ಕರ್ನಾಟಕ

ಕ್ರಿಕೆಟ್ ಬೆಟ್ಟಿಂಗ್ ದಂಧೆ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಲು ಸರ್ಕಾರ ಸಿದ್ಧ: ಗೃಹ ಸಚಿವ ಜಾರ್ಜ್

Pinterest LinkedIn Tumblr

george

ಬೆಳಗಾವಿ (ಸುವರ್ಣ ಸೌಧ), ಜು.10: ರಾಜ್ಯದಲ್ಲಿನ ಕ್ರಿಕೆಟ್ ಬೆಟ್ಟಿಂಗ್ ದಂಧೆ ಪ್ರಕರಣದ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದ್ದು, ಸಿಬಿಐ ತನಿಖೆಗೆ ಒಪ್ಪಿಸಲು ಸರ್ಕಾರ ಸಿದ್ದವಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ವಿಧಾನಸಭೆಗೆ ತಿಳಿಸಿದರು.

ಇಂದು ಬೆಳಗ್ಗೆ ಸದನದ ಕಾರ್ಯ ಕಲಾಪಗಳು ಆರಂಭಗೊಳ್ಳುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು ನಿಲುವಳಿ ಸೂಚನೆಯ ಪೂರ್ವಭಾವಿ ಪ್ರಸ್ತಾಪದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಕ್ರಿಕೆಟ್ ಬೆಟ್ಟಿಂಗ್ ವಿಚಾರ ಪ್ರಸ್ತಾಪಿಸಿದರು. ಆಗ ಮಧ್ಯೆ ಪ್ರವೇಶಿಸಿದ ಗೃಹ ಸಚಿವರು, ಕ್ರಿಕೆಟ್ ಬೆಟ್ಟಿಂಗ್ ದಂಧೆ ಕೇವಲ ಹುಬ್ಬಳ್ಳಿ, ರಾಜ್ಯಕ್ಕಷ್ಟೇ ಸೀಮಿತವಾಗಿಲ್ಲ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೂ ವ್ಯಾಪಿಸಿದೆ. ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು, ಬಾಂಬೆ, ದೆಹಲಿಯಂಥ ಮಹಾನಗರಗಳಲ್ಲಿ ಸೀಮಿತವಾಗಿದ್ದ ಈ ದಂಧೆ ಈಗ ಇತರೆ ನಗರಗಳಿಗೂ ವ್ಯಾಪಿಸಿದೆ ಎಂದರು. ಹುಬ್ಬಳ್ಳಿಯಲ್ಲಿ ಬೆಟ್ಟಿಂಗ್ ದಂಧೆ ಬಯಲಿಗೆ ಬಂದ ಕೂಡಲೇ ರಾಜ್ಯ ಸರಕಾರ ಡಿಸಿಪಿ, ಕಾನ್‌ಸ್ಟೆಬಲ್ ಸೇರಿ ಹಲವರ ವಿರುದ್ದ ತಕ್ಷಣವೇ ಕ್ರಮ ಜರುಗಿಸಿದೆ. ರಾಜ್ಯ ಸರಕಾರ ಕ್ರಿಕೆಟ್ ಬೆಟ್ಟಿಂಗ್ ದಂಧೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ದಂಧೆಕೋರರು ಹೊರ ರಾಜ್ಯ, ಹೊರ ದೇಶಗಳಿದ್ದು ಬೆಟ್ಟಿಂಗ್ ದಂಧೆಯನ್ನು ನಿಯಂತ್ರಿಸುತ್ತಿದ್ದಾರೆ. ಆದರೂ, ರಾಜ್ಯ ಸರಕಾರ ತಪ್ಪಿತಸ್ಥರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿದೆ ಎಂದು ಜಾರ್ಜ್ ಸಮರ್ಥಿಸಿಕೊಂಡರು.

ಈ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಸರ್ಕಾರ ಕಠಿಣವಾದ ಕ್ರಮ ಕೈಗೊಳ್ಳುತ್ತಿದ್ದರೂ ವಿಚಾರದಲ್ಲಿ ಆರೋಪ ಮಾಡುವುದು ಪ್ರಚಾರಕ್ಕೆ ಎಂದರು. ಆಗ ಆಡಳಿತ ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದ ಉಂಟಾಯಿತು. ಮಧ್ಯೆ ಪ್ರವೇಶಿಸಿದ ಸಭಾಧ್ಯಕ್ಷರು ಮಾತಿನ ಚಕಮಕಿಗೆ ಇಳಿದಿದ್ದ ಸದಸ್ಯರಿಗೆ ಸುಮ್ಮನಿರುವಂತೆ ಸೂಚಿಸಿ, ಕ್ರಿಕೆಟ್ ಬೆಟ್ಟಿಂಗ್ ವಿಚಾರ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಕೊಡಲಾಗುವುದಿಲ್ಲ. ಬೇರೆ ರೂಪದಲ್ಲಿ ಪ್ರಸ್ತಾಪ ಮಾಡಿದರೆ ಚರ್ಚೆಗೆ ಕೊಡುವ ಭರವಸೆ ನೀಡಿದರು.

ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಕ್ರಿಕೆಟ್ ಬೆಟ್ಟಿಂಗ್ ಪಾಪ ಕೂಪದಲ್ಲಿ ಸಿಲುಕಿ ವಿದ್ಯಾರ್ಥಿಗಳು, ಯುವಜನರು ಹಾಗೂ ಸಾರ್ವಜನಿಕರು ನರಳುತ್ತಿದ್ದು, ಈ ದಂಧೆಯಲ್ಲಿ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ರಾಜಕಾರಣಗಳು ಶಾಮೀಲಾಗಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ಚರ್ಚೆಯಾಗಬೇಕು. ಈ ವಿಚಾರ ಖಾಸಗಿ ಸುದ್ದಿ ವಾಹಿನಿ ಮೂಲಕ ಬೆಳಕಿಗೆ ಬಂದಿದೆ. ಆದರೆ, ಸುದ್ದಿ ಪ್ರಸಾರ ಮಾಡಿದ ವಾಹಿನಿಗೆ ಪ್ರೋತ್ಸಾಹ ನೀಡುವ ಬದಲು ಕೇಸು ಹಾಕುವ ಕೆಲಸವಾಗುತ್ತಿದೆ ಎಂದು ಆರೋಪಿಸಿದರು.

Write A Comment