ಕರ್ನಾಟಕ

ಕಾವೇರಿ ಹಿನ್ನೀರಿನಲ್ಲಿ ಶ್ರವಣಪ್ಪನ ದರ್ಶನ

Pinterest LinkedIn Tumblr

basti_1ffffಕಾವೇರಿ ನದಿಗೆ ಅಡ್ಡಲಾಗಿ ಕನ್ನಂಬಾಡಿ  ಆಣೆಕಟ್ಟು  ನಿರ್ಮಿಸಿ  ರೈತರಿಗೆ  ವ್ಯವಸಾಯ  ಮಾಡಲು ಮಾಡಿಕೊಟ್ಟಿದ್ದು  ಇತಿಹಾಸ. ಅಣೆಕಟ್ಟೆ  ಕಟ್ಟಿದ ನಂತರ ಕಾವೇರಿ ನದಿಯ ಹಿನ್ನೀರ ಒಡಲೊಳಗೆ  ಕೆ. ಆರ್. ನಗರ , ಕೆ. ಆರ್. ಪೇಟೆ, ಪಾಂಡವಪುರ  ತಾಲೂಕುಗಳ  ಹಲವು  ಹಳ್ಳಿಗಳು  ಸೇರಿಹೋದವು.ಅಂತಹ  ಪ್ರದೇಶದಲ್ಲಿ   ಇಂದಿಗೂ   ನಮಗೆ  ಹಲವು ಕೌತುಕಗಳ   ತಾಣಗಳು  ಕಂಡುಬರುತ್ತವೆ . ಅಂತಹ ಪ್ರದೇಶವೇ   ಕೆ. ಆರ್. ಪೇಟೆ  ತಾಲೂಕಿನ ಬಸ್ತಿ ಹೊಸಕೋಟೆ .

ಬಸ್ತಿ ಹೊಸಕೋಟೆ  ಒಂದು ಸುಂದರ ತಾಣ.ಕಾವೇರಿ ಹಿನ್ನೀರಿನ  ಮಡಿಲಲ್ಲಿ  ಜೈನ  ಧರ್ಮದ  ಇತಿಹಾಸವನ್ನು  ತನ್ನ ಒಡಲಲ್ಲಿ  ಬಚ್ಚಿಟ್ಟುಕೊಂಡು   ಸಮಾಜದಿಂದ  ದೂರವೇ ಉಳಿದಿದೆ. ಸುಂದರ  ಹಿನ್ನೀರ ಒಡಲಲ್ಲಿ  ಇತಿಹಾಸ ಅಧ್ಯಯನ ಮಾಡಲು,ಹಿನ್ನೀರ ಮಡಿಲಲ್ಲಿ ವಿಹರಿಸಲು,ವಿವಿಧ  ಪಕ್ಷಿ  ವೀಕ್ಷಣೆ ಮಾಡಲು, ಗದ್ದಲದ  ಒತ್ತಡದ  ಜೀವನದ  ಬೇಸರ ಕಳೆದು ಪಡೆಯಲು ಈ  ಸುಂದರ  ಪ್ರಶಾಂತವಾದ ನಿರ್ಮಲ ತಾಣ ಯೋಗ್ಯವಾಗಿದೆ .

​ಬಸ್ತಿ ಹೊಸಕೋಟೆ  ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆ ತಾಲೂಕಿಗೆ  ಸೇರಿದ್ದು, ತಾಲೂಕು ಕೇಂದ್ರದಿಂದ  ೨೮ ಕಿಲೋಮೀಟರು ದೂರದಲ್ಲಿ ದಕ್ಷಿಣಕ್ಕೆ  ಮಾವಿನ  ಹಳ್ಳಿ ಸಮೀಪ ನೆಲೆಗೊಂಡಿದೆ. ಐತಿಹಾಸಿಕ   ದಾಖಲೆಗಳ   ಪ್ರಕಾರ   ಇದೊಂದು  ಜೈನರ   ಪವಿತ್ರ ಕ್ಷೇತ್ರವಾಗಿತ್ತು. ಹದಿನಾಲ್ಕು  ಎತ್ತರದ   ಮುದ್ದಾದ   ಬಾಹುಬಲಿ   ಮೂರ್ತಿಯನ್ನು  ಕಾಣಬಹುದಾಗಿದೆ , ಶಾಸನಗಳ  ರೀತ್ಯ  ಹೊಯ್ಸಳ  ದೊರೆ ವಿಷ್ಣುವರ್ಧನ ಮಹಾಪ್ರಧಾನ ದಂಡನಾಯಕ ಪುಣಿಸಮಯ್ಯ ಎಂಬವರು   ಬಸದಿ  ನಿರ್ಮಿಸಿ  ಮಾಣಿಕ್ಯದೊಡಲೂರು ಹಾಗು ಮಾವಿನಕೆರೆ  ಗ್ರಾಮಗಳನ್ನು ದಾನಮಾಡಿದ ಬಗ್ಗೆ  ಮಾಹಿತಿ ಇದೆ .  ಸುಂದರ ಗೊಮ್ಮಟ  ಮೂರ್ತಿಯ  ಕಾಲುಗಳಲ್ಲಿ  ಹಂಬನ್ನು  ಚಿತ್ರಿಸಿ  ಬಳಪದ ಕಲ್ಲಿನಿಂದ  ಮೂರ್ತಿ ರಚನೆ ಮಾಡಲಾಗಿದೆ .ಹಾಲಿ ಇಲ್ಲಿನ ಸ್ಥಳೀಯ  ಗ್ರಾಮದವರು ಈ ಮೂರ್ತಿಯನ್ನು ಪೂಜಿಸುತ್ತಾ   ಶ್ರವಣಪ್ಪನ  ಗುಡ್ಡ   ಎಂದು ಕರೆಯುತ್ತಾರೆ .

