ಚಿಕ್ಕಮಗಳೂರು, ಗುಬ್ಬಿ, ಕೋಲಾರ, ಆ.7- ಬೆಳೆನಷ್ಟ ಹಾಗೂ ಸಾಲಬಾಧೆಯಿಂದ ರೈತರ ಸರಣಿ ಆತ್ಮಹತ್ಯೆ ಪ್ರಕರಣಗಳು ಮುಂದುವರೆದಿದ್ದು, ಇಂದು ಸಹ ಚಿಕ್ಕಮಗಳೂರು, ಗುಬ್ಬಿ ಹಾಗೂ ಕೋಲಾರದಲ್ಲಿ ಮೂವರು ಅನ್ನದಾತರು ಆತ್ಮಹತ್ಯೆಗೆ ಶರಣಾಗಿದ್ದಾರೆ.ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ನಾಗಬೋಗನಹಳ್ಳಿ ಗ್ರಾಮದ ನಿವಾಸಿ ಹಾಲಪ್ಪ (65) ಎಂಬ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈತ ತನ್ನ 2ಎಕರೆ ಜಮೀನಿನಲ್ಲಿ ಬಾಳೆ ಹಾಗೂ ಮತ್ತಿತರ ಕೃಷಿ ಚಟುವಟಿಕೆಗಾಗಿ ಕಾರ್ಪೊರೇಷನ್ ಬ್ಯಾಂಕ್‌ನಿಂದ ಒಂದು ಲಕ್ಷ ಹಾಗೂ ಸ್ಥಳೀಯರಿಂದ 1 ಲಕ್ಷ ರೂ. ಕೈ ಸಾಲ ಮಾಡಿಕೊಂಡಿದ್ದರು. ಮಳೆ ಬಾರದ ಹಿನ್ನೆಲೆಯಲ್ಲಿ ಬೆಳೆ ನಷ್ಟ ಸಂಭವಿಸಿ,
ಸಾಲ ತೀರಿಸಲಾಗದೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಗುಬ್ಬಿ ತಾಲೂಕಿನ ಕಲ್ಲೂರು ಗ್ರಾಮದ ಭೈರಪ್ಪ (28) ಎಂಬ ರೈತ ಸಾಲಬಾಧೆಯಿಂದ ಮನನೊಂದು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈತ 2 ಎಕರೆ ಜಮೀನನ್ನು ಗುತ್ತಿಗೆ ಪಡೆದು ಬಾಳೆ ಹಾಗೂ ಮತ್ತಿತರ ಬೆಳೆ ಬೆಳೆದಿದ್ದ. ಕೃಷಿ ಚಟುವಟಿಕೆಗೆ ಸ್ಥಳೀಯರಿಂದ 2 ಲಕ್ಷ ರೂ. ಕೈಸಾಲ ಮಾಡಿಕೊಂಡಿದ್ದ. ಮಳೆ ಕೈಕೊಟ್ಟಿದ್ದರಿಂದ ಫಸಲು ಕೈಸೇರದೆ ಸಾಲ ಹೇಗೆ ತೀರಿಸುವುದು ಎಂದು ತೋಚದೆ ಮನನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಸಿಎಸ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕೀರ್ತಿಕೊಪ್ಪ ಗ್ರಾಮದ ನಿವಾಸಿ ಬಾಬು (35) ಎಂಬ ರೈತ ಬೆಳೆ ನಷ್ಟ ಹಾಗೂ ಸಾಲಬಾಧೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈತ ತನ್ನ 4 ಎಕರೆ ಜಮೀನಿನಲ್ಲಿ ಕೃಷಿ ಚಟುವಟಿಕೆ ಮಾಡಲು ಸಾಲ ಮಾಡಿ ಬೋರ್‌ವೆಲ್ ಕೊರೆಸಿದ್ದ. ಬೋರ್‌ನಲ್ಲಿ ನೀರು ಬಂದಿರಲಿಲ್ಲ. ಕೃಷಿ ಚಟುವಟಿಕೆಗೆಂದು ವಿವಿಧ ಬ್ಯಾಂಕ್‌ಗಳಿಂದ 4 ಲಕ್ಷ ರೂ. ಹಾಗೂ 1.5 ಲಕ್ಷ ಕೈಸಾಲ ಮಾಡಿಕೊಂಡಿದ್ದ. ನೀರಿಲ್ಲದೆ ಬೆಳೆದಿದ್ದ ಫಸಲು ಒಣಗಿ ಹೋದ ಹಿನ್ನೆಲೆಯಲ್ಲಿ ಸಾಲ ತೀರಿಸಲಾರದೆ ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.