ಕರ್ನಾಟಕ

ರವಿ ನಿಗೂಢ ಸಾವು: ಶೀಘ್ರವೇ ಸಿಬಿಐ ವರದಿ

Pinterest LinkedIn Tumblr

ravi

ಬೆಂಗಳೂರು: ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿನ ಪ್ರಕರಣದ ತನಿಖೆ ಬಹುತೇಕ ಅಂತಿಮ ಹಂತಕ್ಕೆ ತಲುಪಿದ್ದು, ಅತಿ ಶೀಘ್ರದಲ್ಲೇ ವರದಿ ನೀಡಲಾಗುವುದು ಎಂದು ಸಿಬಿಐ ನಿರ್ದೇಶಕ ಅನಿಲ್ ಕುಮಾರ್ ಸಿನ್ಹಾ ತಿಳಿಸಿದರು. ಆದರೆ, ತನಿಖೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದರು.

ಸಿಬಿಐ ನಿರ್ದೇಶಕರಾದ ಬಳಿಕ ಮೊದಲ ಬಾರಿಗೆ ಬೆಂಗಳೂರಿನ ಸಿಬಿಐ ಕಚೇರಿಗೆ ಸೋಮವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ”ಡಿ.ಕೆ.ರವಿ ಪ್ರಕರಣದ ತನಿಖೆ ಬಹುತೇಕ ಅಂತಿಮ ಹಂತಕ್ಕೆ ತಲುಪಿದ್ದು, ಈ ಸಂದರ್ಭದಲ್ಲಿ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ. ಸದ್ಯದಲ್ಲೇ ವರದಿ ಸಲ್ಲಿಸಲಾಗುವುದು,” ಎಂದರು.

ರಾಜ್ಯ ಸರಕಾರ ವಹಿಸಿರುವ ಲಾಟರಿ ಹಗರಣದ ತನಿಖೆ ಬಗ್ಗೆ ಕೇಳಿದ ಪ್ರಶ್ನೆಗೆ ”ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಲ ವಿಚಾರಗಳಿದ್ದು, ಅವುಗಳನ್ನು ಹೊಂದಿಸಿಕೊಂಡು ಸದ್ಯದಲ್ಲೇ ತನಿಖೆ ಕೈಗೊಳ್ಳಲಾಗುವುದು. ಕರ್ನಾಟಕಕ್ಕೆ ಸಂಬಂಧಪಟ್ಟಂತೆ ಸಿಬಿಐ ಕೈಗೊಂಡಿರುವ ಪ್ರಕರಣಗಳ ತನಿಖೆ ನಾನಾ ಹಂತದಲ್ಲಿದ್ದು, ಈ ಸಂದರ್ಭದಲ್ಲಿ ಆ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ,” ಎಂದು ಪ್ರತಿಕ್ರಿಯಿಸಿದರು.

ಕರ್ನಾಟಕದ ಮಾಜಿ ಸಿಎಂ ಹಾಗೂ ಅಕ್ರಮ ಗಣಿಗಾರಿಕೆಗೆ ಸಂಬಂಧಪಟ್ಟ ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಕೆಯಾದ ನಂತರ ವಿಚಾರಣೆ ಆರಂಭವಾಗದಿರಲು ಕಾರಣವೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ” ಸಂಸ್ಥೆಯಿಂದ ಯಾವುದೇ ರೀತಿಯ ವಿಳಂಬವಾಗಿಲ್ಲ. ಉಳಿದ ಪ್ರಕ್ರಿಯೆಗಳು ಸಂಸ್ಥೆ ವ್ಯಾಪ್ತಿಗೆ ಒಳಪಡದ ಕಾರಣ ಆ ಬಗ್ಗೆ ಪ್ರತಿಕ್ರಿಯೆ ನೀಡಲಾರೆ,” ಎಂದರು.

”ಸಿಬಿಐ ಸಂಸ್ಥೆ ಬಗ್ಗೆ ಸಾರ್ವಜನಿಕರು ಹಾಗೂ ನ್ಯಾಯಾಲಯ ಇಟ್ಟುಕೊಂಡಿರುವ ವಿಶ್ವಾಸವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಂಸ್ಥೆ ಸರಿಯಾದ ಮಾರ್ಗದಲ್ಲಿ ಪ್ರಕರಣಗಳ ತನಿಖೆ ಕೈಗೊಳ್ಳುತ್ತಿದೆ. ಜನ ಸಂಸ್ಥೆಯ ಮೇಲೆ ಹೊಂದಿರುವ ವಿಶ್ವಾಸವನ್ನು ಉಳಿಸಿಕೊಳ್ಳಲು ಎಲ್ಲ ಪ್ರಕರಣಗಳ ತನಿಖೆಯನ್ನು ಗಂಭೀರವಾಗಿ ಪರಿಗಣಿಸಿ, ಸಮಗ್ರ ತನಿಖೆ ನಡೆಸಲು ಒತ್ತು ನೀಡಲಾಗಿದೆ,” ಎಂದರು.

