ಕರ್ನಾಟಕ

ಬೆಂಗಳೂರಿನ ಗುಬ್ಬಿವೀರಣ್ಣ ರಂಗಮಂದಿರ ಉಳಿಸುವಂತೆ ಆಗ್ರಹಿಸಿ ವಾಟಾಳ್ ವಿನೂತನ ಧರಣಿ 

Pinterest LinkedIn Tumblr

vatal

ಬೆಂಗಳೂರು, ಜು.12: ರಂಗಭೂಮಿಯ ವಿಶ್ವವಿದ್ಯಾಲಯವೇ ಆಗಿದ್ದ ಬೆಂಗಳೂರಿನ ಗುಬ್ಬಿ ವೀರಣ್ಣ ರಂಗಮಂದಿರ ಈಗ ಕಳೆದ ಮೂರು ವರ್ಷಗಳಿಂದ ಮುಚ್ಚಿ ಹಾಳೂರಿನ ಕೊಂಪೆಯಂತಾಗಿದೆ. ಇದನ್ನು ಕೂಡಲೇ ಪ್ರಾರಂಭಿಸಿ ರಂಗ ಚಟುವಟಿಕೆಗಳ ತಾಣವನ್ನಾಗಿ ಮಾಡಬೇಕೆಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ರಂಗಭೂಮಿ ಕಲಾವಿದರೊಂದಿಗೆ ವೇಷ ಧರಿಸಿ ವಿನೂತನ ಚಳವಳಿ ನಡೆಸಿದರು.

ಗಾಂಧಿನಗರದ ಗುಬ್ಬಿ ವೀರಣ್ಣ ರಂಗಮಂದಿರ ಮುಂಭಾಗ ಪ್ರತಿಭಟನೆ ನಡೆಸಿದ ಅವರು, ಕಳೆದ ಮೂರು ವರ್ಷಗಳಿಂದ ಗುಬ್ಬಿ ವೀರಣ್ಣ ರಂಗಮಂದಿರ ಮುಚ್ಚಲಾಗಿದೆ. ಐತಿಹಾಸಿಕ ಪ್ರಸಿದ್ಧವಾದ ಗುಬ್ಬಿ ವೀರಣ್ಣ ರಂಗಮಂದಿರ ಡಾ.ರಾಜ್‌ಕುಮಾರ್, ನರಸಿಂಹರಾಜ್ ಸೇರಿದಂತೆ ನೂರಾರು ಮೇರು ಕಲಾವಿದರಿಗೆ ಆಶ್ರಯ ನೀಡಿತ್ತು. ಆದರೆ ಈಗ ಹಾಳು ಕೊಂಪೆಯಂತಾಗಿದೆ. ಇಲ್ಲಿರುವ ಚಿತ್ರಪಟಗಳು ಮೂಲೆಗುಂಪಾಗಿವೆ. ಗುಬ್ಬಿ ವೀರಣ್ಣನವರ ಚಿತ್ರಪಟ ಧೂಳು ತುಂಬಿ ನೇತಾಡುತ್ತಿದೆ ಎಂದು ವಾಟಾಳ್ ತಿಳಿಸಿದರು.

ಸುಮಾರು 120 ವರ್ಷಗಳಿಗೂ ಮೇಲ್ಪಟ್ಟು ರಂಗಭೂಮಿಯ ವಿಶ್ವವಿದ್ಯಾಲಯವಾಗಿದ್ದ ಗುಬ್ಬಿ ಕಂಪನಿ ಹೆಸರಿನಲ್ಲಿ ಗಾಂಧಿ ನಗರದ ಗುಬ್ಬಿ ಥಿಯೇಟರ್ ಹೆಸರಿಲ್ಲದೆ ಮೂಲೆಗುಂಪಾಗಿರುವುದು ಅತ್ಯಂತ ಅಗೌರವ. ಇದನ್ನು ಕೂಡಲೇ ಪ್ರಾರಂಭಿಸಬೇಕು. ಗುಬ್ಬಿ ಕಂಪನಿ ಸೇರಿದಂತೆ ಐದು ನಾಟಕ ಕಂಪೆನಿಗಳು ಬೆಂಗಳೂರಿನಲ್ಲಿ ನಡೆಯುತ್ತಿದ್ದವು. ಆದರೆ ಎಲ್ಲವೂ ಮುಚ್ಚಿ ಹೋಗಿವೆ. ವೃತ್ತಿ ರಂಗಭೂಮಿಯನ್ನು ಉಳಿಸಲು ಸರ್ಕಾರ ಪ್ರತಿವರ್ಷ ನಾಟಕ ಕಂಪೆನಿಗಳಿಗೆ 25 ಲಕ್ಷ ರೂ. ಸಹಾಯಧನವನ್ನು ನೀಡಬೇಕೆಂದು ವಾಟಾಳ್ ಒತ್ತಾಯಿಸಿದರು.

Write A Comment