ಮನೋರಂಜನೆ

ಪೆನ್ಸಿಲ್ ಚಿತ್ರಗಳ ಪ್ರತಿಭೆ ಮಹೇಶ್ ಸಾಕ್ರೆ

Pinterest LinkedIn Tumblr

mahesh_sakreಸೋಲೇ ಗೆಲುವಿನ ಸೋಪಾನ ಎಂಬುದು ಗಾದೆ ಮಾತು. ಅಂಥಾ ಸೋಲುಗಳೇ ನಮ್ಮನ್ನು ಗೆಲುವಿನೆಡೆಗೆ ಕೈ ಹಿಡಿದು ನಡೆಸುತ್ತವೆ. ಚಿತ್ರಕಲಾ ಸ್ಪರ್ಧೆಯಲ್ಲಿ ಸೋಲು ಅನುಭವಿಸಿದ ಹುಡುಗನಿಗೆ ಆ ಸೋಲು ಬದುಕಿನ ಹೊಸ ತಿರುವಿಗೆ ಕಾರಣವಾಯಿತು. ಚಿತ್ರಕಲೆ ಈತನ ಪ್ಯಾಷನ್. ಈತನ ಕುಂಚದಲ್ಲಿ ಸುಮಾರು ಸಾವಿರದಷ್ಟು ಚಿತ್ರಗಳು ಅರಳಿವೆ. ಈತ ರಚಿಸಿದ ಪೋಟ್ರೈಟ್ ಗಳನ್ನು ನೋಡುತ್ತಾ ಹೋದರೆ ವ್ಹಾವ್ ಎಂದು ಉದ್ಗರಿಸದೇ ಇರುವುದಿಲ್ಲ. ಚಿತ್ರಗಳಲ್ಲೇ ಮೋಡಿ ಮಾಡುವ ಆ ಪ್ರತಿಭಾವಂತ ಯುವ ಚಿತ್ರಕಾರನ ಹೆಸರು ಮಹೇಶ್ ಸಾಕ್ರೆ.

ಮೂಲತಃ ದಾವಣಗೆರೆಯವರಾಗಿರುವ ಮಹೇಶ್ ಸಾಕ್ರೆ ಬೆಂಗಳೂರಿನ ಈಜಿಸ್ ಜಿಯೋ ಪ್ಲಾನ್ (EGIS Geoplan) ಕಂಪನಿಯಲ್ಲಿ ಸೀನಿಯರ್ ಅಸೋಸಿಯೇಟ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಬಾಲ್ಯದಿಂದಲೇ ಚಿತ್ರಕಲೆಯತ್ತ ಅತೀವ ಆಸಕ್ತಿ ಹೊಂದಿದ್ದ ಸಾಕ್ರೆ  ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರೂ ಅವರ ಮೊದಲ ಆದ್ಯತೆ ಚಿತ್ರಕಲೆ. ಬೆಂಗಳೂರಿನ ಬ್ಯುಸಿ ಲೈಫ್, ಆಫೀಸು ಕೆಲಸಗಳ ನಡುವೆ ನೆಮ್ಮದಿಯನ್ನು ಕಂಡುಕೊಳ್ಳುವುದು ಚಿತ್ರಕಲೆಯಿಂದಲೇ ಎಂದು ಹೇಳುವ ಸಾಕ್ರೆ ಮಾತಿಗೆ ಸಿಕ್ಕಾಗ ಹೇಳಿದ್ದಿಷ್ಟು…

ಚಿತ್ರಕಲೆ ಆರಂಭ ಇಲ್ಲಿಂದ…

ಬಾಲ್ಯದಲ್ಲಿ ಗೋಡೆಗಳಲ್ಲಿ ಚಿತ್ರಗಳನ್ನು ಗೀಚುತ್ತಿದ್ದೆ. ಶಾಲೆಯಲ್ಲಿ ಅಂದರೆ ಹೈಸ್ಕೂಲ್ ನಲ್ಲಿ ಡ್ರಾಯಿಂಗ್ ಕ್ಲಾಸ್ ಇರುತ್ತಿತ್ತು. ಚಿತ್ರಕಲಾ ಸ್ಪರ್ಧೆಯೊಂದರಲ್ಲಿ ಭಾಗವಹಿಸಿದಾಗ ಅಲ್ಲಿ ಕಲರ್ ಪೇಟಿಂಗ್ ಮಾಡಬೇಕಿತ್ತು. ನಾನು ಮಾಡಿದ ಚಿತ್ರ ನಿರ್ವರ್ಣವಾಗಿತ್ತು. ಆದ ಕಾರಣ ನನಗೆ ಬಹುಮಾನ ಸಿಗಲಿಲ್ಲ. ನೀನು ಬಿಡಿಸಿದ ಚಿತ್ರ ವರ್ಣಮಯವಾಗಿದ್ದರೆ ಖಂಡಿತಾ ನಿನಗೆ ಮೊದಲ ಸ್ಥಾನ  ಸಿಗುತ್ತಿತ್ತು ಎಂದು ತೀರ್ಪುಗಾರರು ಹೇಳಿದಾಗ ಆ ಮಾತೇ ನನಗೆ ಪ್ರೇರಣೆಯಾಯಿತು.

