ಬೆಂಗಳೂರು: ಎಸ್ಎಸ್ಎಲ್ಸಿ ಪಾಸಾಗಿದ್ದರೆ ಸಾಕು ಸರ್ಕಾರವೇ ನೀಡುವ 3 ತಿಂಗಳ “ಪ್ರವಾಸಿ ಮಾರ್ಗದರ್ಶಿ ತರಬೇತಿ’ ಪಡೆದು ರಾಜ್ಯದ ಯಾವುದೇ ಪ್ರವಾಸಿ ತಾಣಗಳಲ್ಲಿ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಬಹುದು.
ರಾಜ್ಯದ ಪ್ರವಾಸಿ ತಾಣಗಳಲ್ಲಿ ಪ್ರವಾಸಿ ಮಾರ್ಗದರ್ಶಕರ ಕೊರತೆ ಇರುವ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಎಸ್ಎಸ್ಎಲ್ಸಿ ಉತ್ತೀರ್ಣರಾಗಿರುವವರಿಗೆ ಮೂರು ತಿಂಗಳ “ಪ್ರವಾಸಿ ಮಾರ್ಗದರ್ಶಿ ತರಬೇತಿ’ ಕಾರ್ಯಕ್ರಮ ಆರಂಭಿಸುವಂತೆ ಸೂಚಿಸಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಸದ್ಯದಲ್ಲೇ “ಪ್ರವಾಸಿ ಮಾರ್ಗದರ್ಶಿ ತರಬೇತಿ’ಗೆ 3 ತಿಂಗಳ ಡಿಪ್ಲೊಮಾ ಕೋರ್ಸು ಆರಂಭಿಸಲು ಮುಂದಾಗಿದ್ದು, ಕೋರ್ಸು ಆರಂಭಿಸಲು ಅಗತ್ಯ ಪಠ್ಯಕ್ರಮ, ಅಧ್ಯಾಪಕ ವರ್ಗ ಸೇರಿದಂತೆ ಎಲ್ಲಾ ಸೌಲಭ್ಯಗಳ ವ್ಯವಸ್ಥೆ ಮಾಡಿಕೊಂಡಿದೆ. ವಿಶ್ವವಿದ್ಯಾಲಯ ಜು.15ರಂದು ನಡೆಯಲಿರುವ ಅಕಾಡೆಮಿಕ್ ಕೌನ್ಸಿಲ್ ಸಭೆಯಲ್ಲಿ ಈ ಕೋರ್ಸು ಆರಂಭಿಸಲು ಅನುಮತಿ ಪಡೆದು ನಂತರ ಅಧಿಸೂಚನೆ ಪ್ರಕಟಿಸುವುದು ಬಹುತೇಕ ಖಚಿತವಾಗಿದೆ.
ಆಂಗ್ಲ- ವಿದೇಶಿ ಭಾಷೆಯಲ್ಲಿ ತರಬೇತಿ:
ಮೂರು ತಿಂಗಳ ತರಬೇತಿಯಲ್ಲಿ ಎರಡು ತಿಂಗಳು ಬೋಧನೆ ಮತ್ತು ಒಂದು ತಿಂಗಳು ಪ್ರಾಯೋಗಿಕ ತರಬೇತಿ ಇರುತ್ತದೆ. ವರ್ಷಕ್ಕೆ ಮೂರು ಬ್ಯಾಚ್ಗೆ ತರಬೇತಿ ದೊರೆಯಲಿದ್ದು, ಪ್ರತಿ ಬ್ಯಾಚ್ನಲ್ಲಿ ಮೂವತ್ತರಿಂದ ನಲವತ್ತು ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು. ಆಂಗ್ಲ ಭಾಷೆಯ ಜೊತೆಗೆ ಒಂದು ವಿದೇಶಿ ಭಾಷೆಯಲ್ಲೂ ತರಬೇತಿ ನೀಡಲಾಗುತ್ತದೆ. ವಿವಿಯಲ್ಲಿರುವ ವಿದೇಶಿ ಭಾಷಾ ಅಧ್ಯಾಪಕರಿಂದ ಪ್ರತಿ ಬ್ಯಾಚ್ಗೂ ಆಂಗ್ಲ ಭಾಷೆಯ ಜತೆಗೆ ಒಂದೊಂದು ಪ್ರತ್ಯೇಕ ವಿದೇಶಿ ಭಾಷೆಯಲ್ಲಿ ತರಬೇತಿ ನೀಡಲು ಚಿಂತಿಸಿರುವುದಾಗಿ ವಿವಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರದ್ದೇ ದುಡ್ಡು:
ಕೋರ್ಸಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಬೋಧನಾ ಶುಲ್ಕವನ್ನು ಸರ್ಕಾರವೇ ಬರಿಸಲಿದೆ. ಇದಕ್ಕಾಗಿ ಪ್ರವಾಸೋದ್ಯಮ ಇಲಾಖೆ ವಿವಿಗಳಿಗೆ ಸುಮಾರು 8 ಲಕ್ಷ ರೂ.ವರೆಗೆ ಸಹಾಯಧನ ನೀಡಲಿದೆ ಎಂದು ಹೇಳಲಾಗಿದೆ.
