ಕರ್ನಾಟಕ

ಸರಕಾರೀ ಶಾಲೆಗಳಲ್ಲಿ ಮುಂದಿನ ವರ್ಷದಿಂದ ಎಲ್‌ಕೆಜಿ ಆರಂಭ : ಸಚಿವ ಕಿಮ್ಮನೆ

Pinterest LinkedIn Tumblr

KIMMANE

ಬೆಂಗಳೂರು: ಖಾಸಗಿ ಶಾಲೆಗಳ ಹಾವಳಿ ತಡೆಗಟ್ಟಲು ಮುಂದಾಗಿರುವ ಸರಕಾರ ಮುಂದಿನ ಶೈಕ್ಷಣಿಕ ವರ್ಷದಿಂದ ಸರಕಾರಿ ಶಾಲೆಗಳಲ್ಲಿಯೇ ನುರಿತ ಶಿಕ್ಷಕರಿರುವ ಎಲ್‌ಕೆಜಿ ಆರಂಭಿಸಲು ಚಿಂತನೆ ನಡೆಸಿದೆ.

ಕೆಪಿಸಿಸಿ ಕಚೇರಿಗೆ ಶನಿವಾರ ಭೇಟಿ ನೀಡಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಈ ವಿಷಯ ತಿಳಿಸಿದ್ದಾರೆ.

”ಸರಕಾರದ ಶೈಕ್ಷಣಿಕ ವ್ಯವಸ್ಥೆಯಡಿ ಸುಸಜ್ಜಿತ ಕಟ್ಟಡ, ಮೂಲಸೌಕರ್ಯ, ಶಿಕ್ಷಕರು ಸೇರಿದಂತೆ ಎಲ್ಲ ಸೌಲಭ್ಯಗಳಿವೆ. ಕೆಲವು ಕಡೆಗಳಲ್ಲಿ ಹೆಚ್ಚುವರಿ ಶಿಕ್ಷಕರಿದ್ದಾರೆ. ಎಲ್‌ಕೆಜಿ, ಯುಕೆಜಿಗೆ ಪಾಠ ಮಾಡುವ ಕೌಶಲ್ಯ ಇರುವ ಶಿಕ್ಷಕರರನ್ನು ನೇಮಿಸಿಕೊಳ್ಳಬೇಕಾಗಬಹುದು. ಆರ್ಥಿಕ ಇಲಾಖೆ ಅನುಮತಿ ಪಡೆಯಬೇಕಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು,” ಎಂದು ಹೇಳಿದರು.

”ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾಥಮಿಕ ಶಾಲೆಗಳಲ್ಲಿಯೇ ವಿಲೀನಗೊಳಿಸುವ ಚಿಂತನೆ ಇದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಸ್ತುವಾರಿಯಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ನಡೆಯುತ್ತಿವೆ. ಆ ಇಲಾಖೆಯ ಜತೆಯೂ ಚರ್ಚಿಸುವೆ. ಹಾಗಂತ ಅಂಗನವಾಡಿ ಕೇಂದ್ರಗಳಿಗೆ ಅಡ್ಡಿಪಡಿಸುವ ಉದ್ದೇಶ ಇಲ್ಲ,” ಎಂದರು.

”ಶಾಲಾ ಪರಿಸರವನ್ನು ಮಕ್ಕಳಿಂದಲೇ ಸ್ವಚ್ಛಗೊಳಿಸುವ ಬಗ್ಗೆ ಸರಕಾರದ ಮುಂದೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಈ ಕುರಿತು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಸಂಬಂಧಿಸಿದ ಇಲಾಖೆಗಳ ಜತೆ ಚರ್ಚಿಸಿ, ಈ ಕುರಿತು ತೀರ್ಮಾನ ಕೈಗೊಳ್ಳಬೇಕಿದೆ,” ಎಂದು ಅವರು ಹೇಳಿದರು.

ಆರ್‌ಟಿಇ ದುರುಪಯೋಗ ತಡೆ ”ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಅಡಿಯಲ್ಲಿ ನೀಡುತ್ತಿರುವ ಪ್ರವೇಶ ಶ್ರೀಮಂತರ ಪಾಲಾಗುತ್ತಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಬಿಪಿಎಲ್ ಕಾರ್ಡ್ ಇದ್ದವರಿಗೆ ಆರ್‌ಟಿಇ ಅಡಿ ಪ್ರವೇಶ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ,” ಎಂದು ಸಚಿವ ಕಿಮ್ಮನೆ ಹೇಳಿದರು.