ಆಮೇಲೆ ನಾನು ಹಾಳೆಗಳ ಮೇಲೆ ಕಲರ್ ಪೇಂಟಿಂಗ್  ಪ್ರಯೋಗ ಮಾಡಿದೆ. ನನ್ನನ್ನು ಜಾಸ್ತಿ ಸೆಳೆದದ್ದು ಭಾವಚಿತ್ರಗಳು. ನನ್ನ ಸ್ನೇಹಿತರು, ಗುರುಗಳು , ಅಕ್ಕಪಕ್ಕದವರ ಚಿತ್ರಗಳನ್ನು ಬಿಡಿಸಿದೆ. ಅದಕ್ಕೆ ಮೆಚ್ಚುಗೆಯೂ ಸಿಕ್ಕಿತು. ಹೀಗೆ ಚಿತ್ರಕಲೆಯಲ್ಲಿನ ಪಯಣ ಆರಂಭವಾಯಿತು.

ಪೆನ್ಸಿಲ್ ಡ್ರಾಯಿಂಗ್‌ನತ್ತ ಹೆಚ್ಚಿನ ಒಲವು?

ಬಡತನದ ಕುಟುಂಬದಲ್ಲಿ ಬೆಳೆದವನು ನಾನು. ಆ ಬಡತನದಲ್ಲಿ  ಕಲರ್  ಪೆನ್ಸಿಲ್ ಅಥವಾ ವಾಟರ್ ಕಲರ್ ಪೇಂಟ್ ಬಾಕ್ಸ್ ಖರೀದಿಸುವುದು ತುಂಬಾ ಕಷ್ಟವಾಗಿತ್ತು. ಕೈಯಲ್ಲಿ ಇದ್ದದ್ದು ಬರೀ ಪೆನ್ಸಿಲ್. ಹೀಗೆ ಪೆನ್ಸಿಲ್ ಡ್ರಾಯಿಂಗ್ ಮಾಡತೊಡಗಿದೆ.  10ನೇ ಕ್ಲಾಸಿನಲ್ಲಿ ಪೋಟ್ರೈಟ್ ಮಾಡಿದೆ. ಹೈಸ್ಕೂಲ್ ನಲ್ಲಿ ರಾಮಮೂರ್ತಿ ಸರ್ ಅವರ ಮಾರ್ಗದರ್ಶನ ನನಗೆ ದಕ್ಕಿತು.

ಕಾಲೇಜು ಜೀವನ ಮತ್ತು ಚಿತ್ರಕಲೆಯ ಬಗ್ಗೆ ಹೇಳಿ?

ಕಾಲೇಜಿನಲ್ಲಿ ನಾನು ಸಯನ್ಸ್ ವಿದ್ಯಾರ್ಥಿ. ರೆಕಾರ್ಡ್ ಬರೆಯಲು ಇರುತ್ತಿತ್ತು ಅಲ್ವಾ..ಅದರಲ್ಲಿ ನಾನು ಸುಂದರವಾದ ಚಿತ್ರ ಬಿಡಿಸುತ್ತಿದ್ದೆ. ಕಾಲೇಜಿಗೆ ಕಾಲಿಟ್ಟಾಗ ಕಲೆಯನ್ನು ಹೊಸ ದೃಷ್ಟಿಕೋನದಿಂದ ನೋಡುವುದನ್ನು ಕಲಿತೆ. ಅಲ್ಲಿನ ಸೂಕ್ಷ್ಮತೆಗಳನ್ನು ಗಮನಿಸಿ, ಅದರ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಂಡೆ. ಕಾಲೇಜಿನಲ್ಲಿ ಅಧ್ಯಾಪಕರ ಭಾವಚಿತ್ರ  ರಚಿಸಿದೆ. ನಾನು ಬಿಡಿಸಿದ ಚಿತ್ರಗಳು ಕಾಲೇಜು ಮ್ಯಾಗಜಿನ್‌ಗಳಲ್ಲಿ ಪ್ರಕಟಗೊಂಡವು. ಇಂಥಾ ವಿಷಯಗಳು ನನಗೆ ಉತ್ತೇಜನ ನೀಡಿದವು.

ಪೋಟ್ರೈಟ್ ಗಳಿಗೆ ಯಾಕೆ ಆದ್ಯತೆ?

