ಕರ್ನಾಟಕ

ಸಮಾಜ ಸುಧಾರಣೆಗೆ ತಮ್ಮ ಅರ್ಧದಷ್ಟು ಶೇರ್‌ಗಳನ್ನು ದಾನ ಮಾಡಿದ ಪ್ರೇಮ್ ಜೀ

Pinterest LinkedIn Tumblr

Azim-Premjiಬೆಂಗಳೂರು: ಮಿಲಿಯನ್, ಬಿಲಿಯನ್ ಗಳಿಸುವುದರಲ್ಲೇ ಕಾಲ ಕಳೆಯುವ ಅದೆಷ್ಟೋ ಮಂದಿ ಉದ್ಯಮಿಗಳ ನಡುವೆ ಐಟಿ ಜಗತ್ತಿನ ಪ್ರಭಾವಿ ಉದ್ಯಮಿ ಹಾಗೂ ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್ ಜೀ ಬೇರೆಯೇ ಸ್ಥಾನದಲ್ಲಿ ನಿಂತಿದ್ದಾರೆ. ಇದಕ್ಕೆ ಕಾರಣ ಅವರ ದಾನದ ಪ್ರತಿರೂಪ. ಹೌದು ಬಡ ಜನರಿಗಾಗಿ, ದೇಶದ ಅಭಿವೃದ್ಧಿಗಾಗಿ ಅಜೀಂ ಪ್ರೇಮ್ ಜೀ ಮಾಡುತ್ತಿರುವ ಕೆಲಸ ಶ್ಲಾಘನೀಯವೇ.

ಕಳೆದ ಬಾರಿಯಷ್ಟೇ ತಮಗೆ ಬಂದ ಲಾಭದ ಬಹುಕೋಟಿ ಹಣವನ್ನು ದಾನಮಾಡಿದ್ದ ಅಜೀಂ ಪ್ರೇಮ್ ಜೀ ಇದೀಗ ಮತ್ತೆ ದಾನ ಮಾಡಿದ್ದು, ತಮ್ಮ ಹೆಸರಿನಲ್ಲಿರುವ ಅರ್ಧದಷ್ಟು ಶೇರ್ ಗಳನ್ನು ಸಮಾಜ ಸುಧಾರಣೆಗೆ ದಾನಮಾಡಲು ಮುಂದಾಗಿದ್ದಾರೆ.

ಗುಣಮಟ್ಟದ ಶಿಕ್ಷಣ ಬಡಮಕ್ಕಳಿಗೂ ಸಿಗಬೇಕಿದ್ದು ಇದಕ್ಕೆ ಭಾರತದಲ್ಲಿರುವ ಶಾಲೆಗಳ ಅಭಿವೃದ್ಧಿಯಾಗಬೇಕು ಹಾಗೂ ಸಮಾಜ ಸುಧಾರಣೆ ಕಾಣಬೇಕೆಂಬ ಉದ್ದೇಶದಿಂದ ವಿಪ್ರೋದ ಬಿಲೇನಿಯರ್ ಎಂದೇ ಖ್ಯಾತಿ ಗಳಿಸಿರುವ ಅಜೀಂ ಪ್ರೇಮ್ ಜೀ ಅವರು ದಾನ ಮಾಡಲು ಮುಂದಾಗಿದ್ದಾರೆ. ಪ್ರಸ್ತುತ ವಿಪ್ರೋ ಸಂಸ್ಥೆಯಲ್ಲಿ ಸುಮಾರು 39 ರಷ್ಟು ಶೇರುಗಳನ್ನು ಪ್ರೇಮ್ ಜೀ ಹೊಂದಿದ್ದು, ಅದರಲ್ಲಿ ಸಮಾಜದ ಅಭಿವೃದ್ಧಿಗಾಗಿ ಪ್ರಸ್ತುತ ಶೇ.21.14 ರಷ್ಟು ಶೇರ್ ಗಳನ್ನು ದಾನ ನೀಡಿದ್ದಾರೆ.

ಈ ಹಿಂದೆಯೂ ಅಜೀಂ ಪ್ರೇಮ್ ಜೀ ಅವರು ತಮಗೆ ಬಂದ ಲಾಭದ ಹಣವಾದ 530 ಕೋಟಿ ಹಣವನ್ನು ದಾನ ಮಾಡಿದ್ದರು. ಇದೀಗ ಮತ್ತೊಮ್ಮೆ ತಮ್ಮ ಬಳಿ ಇರುವ ಅರ್ಧದಷ್ಟು ಶೇರ್ ಗಳನ್ನು ದಾನ ಮಾಡುವ ಮೂಲಕ ಪ್ರೇಮ್ ಜೀ ಅವರು ದಾನದ ಮಹಿಮೆಯ ಸಾರವನ್ನು ಸಮಾಜಕ್ಕೆ ಹೇಳಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅಜೀಂ ಪ್ರೇಮ್ ಜೀ ಅವರು, ಕಳೆದ 15 ವರ್ಷಗಳಿಂದಲೂ ಪರೋಪಕಾರಿ ಕೆಲಸಗಳ ಬಗ್ಗೆ ಇರುವ ನನ್ನ ನಂಬಿಕೆಗಳನ್ನು ಜೀವನದ ಕ್ರಿಯೆಯಾಗಿ ಪರಿವರ್ತಿಸಲು ಪ್ರಯತ್ನ ನಡೆಸಿಕೊಂಡು ಬಂದಿದ್ದೇನೆ. ಅಜೀಂ ಪ್ರೇಮ್ ಜೀ ಫೌಂಡೇಶನ್ ಸಾಮಾಜ ಸುಧಾರಣೆಗೆ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ.

ಸಮಾಜ ಸುಧಾರಣೆಗಾಗಿ ದುಡಿಯುವ ಸಂಸ್ಥೆಗಳು ಸಮಾಜ ಅಭಿವೃದ್ಧಿಯ ಕೆಲಸವನ್ನು ನೀತಿಯೆಂದು ಹಾಗೂ ಜವಾಬ್ದಾರಿಯುತ ಕೆಲಸವೆಂದು ದುಡಿದಾಗಲೇ ಸಮಾಜ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ. ಸಮಾಜದ ಅಭಿವೃದ್ಧಿಯನ್ನು ನಮ್ಮ ಸಂಸ್ಥೆ ಜವಾಬ್ದಾರಿಯೆಂದು ತೆಗೆದುಕೊಂಡಿದ್ದು, ಸಮಾಜ ಅಭಿವೃದ್ಧಿ ಕಾಣುವವರೆಗೂ ನಮ್ಮ ಈ ಪ್ರಯತ್ನ ಸಾಗುತ್ತಲೇ ಇರುತ್ತದೆ ಎಂದು ಹೇಳಿದ್ದಾರೆ.

Write A Comment