ಕೋರಮಂಗಲ ವ್ಯಾಪ್ತಿಯ ಬಿಡಿಎ ಕಾಂಪ್ಲೆಕ್ಸ್‌ನಲ್ಲಿರುವ ಶ್ರೀನಿಧಿ ಎಂಟರ್‌ಪ್ರೈಸಸ್ ಹಾಗೂ ಶ್ರೀ ವಿನಾಯಕ ಎಂಟರ್‌ಪ್ರೈಸಸ್ ಅಂಗಡಿಗಳ ಮೇಲೆ ದಾಳಿ ಮಾಡಿ ಈ ನಾಲ್ವರನ್ನು ಬಂಧಿಸಿದ್ದಾರೆ. ಈ ವಂಚಕರು ಕಳೆದ ಐದು ವರ್ಷಗಳಿಂದ ಎರಡು ರೂ. ಮುಖಬೆಲೆಯ ಸ್ಟಾಂಪ್ ಪೇಪರ್‌ಗಳನ್ನು ಕೆಜಿರಸ್ತೆಯಲ್ಲಿರುವ ಕಂದಾಯ ಭವನದ ಬಳಿ ಏಜೆಂಟ್ ಆಗಿ

ಕೆಲಸ ಮಾಡುವ ರಾಘವೇಂದ್ರ ಎಂಬಾತನೊಂದಿಗೆ ಸಂಚು ರೂಪಿಸಿ ನಕಲಿಯಾಗಿ ಸ್ಟಾಂಪ್ ಪೇಪರ್‌ಗಳನ್ನು ಕಲರ್ ಜೆರಾಕ್ಸ್ ತೆಗೆದು ಟೈಪ್ ಮಾಡಿದ ಸ್ಟಾಂಪ್ ಪೇಪರ್‌ಗಳ ಮೇಲೆ ವಿವಿಧ ಉಪನೋಂದಣಾಧಿಕಾರಿಗಳ ಕಚೇರಿಯಿಂದ ಫ್ರಾಂಕಿಂಗ್ ಮಾಡಿಸುವುದಲ್ಲದೆ , ನೋಟರಿಯವರಾದ ಚಂದ್ರಶೇಖರ್ ಮತ್ತು ನಾರಾಯಣರೆಡ್ಡಿ ಎಂಬುವರಿಂದ ಖಾಲಿ ನಕಲಿ ಸ್ಟಾಂಪ್ ಪೇಪರ್‌ಗಳ ಮೇಲೆ ನೋಟರಿ ಸೀಲು ಮತ್ತು ಸಹಿಯನ್ನು ಹಾಕಿಕೊಟ್ಟು , ಕೃತ್ಯಕ್ಕೆ ಸಹಕರಿಸಿರುವುದು ವಿಚಾರಣೆಯಿಂದ ತಿಳಿದುಬಂದಿದೆ.

ವಶಪಡಿಸಿಕೊಂಡಿರುವ ಸಾವಿರಕ್ಕೂ ಅಧಿಕ ನಕಲಿ ಸ್ಟಾಂಪ್‌ಪೇಪರ್‌ಗಳು 2012ರಿಂದ 2015ನೇ ಸಾಲಿಗೆ ಸಂಬಂಧಿಸಿದ್ದಾಗಿದೆ. ಆರೋಪಿಗಳು ಬಸವನಗುಡಿ, ಜಯನಗರ, ಯಶವಂತಪುರ, ಯಲಹಂಕ, ರಾಜಾಜಿನಗರ, ಬನಶಂಕರಿ, ಪೀಣ್ಯ, ನಾಗರಬಾವಿ ಉಪನೋಂದಣಾಧಿಕಾರಿ ಕಚೇರಿಗಳಿಂದ ಫ್ರಾಂಕಿಂಗ್ ಮಾಡಿಸಿರುವುದು ವಿಚಾರಣೆಯಿಂ ತಿಳಿದುಬಂದಿದೆ. ಆರೋಪಿಗಳ ಪೈಕಿ ಬಿ.ಡಿ.ಕೃಷ್ಣ ಎಂಬಾತ 2005ನೇ ಸಾಲಿನಲ್ಲೂ ಸಹ ಇದೇ ರೀತಿಯ ಪ್ರಕರಣದಲ್ಲಿ ಬಂಧಿತನಾಗಿ ವಿಚಾರಣೆ ಎದುರಿಸುತ್ತಿದ್ದಾನೆ.

Write A Comment