ಕರ್ನಾಟಕ

ಸಂಶೋಧನೆಯ ಅಧಃಪಥನಕ್ಕೆ ಕಾರಣಗಳು ಹಲವಾರು..!

Pinterest LinkedIn Tumblr

education_1– ಸಿಂಧು
ಇತ್ತೀಚೆಗೆ ಐಐಟಿಯಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ವಿದ್ಯಾರ್ಥಿಗೆ ಅಮೇರಿಕದ ವಿಶ್ವವಿದ್ಯಾಲಯವೊಂದು ಹೆಚ್ಚಿನ ಸಂಶೋಧನೆಗಾಗಿ ಆಹ್ವಾನಿಸಿತು. ಸಂಶೋಧನೆಗಾಗಿ ಆ ವಿದ್ಯಾರ್ಥಿಗೆ ಆ ವಿಶ್ವವಿದ್ಯಾಲಯವು ನೀಡಲಿರುವ ಸಂಬಳ ಬರೋಬ್ಬರಿ 1.25 ಕೋಟಿ ರೂಪಾಯಿಗಳು! ಇದಕ್ಕಿಂತ ಮೊದಲು ಆತನಿಗೆ ಕೆಲ ಕಂಪನಿಗಳು 25 ಲಕ್ಷ, 20 ಲಕ್ಷ ಸಂಬಳಕ್ಕೆ ಕೆಲಸ ಮಾಡಲು ಆಹ್ವಾನಿಸಿದ್ದವು. ಆ ಕಂಪನಿಗಳು ಯಾವ ಸಂಶೋಧನೆಯನ್ನು ನಡೆಸುತ್ತಿಲ್ಲ. ಆ ಕಂಪನಿಗಳು ವಿದ್ಯಾರ್ಥಿಗೆ ಆಹ್ವಾನ ಕೊಟ್ಟಿದ್ದು ಸಾಫ್ಟ್ ವೇರ್ ಡೆವೆಲಪ್ ಮೆಂಟ್ ಕೆಲಸಕ್ಕಾಗಿ! ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸಕ್ಕಿದ್ದ ಅಭ್ಯರ್ಥಿಯ ಜಾಣತನವನ್ನು ಗುರುತಿಸಿದ ಅಮೇರಿಕದ ಎ ಟಿ ಅಂಡ್ ಟಿ ಬೆಲ್ ಲಾಬೋರೇಟರಿಯು ಸಂಶೋಧಕನ ಹುದ್ದೆಗೆ ಆತನನ್ನು ಕೆಲಸಕ್ಕೆ ತೆಗೆದುಕೊಂಡಿತು. ಅಲ್ಲೂ ಕೋಟ್ಯಂತರ ರೂಪಾಯಿಯ ಸಂಬಳವನ್ನು ನೀಡಲಾಯಿತು. ಅತ್ಯುತ್ತಮ ತಲೆಗಳು ಬೇರೆ ದೇಶಗಳಲ್ಲಿ ಸಂಶೋಧನೆ ನಡೆಸುತ್ತಿರುವುದು ಹೀಗೆ!

ಇಂಡಿಯಾದಲ್ಲಿ ವೈಜ್ಞಾನಿಕ ಸಂಶೋಧನೆಗಾಗಿ ಸರಕಾರವಾಗಲಿ, ಕಂಪನಿಗಳಾಗಲಿ  ಹಣ ನೀಡುವುದಿಲ್ಲ. ಅದರಲ್ಲೂ ಹಣ ಖರ್ಚು ಮಾಡುವ ವಿವೇಚನೆಯನ್ನು ಸಂಶೋಧಕರಿಗೆ ನೀಡಲಾಗುವುದಿಲ್ಲ. ನೀಡಿದರೂ ಅದು ಸದುಪಯೋಗವಾಗುತ್ತದೆ ಎಂಬ ಗ್ಯಾರಂಟಿ ಇಲ್ಲ.  ಇಲ್ಲಿ ಸಂಶೋಧಕರೆಂದರೆ ಅಕೆಡೆಮಿಕ್ ಶಿಕ್ಷಕರು ಅಥವಾ ಉಪನ್ಯಾಸಕರು ಮಾತ್ರ. ಉತ್ತಮ ಸಂಶೋಧಕರು ಉತ್ತಮ ಶಿಕ್ಷಕರಾಗಿರಲೇಬೇಕೆಂದಿಲ್ಲ. ಉಪನ್ಯಾಸಕರಿಗೆ ಬಹುತೇಕ ಸಮಯ ಸರಕಾರಿ ಕ್ಲೆರಿಕಲ್ ಕೆಲಸಗಳಲ್ಲೇ ಸಮಯ ಹೋಗುತ್ತದೆ. ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಗೈಡ್ ಗಳ ಮರ್ಜಿ ಕಾಯುವ ಪರಿಸ್ಥಿತಿ ಇದೆ. ಬಹುತೇಕ ಗೈಡ್ ಗಳು ವಿದ್ಯಾರ್ಥಿಯ ಪ್ರತಿಭೆಗಿಂತ ಅವನ ಜಾತಿ ಮತ್ತು ಭಾಷೆಯ ಆಧಾರದ ಮೇಲೆಯೇ ಅಳೆಯುತ್ತಾರೆ.

