ರಾಷ್ಟ್ರೀಯ

ಯಾಕೂಬ್‌ ಗಲ್ಲು ಶಿಕ್ಷೆ: ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಿದ ಸುಪ್ರೀಂ

Pinterest LinkedIn Tumblr

yakoobyakoob

ಹೊಸದಿಲ್ಲಿ: ಗಲ್ಲು ಶಿಕ್ಷೆಗೆ ತಡೆ ಕೋರಿ ಮುಂಬಯಿ ಸರಣಿ ಸ್ಫೋಟ ಪ್ರಕರಣದ ದೋಷಿ ಯಾಕೂಬ್‌ ಮೆಮೊನ್‌ ಸಲ್ಲಿಸಿರುವ ಅರ್ಜಿ ಸಂಬಂಧ ಇಬ್ಬರು ನ್ಯಾಯಮೂರ್ತಿಗಳು ಭಿನ್ನ ನಿಲುವು ತಾಳಿರುವ ಹಿನ್ನೆಲೆಯಲ್ಲಿ ಅರ್ಜಿಯನ್ನು ಮಂಗಳವಾರ ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಲಾಗಿದೆ.

ಮೊಮೊನ್ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಬಗ್ಗೆ ನ್ಯಾಯಮೂರ್ತಿಗಳಾದ ಎ.ಆರ್.ದವೆ ಹಾಗೂ ಕುರಿಯನ್‌ ಜೋಸೆಫ್‌ ಅವರಿದ್ದ ಪೀಠ ಭಿನ್ನ ನಿಲುವು ತಾಳಿದೆ. ಯಾಕೂಬ್‌ ಗಲ್ಲು ಶಿಕ್ಷೆಗೆ ತಡೆ ನೀಡುವ ಬಗ್ಗೆ ಮುಖ್ಯ ನ್ಯಾಯಮೂರ್ತಿ ಬುಧವಾರ ನಿರ್ಣಯ ಕೈಗೊಳ್ಳಲಿದ್ದಾರೆ.

‘1996ರಿಂದ ಮಾನಸಿಕ ರೋಗದಿಂದ ಬಳಲುತ್ತಿರುವ ನಾನು ಸುಮಾರು 20 ವರ್ಷಗಳಿಂದ ಜೈಲಿನಲ್ಲಿದ್ದೇನೆ. ಜೀವಾವಧಿ ಶಿಕ್ಷೆಗಿಂತ ಹೆಚ್ಚಿನ ಅವಧಿಯನ್ನು ಕಾರಾಗೃಹದಲ್ಲಿ ಕಳೆದಿದ್ದೇನೆ. ಹಾಗಾಗಿ ನನ್ನ ಗಲ್ಲು ಶಿಕ್ಷೆಗೆ ತಡೆನೀಡಬೇಕು. ಒಂದೇ ಅಪರಾಧಕ್ಕೆ ಜೀವಾವಧಿ ಹಾಗೂ ಗಲ್ಲು ಶಿಕ್ಷೆಯನ್ನು ವಿಧಿಸುವಂತಿಲ್ಲ,’ ಎಂದು ಅರ್ಜಿಯಲ್ಲಿ ಮೆಮೊನ್‌ ತಿಳಿಸಿದ್ದಾನೆ.

2014 ಜೂನ್‌ 2ರಂದು ಮೆಮೊನ್‌ ಗಲ್ಲು ಶಿಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್‌, ಆತನ ಅರ್ಜಿಯನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿತ್ತು. 1993ರ ಮಾ.12ರಂದು ಕೇವಲ ಎರಡು ಗಂಟೆ ಅವಧಿಯಲ್ಲಿ ಮುಂಬಯಿಯ 13 ಕಡೆಗಳಲ್ಲಿ ಬಾಂಬ್‌ಗಳು ಸ್ಫೋಟಗೊಂಡು 250 ಮೃತಪಟ್ಟಿದ್ದರು. 700ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

ಹಣೆಬರಹ ನಿರ್ಧಾರ:

ಈಗಾಗಲೇ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಯಾಕೂಬ್ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಕ್ಯೂರೇಟಿವ್ ಅರ್ಜಿ ಕೂಡಾ ತಿರಸ್ಕೃತಗೊಂಡಿದೆ. ಇದರೊಂದಿಗೆ ಯಾಕೂಬ್ ನೇಣುಗಂಬ ತಪ್ಪಿಸಿಕೊಳ್ಳಲು ಇದ್ದ ಎಲ್ಲ ದಾರಿಗಳೂ ಬಂದ್ ಆಗಿದ್ದು, ಮಹಾರಾಷ್ಟ್ರದ ನಾಗ್ಪುರ ಜೈಲಿನಲ್ಲಿ ಜುಲೈ 30ರಂದು ಗಲ್ಲು ಶಿಕ್ಷೆ ಜಾರಿಗೆ ಸಿದ್ಧತೆ ನಡೆಸಲಾಗುತ್ತಿದೆ. ಆದರೆ ಈ ಮಧ್ಯೆ, ಅಪರೂಪದ ಪ್ರಕರಣವೆಂಬಂತೆ ಮಹಾರಾಷ್ಟ್ರದ ರಾಜ್ಯಪಾಲರಿಗೂ ಕ್ಷಮಾದಾನ ಅರ್ಜಿ ಸಲ್ಲಿಸಿರುವ ಯಾಕೂಬ್, ಮತ್ತೊಮ್ಮೆ ಸುಪ್ರಿಂ ಕೋರ್ಟ್ ಬಾಗಿಲು ತಟ್ಟಿದ್ದಾನೆ. ಮುಖ್ಯನ್ಯಾಯಮೂರ್ತಿ ನೇತೃತ್ವದ ನ್ಯಾಯಪೀಠ ಮೆಮೊನ್ ಅರ್ಜಿಯ ಹಣೆಬರಹ ನಿರ್ಧರಿಸಲಿದೆ.

Write A Comment