”ಆರ್‌ಟಿಇ ಅಡಿ ಸೀಟು ಪಡೆಯಲು ಆದಾಯ ಪ್ರಮಾಣಪತ್ರ ಆಧಾರವಾಗಿದೆ. 10 ಲಕ್ಷ ರೂ. ಆದಾಯ ಇರುವವರು ಸುಲಭವಾಗಿ 35 ಸಾವಿರ ರೂ. ಆದಾಯ ಹೊಂದಿದ್ದೇವೆ ಎಂದು ಪ್ರಮಾಣಪತ್ರ ಪಡೆಯುತ್ತಿದ್ದಾರೆ. ಇದರಿಂದ ನಿಜವಾದ ಬಡ, ಪ್ರತಿಭಾವಂತ ಮಕ್ಕಳಿಗೆ ಅವಕಾಶ ಸಿಗುತ್ತಿಲ್ಲ. ಇದರಿಂದಾಗಿ ಸರಕಾರವೇ ಹಣ ಕೊಟ್ಟು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವಂತಾಗಿದೆ. ಹೀಗಾಗಿ ಸರಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆ ಉಂಟಾಗಿದೆ. ನಿಯಮಾವಳಿಗಳನ್ನು ಬದಲಾವಣೆ ಮಾಡಿ ಬಿಪಿಎಲ್ ಕಾರ್ಡ್ ಇರುವ ಕುಟುಂಬಗಳಿಗೆ ಮಾತ್ರ ಆರ್‌ಟಿಇ ಸೀಟು ನೀಡುವ ಚಿಂತನೆ ನಡೆದಿದ್ದು. ಅಂತಿಮ ತೀರ್ಮಾನವಾಗಿಲ್ಲ,” ಎಂದರು.

ವೃತ್ತಿಶಿಕ್ಷಣ ಮಾನದಂಡ ಬದಲು ”ಮುಂದಿನ ಶೈಕ್ಷಣಿಕ ವರ್ಷದಲ್ಲಿ ವೃತ್ತಿಪರ ಶಿಕ್ಷಣ ಪ್ರವೇಶದ ವೇಳೆ ಪಿಯುಸಿ ಹಾಗೂ ಸಿಇಟಿ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಶೇ.50ರಷ್ಟು ಆಯ್ಕೆ ಮಾಡಿಕೊಂಡು ಸೀಟು ಹಂಚಿಕೆ ಮಾಡುವ ಬಗ್ಗೆ ಸರಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ,” ಎಂದು ಸಚಿವರು ಹೇಳಿದರು.

ಪ್ರತಿಭಾವಂತರಿಗೆ ನೆರವು ”ಪಿಯು ಪರೀಕ್ಷೆಯಲ್ಲಿ ಶೇ.96ಕ್ಕಿಂತ ಹೆಚ್ಚು ಅಂಕ ಪಡೆದು, ಸಿಇಟಿಯಲ್ಲಿ ಅಂಕ ಕಡಿಮೆ ಪಡೆದರೆ ವೃತ್ತಿಶಿಕ್ಷಣ ಪ್ರವೇಶ ಸಿಗದೇ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಇದನ್ನು ತಪ್ಪಿಸಲು ವೃತ್ತಿಶಿಕ್ಷಣ ಪ್ರವೇಶಕ್ಕೆ ಸಿಇಟಿ ಹಾಗೂ ಪಿಯುಸಿ ಅಂಕಗಳನ್ನು ಸಮಪ್ರಮಾಣದಲ್ಲಿ ಪರಿಗಣಿಸುವ ನೀತಿ ರೂಪಿಸಬೇಕೆಂದು ಮುಖ್ಯಮಂತ್ರಿಗಳು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಉಭಯ ಇಲಾಖೆಗಳ ಮಧ್ಯೆ ಚರ್ಚೆ ಆರಂಭವಾಗಿದೆ,” ಎಂದು ಸಚಿವ ಕಿಮ್ಮನೆ ಹೇಳಿದರು.

ಸಿಎಂ ನಿರ್ಧಾರಕ್ಕೆ ಬದ್ಧ ಸಿಎಂ ನನ್ನನ್ನು ಸಂಪುಟದಲ್ಲಿ ಇಟ್ಟುಕೊಂಡರೆ ಸಂತೋಷ. ಕೈ ಬಿಟ್ಟರೆ ಬೇಸರವೇನಿಲ್ಲ. ಇಂಥದ್ದೇ ಖಾತೆ ಬೇಕೆಂಬ ಆಸೆಯಿಲ್ಲ. ಸಿಕ್ಕಿರುವ ಖಾತೆಯಲ್ಲಿ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸ ಮಾಡಿದ್ದೇನೆ. ಪಕ್ಷದ ಹಿತದಷ್ಟಿಯಿಂದ ಸಿಎಂ ಏನೇ ನಿರ್ಧಾರ ಕೈಗೊಂಡರೂ ಅದನ್ನು ಪಾಲಿಸುವೆ.
-ಕಿಮ್ಮನೆ ರತ್ನಾಕರ್, ಪ್ರಾಥಮಿಕ ಶಿಕ್ಷಣ ಸಚಿವ

Write A Comment