ಉದಾರೀಕರಣದ ನಂತರ ವೇಗವಾಗಿ ಬೆಳೆಯುತ್ತಿರುವ ಕೈಗಾರಿಕೆಗಳು ಅದರಲ್ಲೂ ಸಾಫ್ಟ್ ವೇರ್ ಉದ್ದಿಮೆಗಳು ಸಂಶೋಧನೆಯ ಹಿನ್ನೆಲೆಯಲ್ಲ ಯೋಚಿಸುತ್ತಿಲ್ಲ.  ಈ ಸಂಸ್ಥೆಗಳಲ್ಲಿ ಅತ್ಯುತ್ತಮ ಚಿಂತನಶೀಲ ಮೆದುಳುಗಳು ಸಾಫ್ಟ್ ವೇರ್ ಗಳ ಅಭಿವೃದ್ಧಿ ಮಾಡುತ್ತಾ ಕೊಳೆಯುತ್ತಿವೆ. ಇನ್ನೂ ಕೆಲವರು ಗಿರಾಕಿಗಳಿಗೆ ಟೆಕ್ ಸಪೋರ್ಟ್ ಕೊಡುತ್ತಾ ಕಾಲ ಕಳೆಯುತ್ತಿದ್ದಾರೆ. ಕರ್ನಾಟಕದ ವಿದ್ಯಾರ್ಥಿಗಳ ಗುಣಮಟ್ಟ ಉತ್ತಮವಾಗಿರುವ ಕಾರಣ ಹೆಚ್ಚಿನ ಸಂಬಳ ನೀಡಬೇಕಾಗುತ್ತದೆ ಎಂಬ ಕಾರಣಕ್ಕಾಗಿ ತಮಿಳು ನಾಡು, ಒರಿಸ್ಸಾದ ಇತರೆ ರಾಜ್ಯಗಳ ಒಳನಾಡುಗಳಿಗೆ ಕ್ಯಾಂಪಸ್ ಸಂದರ್ಶನಕ್ಕೆ ತೆರಳಿ ಕಡಿಮೆ ಗುಣಮಟ್ಟದ ಅಭ್ಯರ್ಥಿಗಳನ್ನು ಕಡಿಮೆ ಸಂಬಳಕ್ಕೆ ಕರೆತರಲಾಗುತ್ತದೆ . ಎಂತಹ ಚಿಂತನ ಶೀಲ ಅಭ್ಯರ್ಥಿಯಿದ್ದರೂ ಅವನ ಸಂಬಳ ಇಪ್ಪತ್ತು ಲಕ್ಷ ದಾಟುವುದಿಲ್ಲ. ಮಾನ್ಸೆಂಟೋ, ಐ ಬಿ ಎಮ್, ಸಾಮ್ಸಂಗ್ ಅಷ್ಟೇ ಏಕೆ ಆರೇಂಜ್ ನಂತಹ ಚಿಕ್ಕ ಕಂಪನಿಗಳು ಸಂಶೋಧನೆಗೆ ಮತ್ತು ವಿಶ್ವಕ್ಕೆ ಹೊಸ ತಂತ್ರಜ್ಞಾನ ಕೊಡಬೇಕೆಂಬ ತುಡಿತದಲ್ಲಿ ಕೋಟ್ಯಂತರ ಡಾಲರುಗಳನ್ನು ಖರ್ಚು ಮಾಡುತ್ತವೆ. ಇಷ್ಟೇ ಹಣಬಲವಿರುವ ಟಿ ಸಿ ಎಸ್, ಇನ್ಫೋಸಿಸ್ , ಬಯೋಕಾನ್ ಗಳು ಇಲ್ಲಿಯವರೆಗೂ ಜಗತ್ತಿಗೆ ಹೊಸದೇನನ್ನೂ ಕೊಟ್ಟಿಲ್ಲ!   ತಮ್ಮ ಪಾಡಿಗೆ ಹಣಗಳಿಸಿಕೊಂಡರೆ ಯಾರಿಗೂ ಅಭ್ಯಂತರವಿರಲಿಲ್ಲ ಆದರೆ ತಮಗೆ ಕಡಿಮೆ ಬೆಲೆಯಲ್ಲಿ ಕೆಲಸಗಾರರು ಸಿಗಬೇಕೆಂಬ ಕಾರಣಕ್ಕೆ ಶಿಕ್ಷಣ ವ್ಯವಸ್ಥೆಯನ್ನೇ ನಿಸ್ಸಾರಗೊಳಿಸುವ ಹುನ್ನಾರವನ್ನು ಕ್ಷಮಿಸಲಾಗದು! ವಿಶ್ವದ ಸಂಶೋಧನಾ ಸಂಸ್ಥೆಗಳು ಕೋಟಿಗಳ ಲೆಕ್ಕದಲ್ಲಿ ಬುದ್ಧಿವಂತಿಕೆಗೆ ಮಣೆಹಾಕುತ್ತಿರುವಾಗ ಇಲ್ಲಿನ ಪ್ರತಿಭೆಗಳೆಲ್ಲ ಕಡಿಮೆ ಸಂಬಳಕ್ಕೆ ಕೆಲಸ ಮಾಡಬೇಕಾಗಿದೆ.