”ಇತರೆ ತನಿಖಾ ಸಂಸ್ಥೆಗಳಿಗೆ ಹೋಲಿಸಿದರೆ ಸಿಬಿಐ ತನಿಖೆ ಕೈಗೊಳ್ಳುವ ಬಹುತೇಕ ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಸಂಸ್ಥೆಯು ಕಾನೂನಿನ ಇತಿಮಿತಿಯೊಳಗೆ ಕಾರ್ಯ ನಿರ್ವಹಿಸಿ ಸತ್ಯಾಂಶವನ್ನು ಪತ್ತೆ ಹಚ್ಚಿ ವರದಿ ನೀಡಲಿದೆ. ನಂತರ ಈ ಬಗ್ಗೆ ನ್ಯಾಯಾಲಯಗಳು ಕ್ರಮ ಕೈಗೊಳ್ಳಲಿವೆ,” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಧ್ಯಪ್ರದೇಶದ ‘ವ್ಯಾಪಂ’ ಹಗರಣದ ತನಿಖೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ”ಸಿಬಿಐಗೆ ವಹಿಸುವ ಪ್ರತಿಯೊಂದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುವುದು. ಪ್ರತಿಯೊಂದು ಅಂಶ, ಬೆಳವಣಿಗೆಯನ್ನು ಪರಿಶೀಲಿಸಿ ತನಿಖೆ ನಡೆಸಲಾಗುತ್ತದೆ. ಪ್ರಕರಣ ತನಿಖೆ ಈಗಷ್ಟೇ ಆರಂಭವಾಗಿದ್ದು, ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ,” ಎಂದರು.

”ಸಿಬಿಐನಲ್ಲಿ ಸ್ವಲ್ಪ ಮಟ್ಟಿಗೆ ಅಧಿಕಾರಿಗಳ ಕೊರತೆ ಇರಬಹುದು. ಆದರೆ, ಹಾಲಿ ಅಧಿಕಾರಿಗಳನ್ನೇ ಪರಿಣಾಮಕಾರಿಯಾಗಿ ಬಳಸಿಕೊಂಡು ಎಲ್ಲ ಪ್ರಕರಣಗಳ ತನಿಖೆಯನ್ನು ಸಮರ್ಪಕವಾಗಿ ಕೈಗೊಳ್ಳಲು ಸಾಧ್ಯವಿದೆ. ಅದರಂತೆ ತನಿಖೆಗಳು ನಡೆದಿವೆ. ಅಗತ್ಯ ಅಧಿಕಾರಿ,ನೌಕರರನ್ನು ಪಡೆಯುವುದು ಆಡಳಿತಾತ್ಮಕ ವಿಚಾರ,” ಎಂದು ಹೇಳಿದರು.

”ಬೆಂಗಳೂರಿನ ಐಐಎಂಬಿ ಹಾಗೂ ರಾಷ್ಟ್ರೀಯ ಕಾನೂನು ಶಾಲೆಯೊಂದಿಗೆ ಕೆಲ ವಿಷಯಗಳಿಗೆ ಸಂಬಂಧಪಟ್ಟಂತೆ ಸಿಬಿಐ ಒಡಂಬಡಿಕೆಯಾಗಿದ್ದು, ಸದ್ಯದಲ್ಲೇ ಈ ಬಗ್ಗೆಯೂ ಮಾಹಿತಿ ನಿಡಲಾಗುವುದು. ನಿರ್ದೇಶಕನಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಬೆಂಗಳೂರು ಕಚೇರಿಗೆ ಆಗಮಿಸಿದ್ದು, ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆ, ಚಿಂತನೆ, ಸಲಹೆ ಪಡೆದು ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು,”ಎಂದರು.

ಸಿಬಿಐ ಬೆಂಗಳೂರು ಘಟಕದ ಎಸ್ಪಿಗಳಾದ ಸುಬ್ರಮಣೇಶ್ವರ ರಾವ್, ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಮಾಧ್ಯಮ ಸೋರಿಕೆ ಸರಿಯಲ್ಲ ಕೆಲ ಪ್ರಕರಣಗಳ ತನಿಖೆಗೆ ಸಂಬಂಧಪಟ್ಟಂತೆ ಮಾಹಿತಿ ಪ್ರಸಾರವಾಗುತ್ತಿದ್ದು, ಸಂಸ್ಥೆಯಿಂದಲೇ ಮಾಹಿತಿ ಸೋರಿಕೆಯಾಗುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಬಿಐ ನಿರ್ದೇಶಕ ಅನಿಲ್ ಕುಮಾರ್ ಸಿನ್ಹಾ ”ಸಿಬಿಐನಲ್ಲಿ ಯಾವುದೇ ತನಿಖಾಧಿಕಾರಿ ಮಾಧ್ಯಮಗಳು ಸೇರಿದಂತೆ ಯಾರಿಗೂ ಮಾಹಿತಿ ನೀಡುವುದಿಲ್ಲ. ಕೆಲ ಮಾಧ್ಯಮಗಳು ಸುದ್ದಿಗೆ ವಿಶ್ವಾಸಾರ್ಹತೆ ತರಲು ಸಿಬಿಐ ಮೂಲಗಳು ಎಂಬ ಉಲ್ಲೇಖ ಮಾಡುತ್ತವೆ. ಆದರೆ, ಯಾವುದೇ ಪ್ರಕರಣದ ತನಿಖೆಯ ಮಾಹಿತಿ ಸೋರಿಕೆಯಾಗುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.

”ಸಿಬಿಐ ತನಿಖೆ ಕೈಗೊಂಡಿರುವ ಪ್ರಕರಣಗಳ ತನಿಖೆಯ ಮಹತ್ತರ ಬೆಳವಣಿಗೆ, ಆರೋಪಪಟ್ಟಿಗಳ ಬಗ್ಗೆ ನಿಯಮಿತವಾಗಿ ಮಾಹಿತಿ ನೀಡಲಾಗುತ್ತಿದೆ. ಆದರೆ, ತನಿಖೆಯ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಎಲ್ಲ ಮಾಹಿತಿ ನೀಡಲಾಗದು. ಈ ರೀತಿಯ ಮಾಹಿತಿಯನ್ನು ಸಂಸ್ಥೆಯ ವೆಬ್‌ಸೈಟ್‌ನಲ್ಲೂ ನಿಯಮಿತವಾಗಿ ನೀಡುವ ಬಗ್ಗೆ ಚಿಂತಿಸಲಾಗುವುದು,” ಎಂದರು.

Write A Comment