​ ಬಸ್ತಿ ಹೊಸಕೋಟೆ ಗೆ  ತಲುಪಲು  ಸಾರ್ವಜನಿಕ  ಸಾರಿಗೆ   ಕಡಿಮೆ ಇದೆ ಇದೆ.  ಪಾಂಡವಪುರ ತಾಲೂಕು  ಚಿನಕುರುಳಿ  ಯಿಂದ  ಅಥವಾ  ಕೆ. ಆರ್. ಪೇಟೆ ತಾಲೂಕು  ಬಲ್ಲೇನಹಳ್ಳಿ ಯಿಂದ   ಇಲ್ಲಿಗೆ   ಆಟೋಗಳು  ಅಥವಾ ಖಾಸಗಿ ವಾಹನಗಳು ಸಿಗುತ್ತವೆ  .  ಸ್ವಂತ ವಾಹನದಲ್ಲಿ ಬರುವವರು  ಬೆಂಗಳೂರಿನಿಂದ  ಮಂಡ್ಯ,  ಪಾಂಡವಪುರ  ರೈಲ್ವೆ ನಿಲ್ದಾಣ ,  ಚಿನಕುರುಳಿ , ಬನ್ನಂಗಾಡಿ  ಮೂಲಕ   ಬಲ್ಲೇನಹಳ್ಳಿ ರಸ್ತೆಯಲ್ಲಿ   ಮಾಚಗೊನಹಳ್ಳಿ ತಲುಪಿ ಅಲ್ಲಿಂದ  ಬಸ್ತಿ ಹೊಸಕೋಟೆ ಹಿನ್ನೀರು ಪ್ರದೇಶ ತಲುಪಬಹುದು  ಸುಮಾರು  ೧೭೦ ಕಿಲೋಮೀಟರು  ಆಗುತ್ತದೆ.

ಮೈಸೂರಿನಿಂದ  ಕೆ. ಆರ್. ಎಸ್. ನಾರ್ತ್ ಬ್ಯಾಂಕ್  ಮೂಲಕ  ಬನ್ನಂಗಾಡಿ  ತಲುಪಿ ಅಲ್ಲಿಂದ  ಬಸ್ತಿಹೊಸಕೋಟೆ ತಲುಪಲು  ೫೫  ಕಿಲೋಮೀಟರು ಆಗುತ್ತದೆ.ಊಟ ತಿಂಡಿ ವ್ಯವಸ್ಥೆ  ಪ್ರವಾಸಿಗರು ತಾವೇ ಮಾಡಿಕೊಂಡು ಹೋಗಬೇಕು, ಅಲ್ಲಿ  ಯಾವುದೇ ವ್ಯವಸ್ಥೆ ಇರುವುದಿಲ್ಲ,   ತುಂಬಾ  ಶುಚಿಯಾಗಿರುವ   ಈ ಪ್ರದೇಶದಲ್ಲಿ  ಕೊಳಕು ಮಾಡದೆ  ವಿಹಾರ ಮಾಡಿ ಬಂದರೆ  ಬಹಳ ಒಳ್ಳೆಯದು . ಕುಟುಂಬದೊಡನೆ  ಒಂದು ದಿನ ಕಳೆಯಲು ಒಂದು ಉತ್ತಮ ತಾಣ ಇದು .

Write A Comment