ಕರ್ನಾಟಕ

ಚಲಿಸುತ್ತಿದ್ದ ಬಸ್‌ನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

Pinterest LinkedIn Tumblr

busಚಲಿಸುತ್ತಿದ್ದ ಬಸ್‌ನಲ್ಲಿಯೇ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಇಂದು ಬೆಳಗ್ಗೆ ಸಮೀಪದ ದಾಸನಪುರದಲ್ಲಿ ನಡೆದಿದೆ. ಪ್ರೇಮಾ (28) ಎಂಬುವರೇ ಮಗುವಿಗೆ ಜನ್ಮ ನೀಡಿದ ಮಹಿಳೆ. ಗ್ಯಾನಪ್ಪ ಬೆಂಗಳೂರಿನ ಕೆಎಸ್‌ಆರ್‌ಟಿಸಿ ಇಲಾಖೆಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದು, ಕಳೆದ ಎಂಟು ವರ್ಷಗಳಿಂದ ಬೆಂಗಳೂರಿನಲ್ಲಿಯೇ ವಾಸವಾಗಿದ್ದಾರೆ. ಪತ್ನಿಗೆ ಬೆಂಗಳೂರಿನಲ್ಲಿ ಹೆರಿಗೆ ಮಾಡಿಸುವುದು ಕಷ್ಟವೆಂದು ತಿಳಿದು ಗ್ಯಾನಪ್ಪ ಸ್ವಗ್ರಾಮಕ್ಕೆ ಕರೆದುಕೊಂಡು ಹೋಗಲು ನಿಶ್ಚಯಿಸಿದ್ದರು.

ಹಾಗಾಗಿ ಇಂದು ಬೆಳಗ್ಗೆ 7.30ಕ್ಕೆ ಮೆಜೆಸ್ಟಿಕ್‌ನಿಂದ ಬೆಂಗಳೂರು-ಬದಾಮಿ ಬಸ್‌ನಲ್ಲಿ ಇಬ್ಬರೂ ಪ್ರಯಾಣ ಬೆಳೆಸಿದ್ದರು. ಬೆಂಗಳೂರಿನಿಂದ 25 ಕಿಮೀ ದೂರದ ದಾಸನಪುರದಲ್ಲಿ 8.45ಕ್ಕೆ ಪ್ರೇಮಾಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಮಹಿಳಾ ಪ್ರಯಾಣಿಕರು ಸೇರಿದಂತೆ ಎಲ್ಲರೂ ಅವರ ನೆರವಿಗೆ ಬಂದರು. ಚಾಲಕ ಸಿದ್ದಣ್ಣ ಹಾಗೂ ನಿರ್ವಾಹಕ ಗೌಡರ್ ಬಸ್‌ಅನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದರು. ನಂತರ ಪ್ರಯಾಣಿಕರು ಪ್ರೇಮಾಳ ನೆರವಿಗೆ ಬಂದುದರಿಂದ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ತಕ್ಷಣ ಬಸ್‌ನಲ್ಲಿಯೇ ಅವರನ್ನು ನೆಲಮಂಗಲ ಬಳಿಯ ಜೆಪಿ ಆಸ್ಪತ್ರೆಗೆ ಸೇರಿಸಿ ಎಲ್ಲ ಪ್ರಯಾಣಿಕರಿಂದ ದುಡ್ಡು ಸಂಗ್ರಹಿಸಿ ಅವರಿಗೆ ಉಪಕಾರ ಮಾಡಿ ಮಾನವೀಯತೆ ಮೆರೆದರು. ಮಗು ಹಾಗೂ ಬಾಣಂತಿ ಇಬ್ಬರೂ ಆರೋಗ್ಯದಿಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Write A Comment