ಪೋಟ್ರೈಟ್ ಗಳಲ್ಲಿ ವ್ಯಕ್ತಿಗಳ ಭಾವನೆಗಳೂ ಅಡಗಿರುತ್ತವೆ. ಒಬ್ಬ ವ್ಯಕ್ತಿಯ ಪೋಟ್ರೈಟ್ ರಚಿಸುವಾಗ ಹಲವಾರು ಸೂಕ್ಷ್ಮತೆಗಳನ್ನು ಗಮನಿಸಿ ರಚಿಸಬೇಕಾಗುತ್ತದೆ. ಇಲ್ಲಿ ಅವರ ಭಾವನೆಗಳು ಚಿತ್ರಗಳ ಮೂಲಕ ವ್ಯಕ್ತವಾಗುತ್ತದೆ. ಅಷ್ಟೇ ಅಲ್ಲ ಪೋಟ್ರೈಟ್ ಗಳು ಯಾವತ್ತೂ ಹೃದಯಕ್ಕೆ ಹತ್ತಿರವಾಗುವಂತದ್ದು. ಅಂದರೆ ಒಬ್ಬ ವ್ಯಕ್ತಿಯ ಪೋಟ್ರೈಟ್ ನಮಗೆ ಬೇಕು ಅಂದರೆ ಆ ವ್ಯಕ್ತಿ ನಮಗೆ ತುಂಬಾ ಆತ್ಮೀಯರಾಗಿರುತ್ತಾರೆ. ಅವರ ನೆನಪುಗಳನ್ನು ಚಿತ್ರದಲ್ಲಿ ಕಾಣಲು ನಾವು ಇಷ್ಟ ಪಡುತ್ತೇವೆ, ಸುಮ್ ಸುಮ್ನೇ ಯಾರೂ ಪೊಟ್ರೈಟ್ ರಚಿಸಲು ಹೇಳುವುದಿಲ್ಲವಲ್ಲಾ. ಆದ್ದರಿಂದಲೇ ಪೋಟ್ರೈಟ್ ರಚಿಸುವುದು ನನಗೂ ಇಷ್ಟವಾಗುತ್ತದೆ.

ಚಿತ್ರಕಲೆಯ ಬಗ್ಗೆ ಕಲಿಕೆ?

ಹಳ್ಳಿಯಲ್ಲಿ ಹುಟ್ಟಿ ಬೆಳೆದಿರುವುದರಿಂದ ಅಲ್ಲಿನ ಪ್ರಕೃತಿಯ ಸೊಬಗು,  ಪ್ರಕೃತಿಯ ಒಡನಾಟವೇ ನನ್ನಲ್ಲಿ ಚಿತ್ರಕಲೆಯಲ್ಲಿ ಆಸಕ್ತಿ ಹುಟ್ಟಿಸುತ್ತಿತ್ತು. ಮೊದಮೊದಲು ದೇವರ ಚಿತ್ರ ಬಿಡಿಸುತ್ತಿದ್ದೆ. ಆಮೇಲೆ ನನ್ನ ಸುತ್ತುಮುತ್ತಲು ಕಾಣುವ ವ್ಯಕ್ತಿಗಳು, ಪರಿಸರ ಹೀಗೆ ಅನುಭವಕ್ಕೆ ದಕ್ಕಿದ್ದಕ್ಕೆಲ್ಲಾ ರೂಪ ನೀಡಿತ್ತಾ ಚಿತ್ರ ರಚಿಸುತ್ತಾ ಬಂದೆ.  ಪ್ರತಿಯೊಂದು ಕಲಾಕೃತಿಯನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತೇನೆ. ಯಾವುದೇ ಕಲಾವಿದನ ಚಿತ್ರವನ್ನು ನೋಡಲಿ ಆ ಚಿತ್ರ ನನ್ನ ಮನಸ್ಸಲ್ಲಿ ಅಚ್ಚೊತ್ತಿ ಬಿಡುತ್ತಿತ್ತು. ನನ್ನ ತಾಯಿ, ತಮ್ಮನ ಪ್ರೋತ್ಸಾಹದೊಂದಿಗೆ ರಾಮಮೂರ್ತಿ ಸರ್, ಮೋಹನ್ ಸರ್ ಮತ್ತು ಸುನಿಲ್ ಇಜಂತಕರ್ ಮೊದಲಾದವರು ಪ್ರೋತ್ಸಾಹ ಮತ್ತು ಮಾರ್ಗದರ್ಶನದಿಂದಾಗಿ ನಾನು ಈ ಮಟ್ಟಕ್ಕೆ ಬೆಳೆಯುವಂತಾಯಿತು. ಇಲ್ಲಿವರೆಗೆ ಯಾವುದೇ ಕೋರ್ಸ್‌ಗಳನ್ನು ಕಲಿಯದೇ ಚಿತ್ರ ಬಿಡಿಸುತ್ತಿದ್ದೆ. ಈಗ ಚಿತ್ರಕಲೆಯ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಎಂಬ ಕಾರಣದಿಂದಲೇ ಮೈಸೂರು ವಿವಿಯಿಂದ ಬಿಎಫ್‌ಎ ಕೋರ್ಸ್ ಮಾಡುತ್ತಿದ್ದೇನೆ.

