ಕರ್ನಾಟಕ

ವಿಶ್ವಾದ್ಯಂತ ತೆರೆ ಕಂಡ ‘ಬಾಹುಬಲಿ’ಯಿಂದ ಎಲ್ಲೆಲ್ಲಿ ಏನೆನಾಯಿತು …? ಮುಂದೆ ಓದಿ…

Pinterest LinkedIn Tumblr

Baahubali-movie

ಬೆಂಗಳೂರು, ಜು.10: ದುಬಾರಿ ವೆಚ್ಚದ ಟಾಲಿವುಡ್‌ನ ಬಾಹುಬಲಿ ಚಿತ್ರ ಇಂದು ವಿಶ್ವಾದ್ಯಂತ ತೆರೆ ಕಂಡಿದೆ. ಅಭಿಮಾನಿಗಳು ಚಿತ್ರ ವೀಕ್ಷಣೆಗೆ ಮುಗಿ ಬಿದ್ದಿದ್ದು, ರಾಜ್ಯದ ವಿವಿಧೆಡೆ ಸಣ್ಣಪುಟ್ಟ ಗಲಾಟೆಗಳು ನಡೆದಿವೆ.

ಇಂದು ಬೆಳಗ್ಗೆ 6 ಗಂಟೆಯಿಂದಲೇ ಬೆಂಗಳೂರಿನ ಕೆಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಆರಂಭಗೊಂಡಿದ್ದು, ಟಿಕೆಟ್ ಪಡೆಯಲು ರಾತ್ರಿಯಿಡೀ ಅಭಿಮಾನಿಗಳು ಕಾದು ಪ್ರಥಮ ಪ್ರದರ್ಶನವನ್ನೇ ವೀಕ್ಷಿಸಿ ಖುಷಿ ಪಟ್ಟಿದ್ದಾರೆ. ರಾಜಮೌಳಿ ಅವರ ಚಾಕಚಕ್ಯತೆಯನ್ನು ಪ್ರೇಕ್ಷಕರು ಮೆಚ್ಚಿದ್ದಾರೆ. ಪ್ರಭಾಸ್ ಅವರ ನಟನೆ ಜತೆಗೆ ಪ್ರಮುಖ ಪಾತ್ರದಲ್ಲಿ ಮಿಂಚಿರುವ ಸುದೀಪ್ ಅವರಿಗೆ ಪ್ರಶಂಸೆಗಳ ಸುರಿಮಳೆಯೇ ಹರಿದಿದೆ.

ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದಲ್ಲಿರುವ ಮಾರುತಿ ಹಾಗೂ ಶ್ರೀನಿವಾಸ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಗೊಳ್ಳುತ್ತಿದ್ದು, ಇಂದು ಮಾರ್ನಿಂಗ್ ಶೋ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಅಭಿಮಾನಿಗಳು ಥಿಯೇಟರ್‌ನ ಕಿಟಕಿ-ಬಾಗಿಲುಗಳನ್ನು ಮುರಿದು ಒಳನುಗ್ಗಿದ್ದಾರೆ. ಚಿತ್ರ ಪ್ರದರ್ಶನಗೊಳ್ಳುತ್ತಿದ್ದ ಸಂದರ್ಭದಲ್ಲಿ ತಳ್ಳಾಟ-ನೂಕಾಟ ಶುರುವಾಗಿ ಸ್ಥಳಕ್ಕಾಗಮಿಸಿದ ಪೊಲೀಸರು ಚಿತ್ರಮಂದಿರದ ಬಳಿ ನೆರೆದಿದ್ದ ಗುಂಪನ್ನು ಚದುರಿಸಿದ್ದಾರೆ.

ಇನ್ನು ರಾಯಚೂರಿನ ಪೂರ್ಣಿಮಾ ಚಿತ್ರಮಂದಿರದ ಬಳಿಯೂ ಘರ್ಷಣೆ ನಡೆದಿದ್ದು, ಟಿಕೆಟ್ ಸಿಗದಿದ್ದಕ್ಕೆ ಮತ್ತು ದರ ಹೆಚ್ಚಳ ಮಾಡಿದ್ದಕ್ಕೆ ಕೆಲವರು ಕಲ್ಲು ತೂರಾಟ ನಡೆಸಿದ್ದಾರೆ. 70ರೂ. ಇದ್ದ ಟಿಕೆಟ್ ಏಕಾಏಕಿ 300ರೂ.ಗೆ ಏರಿಸಿದ್ದು ಈ ಆಕ್ರೋಶಕ್ಕೆ ಕಾರಣವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದನ್ನು ಅರಿತ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಇನ್ನು ಕೋಲಾರ, ಗೌರಿಬಿದನೂರಿನಲ್ಲೂ ಚಿತ್ರ ಅದ್ಧೂರಿಯಾಗಿ ತೆರೆ ಕಂಡಿದೆ. ಭಾರತೀಯ ಚಿತ್ರರಂಗದಲ್ಲೇ ಭಾರೀ ನಿರೀಕ್ಷೆ ಹುಟ್ಟಿಸಿದ್ದ ಬಾಹುಬಲಿ ಓಪನಿಂಗ್‌ನಲ್ಲೇ ಹೊಸ ದಾಖಲೆ ನಿರ್ಮಿಸಿದೆ. ಸರಾಸರಿ ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಏಕಕಾಲದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಮೊದಲ ದಿನದ ಗಳಿಕೆಯೇ 50 ಕೋಟಿ ರೂ. ದಾಟಿದೆ.

Write A Comment