ಸಂಶೋಧನೆಗೆ ಮೀಸಲಾಗಿಡುವ ಹಣವನ್ನು ಲೆಕ್ಕ ಹಾಕಿದರೆ ಭಾರತವು ವಿಶ್ವದಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಒಟ್ಟು ಹಣವನ್ನು ಲೆಕ್ಕ ಹಾಕಿದರೆ ಇದು ಜಪಾನ್, ಕೊರಿಯಾಗಳಿಗಿಂತ ಕಡಿಮೆ. ಜನಸಂಖ್ಯೆಯ ಲೆಕ್ಕಾಚಾರಕ್ಕೂ ಸಂಶೋಧನೆಗೆ ಖರ್ಚು ಮಾಡುತ್ತಿರುವ ಹಣಕ್ಕೂ ಲೆಕ್ಕ ಹಾಕಿದರೆ ಭಾರತವು ಎಪ್ಪತ್ತನೆಯ ಸ್ಥಾನದಲ್ಲಿದೆ. ಅಂದರೆ ಭಾರತಕ್ಕಿಂತ ಬಡ ದೇಶಗಳಾದ ಚಿಲಿ, ಅರ್ಜೆಂಟಿನಾ ಗಳಿಗಿಂತಲೂ ಕಡಿಮೆ! ಸಂಶೋಧನೆಗಿಂತ ಇಲ್ಲಿ ಶೀಘ್ರ ಹಣಕ್ಕಾಗಿ ಎದುರು ನೋಡಲಾಗುತ್ತದೆ. ಸಂಶೋಧಕರಿಗೆ ಸಾಕಷ್ಟು ಸಹನೆ ಇರಬೇಕು, ಅದಕ್ಕೆ ತಕ್ಕಂತಹ ವಾತಾವರಣ ಮತ್ತು ಮನಃಸ್ಥಿತಿ ಇರಬೆಕು. ಅದು ಇಂಡಿಯಾದಲ್ಲಿ ಇಲ್ಲ. ಮನಃಸ್ಥಿತಿ ಪರಿಸ್ಥಿತಿಗಳೆರಡೂ ಪೂರಕವಾಗಿಲ್ಲ. ಸಂಶೋಧನೆಯ ಮಹತ್ವ ಗೊತ್ತಿಲ್ಲದ ಆಡಳಿತ, ಸ್ವಾರ್ಥಸಾಧನೆಗೆ ನಿಂತಿರುವ ಕಾರ್ಪೊರೇಟ್ ಗಳು, ಸುಲಭ ಹಣದ ಹಿಂದೆ ಬಿದ್ದಿರುವ ಅಭ್ಯರ್ಥಿಗಳು ಎಲ್ಲವೂ ಸಂಶೋಧನೆಯ ಅಧಃಪಥನಕ್ಕೆ ಕೊಡುಗೆ ನೀಡುತ್ತಿವೆ.

Write A Comment