ನಿಮಗೆ ಸ್ಫೂರ್ತಿ ನೀಡಿದವರು?

ರಾಜಾ ರವಿ ಮರ್ಮಾ ಅವರು ನನಗೆ ಪ್ರೇರಣೆ. ಅದೇ ವೇಳೆ ಲಿಂಡಾ ಹ್ಯೂಬರ್ (Linda huber), ಕೆಲ್ವಿ ಒಕಾಫುರ್ (Kelvin okafor) ಅವರಿಂದಲೂ ನಾನು ಪ್ರಭಾವಿತನಾಗಿದ್ದೇನೆ.

ಚಿತ್ರಕಲೆ ನಿಮ್ಮ ಪ್ಯಾಶನ್. ಇದನ್ನು ಫ್ರೊಫೆಶನ್ ಮಾಡಬೇಕು ಎಂದು ಅನಿಸಿತ್ತಾ?

ನನ್ನಮ್ಮನಿಗೆ ನನ್ನನ್ನು ಇಂಜಿನಿಯರ್ ಮಾಡಬೇಕೆಂಬ ಕನಸು ಇತ್ತು. ಅದಕ್ಕಾಗಿ ನನ್ನಮ್ಮ ಹಗಲಿರುಳು ದುಡಿದಿದ್ದಾರೆ. ಬಡತನವಿದ್ದರೂ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಲು ನನ್ನಮ್ಮ ತುಂಬಾನೇ ಕಷ್ಟಪಟ್ಟಿದ್ದಾರೆ. ಅಮ್ಮನ ಕನಸನ್ನು ನಾನು ನನಸು ಮಾಡಿದ್ದೇನೆ. ಚಿತ್ರಕಲೆ ನನ್ನ ಪ್ಯಾಷನ್, ಅದು ನನಗೆ ಖುಷಿಕೊಡುತ್ತದೆ. ಬಾಲ್ಯದಲ್ಲಿ  ಒಂಟಿತನವನ್ನು ಕಳೆಯಲು ಚಿತ್ರ ಬಿಡಿಸುತ್ತಿದೆ. ಈಗ ದಿನ ನಿತ್ಯದ ಜಂಜಾಟಗಳಿಂದ ನೆಮ್ಮದಿ ಕಂಡುಕೊಳ್ಳಲು ಚಿತ್ರ ಬಿಡಿಸುತ್ತೇನೆ. ನೀವು ನಂಬ್ತೀರೋ ಬಿಡ್ತೀರೋ, ನನಗೆ ಒಂದು ದಿನವಾದರೂ ಆಫೀಸಿನ ಕೆಲಸದ ಬಗ್ಗೆ ಕನಸೇ ಬಿದ್ದಿಲ್ಲ. ನನ್ನ ಕನಸುಗಳಲ್ಲಿ ಸದಾ ಕಾಡುವುದು ಚಿತ್ರಕಲೆಯೊಂದೇ. ಏತನ್ಮಧ್ಯೆ, ಜೀವನದ ಕ್ಷಣಗಳನ್ನು ರೇಖೆಗಳಲ್ಲಿ, ಬಣ್ಣಗಳಲ್ಲಿ ಸೆರೆ ಹಿಡಿಯಲು ನನ್ನ ಮನಸ್ಸು ಸದಾ ಹಂಬಲಿಸುತ್ತಾ ಇರುತ್ತದೆ. ಅಂಥಾ ಕಲಾಗಾರನಾಗಲು ನನಗೆ ಇಷ್ಟ. ಕಲಾಸಕ್ತರು ಆರ್ಡರ್ ಕೊಟ್ಟರೆ ನಾನು ಚಿತ್ರಗಳನ್ನು ರಚಿಸಿಕೊಡುತ್ತೇನೆ. ಪ್ರತಿಯೊಂದು ರಚನೆಯೂ ಹೊಸ ಅನುಭವಗಳನ್ನು ನೀಡುತ್ತದೆ. ಹೊಸ ಕಲಿಕೆಗೆ ನಾನ್ಯಾವತ್ತೂ ಸಿದ್ಧ.

ಮಹೇಶ್ ಸಾಕ್ರೆ ಅವರ ವೆಬ್‌ಸೈಟ್ : http://www.sakrearts.com/

ಇಮೇಲ್: yuvaraj.sakre@sakrearts.com

ಸಂದರ್ಶನ : ರಶ್ಮಿ ಕಾಸರಗೋಡು

Write A Comment