ವಿಟಿಯುನಲ್ಲಿ ತರಬೇತಿ ಆರಂಭ:
ಪ್ರವಾಸೋದ್ಯಮ ಇಲಾಖೆ ಬೆಂಗಳೂರು ವಿವಿಯಲ್ಲದೆ, ಬೆಳಗಾವಿಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು), ಮೈಸೂರು ವಿಶ್ವವಿದ್ಯಾಲಯ, ರಾಣಿಚೆನ್ನಮ್ಮ ವಿವಿ, ಧಾರವಾಡದ ಕರ್ನಾಟಕ ವಿವಿಗಳಿಗೂ ಈ ತರಬೇತಿ ಕಾರ್ಯಕ್ರಮ ಆರಂಭಿಸಲು ಪತ್ರ ಬರೆದಿದ್ದು, ಈಗಾಗಲೇ ವಿಟಿಯು ಮೊದಲ ಬ್ಯಾಚ್ಗೆ ಪ್ರವೇಶ ಪ್ರಕ್ರಿಯೆ ನಡೆಸಿ ತರಬೇತಿ ಆರಂಭಿಸಿದೆ.
ಎಸ್ಎಸ್ಎಲ್ಸಿ ಪಾಸಾಗಿರುವ 40 ವಿದ್ಯಾರ್ಥಿಗಳಿಗೆ ಮೊದಲ ಬ್ಯಾಂಚ್ನಲ್ಲಿ ಪ್ರವೇಶ ಕಲ್ಪಿಸಿದ್ದು, ಆಂಗ್ಲ ಭಾಷೆಯ ಜೊತೆಗೆ ಫ್ರೆಂಚ್ ಭಾಷೆಯಲ್ಲಿ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ತರಗತಿ ಬೋಧನೆ ಮುಗಿದಿದ್ದು, ಹಂಪಿ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ವಿದ್ಯಾರ್ಥಿಗಳನ್ನು ಪ್ರಾಯೋಗಿಕ ತರಬೇತಿಗೆ ಕಳುಹಿಸಲಾಗಿದೆ. ಆಗಸ್ಟ್ನಲ್ಲಿ ಈ ಬ್ಯಾಚ್ನ ತರಬೇತಿ ಪೂರ್ಣಗೊಳ್ಳಲಿದೆ. ಒಂದೊಂದು ಬ್ಯಾಚ್ಗೆ ಒಂದೊಂದು ವಿದೇಶಿ ಭಾಷೆಗಳಲ್ಲಿ ತರಬೇತಿ ನೀಡಲು ನಿರ್ಧರಿಸಿರುವುದಾಗಿ ವಿಟಿಯು ಕುಲಪತಿ ಡಾ.ಎಚ್.ಮಹೇಶಪ್ಪ “ಉದಯವಾಣಿ’ಗೆ ತಿಳಿಸಿದ್ದಾರೆ.
ಮಾರ್ಗದರ್ಶಕರ ಕೊರತೆ ಏಕೆ?
ಬೆಂಗಳೂರು ವಿವಿ ಸೇರಿದಂತೆ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು ಹಾಗೂ ಸಂಯೋಜಿತ ಕಾಲೇಜುಗಳಲ್ಲಿ ಪದವಿ ವಿದ್ಯಾಭ್ಯಾಸದಲ್ಲಿ “ಪ್ರವಾಸೋದ್ಯಮ’ ವಿಷಯ ಪರಿಚಯಿಸಲಾಗಿದೆ. ಪ್ರವಾಸೋದ್ಯಮದಲ್ಲಿ ಪದವಿ ಪಡೆದವರು ಆಡಳಿತಾತ್ಮಕ ಹುದ್ದೆಗಳಿಗೆ ಹೋಗುತ್ತಿದ್ದಾರೆಯೇ ಹೊರತು, ಪ್ರವಾಸಿ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಲು ಬಯಸುತ್ತಿಲ್ಲ. ಹಾಗಾಗಿ ರಾಜ್ಯದ ಪ್ರವಾಸಿ ತಾಣಗಳಲ್ಲಿ ಮಾರ್ಗದರ್ಶಕರ ಕೊರತೆ ಇದೆ. ಹಾಗಾಗಿ ಪ್ರವಾಸಿ ಮಾರ್ಗದರ್ಶಿ ತರಬೇತಿ ಕಾರ್ಯಕ್ರಮ ಆರಂಭಿಸಲು ರಾಜ್ಯದ ವಿವಿಧ ವಿವಿಗಳಿಗೆ ಪತ್ರ ಬರೆಯಲಾಗಿದೆ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು.
-ಉದಯವಾಣಿ