ಕರ್ನಾಟಕ

ರೈತರಲ್ಲಿ ಇನ್ನಷ್ಟು ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕು: ಎಸ್.ಎಂ.ಕೃಷ್ಣ

Pinterest LinkedIn Tumblr

KPN PHOTOಮಂಡ್ಯ: ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಎಸ್.ಎಂ.ಕೃಷ್ಣ ಅವರು ಶನಿವಾರ ಹೇಳಿದ್ದಾರೆ.

ಇಂದು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ದೊಡ್ಡಕ್ಯಾತನಹಳ್ಳಿಯ ಮೃತ ರೈತನ ಮನೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣ, ರೈತರ ಆತ್ಮಹತ್ಯೆ ತಡೆಯುವಲ್ಲಿ ಮತ್ತು ಆತ್ಮಸ್ಥೈರ್ಯ ತುಂಬುವಲ್ಲಿ ನನ್ನದೊಂದು ಸಣ್ಣ ಪ್ರಯತ್ನ ಅಷ್ಟೆ. ರೈತರಲ್ಲಿ ಇನ್ನಷ್ಟು ಆತ್ಮಸ್ಥೈಯ ತುಂಬುವ ಕೆಲಸವಾಗಬೇಕು ಎಂದರು.

2 ದಿನಗಳ ಪ್ರವಾಸದಲ್ಲಿ ರೈತರ ಸಂಕಷ್ಟದ ಬಗ್ಗೆ ತಿಳಿದಿರುವೆ. ಆದರೆ ಜಾಗೃತಿ ಮೂಡಿಸಿದರೂ ರೈತರ ಆತ್ಮಹತ್ಯೆ ಮುಂದುವರೆದಿರುವುದು ಒಂದು ದೊಡ್ಡ ದುರಂತ ಎಂದು ಮಾಜಿ ಸಿಎಂ ಹೇಳಿದ್ದಾರೆ.

ಇದೇ ವೇಳೆ ತಮ್ಮ ಪ್ರವಾಸದಿಂದ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ ಎಂಬ ಮಾತುಗಳನ್ನು ತಳ್ಳಿಹಾಕಿದ ಕೃಷ್ಣ, ನನ್ನಿಂದ ಸರ್ಕಾರ ಎಚ್ಚೆತ್ತುಕೊಂಡಿದೆ ಎನ್ನುವುದು ತಪ್ಪು. ರಾಜ್ಯ ಸರ್ಕಾರಕ್ಕೆ ಅದರದ್ದೇ ಆದ ಜವಾಬ್ದಾರಿ ಇರುತ್ತದೆ ಎಂದಿದ್ದಾರೆ. ಅಲ್ಲದೆ ತಮ್ಮ ಪ್ರವಾಸದಿಂದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಅವರಿಗೆ ಯಾವುದೇ ಹಿನ್ನಡೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮಾಜಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಅವರು ನಿನ್ನೆಯಿಂದ ಮಂಡ್ಯ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಭೇಟಿ, ಸಾಂತ್ವನ ಹೇಳುವ ಮೂಲಕ ಕಾಂಗ್ರೆಸ್‌ನಲ್ಲಿ ಆಂತರಿಕ ಸಂಚಲನ ಉಂಟುಮಾಡಿದ್ದಾರೆ.

ಎಸ್.ಎಂ.ಕೃಷ್ಣ   ಅವರು ಮಂಡ್ಯ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ 16 ರೈತರ ಮನೆಗೆ ತೆರಳಿ ತಲಾ ರು. 50 ಸಾವಿರ ಪರಿಹಾರವನ್ನು ನೀಡಿರುವುದು ಸರ್ಕಾರ ಮತ್ತು ಪಕ್ಷದಲ್ಲಿ ಚಟುವಟಿಕೆ ಮೂಡಿಸುವುದಕ್ಕೆ ಕಾರಣವಾಗಿದೆ.

Write A Comment