ಕರ್ನಾಟಕ

ಸುವರ್ಣ ಸೌಧದಲ್ಲಿ ಮುಂದಿನ ಅಧಿವೇಶನ ನಡೆಯುವುದು ಅನುಮಾನ

Pinterest LinkedIn Tumblr

Suvarna-soudha-belagavi-1ಬೆಳಗಾವಿ, ಜು.9-  ಅಖಂಡ ಕರ್ನಾಟಕ ಒಂದೇ ಎಂಬ ಏಕೈಕ ಕಾರಣಕ್ಕಾಗಿ ಹಲವರ ವಿರೋಧದ ನಡುವೆಯೂ ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಿರ್ಮಾಣ ಮಾಡಿರುವ ಸುವರ್ಣಸೌಧದಲ್ಲಿ ಮುಂದಿನ  ಚಳಿಗಾಲದ ಅಧಿವೇಶನ ನಡೆಯುವುದು ಅನುಮಾನ.! ಕಾರಣ ಕಬ್ಬು ಬೆಳೆಗಾರರ ಸಮಸ್ಯೆ ಮತ್ತು ರೈತರ ಆತ್ಮಹತ್ಯೆ.!

ಪ್ರತಿ ಬಾರಿ ಬೆಳಗಾವಿಯಲ್ಲಿ ಅಧಿವೇಶನ ಪ್ರಾರಂಭಕ್ಕೂ ಮುನ್ನ ಸರ್ಕಾರವನ್ನು ರತ್ನಗಂಬಳಿ ಮೂಲಕ ಸ್ವಾಗತ ನೀಡುವುದೇ ರೈತನ ಸಾವು. ಮಳೆಗಾಲ ಇಲ್ಲವೇ ಚಳಿಗಾಲದ ಅಧಿವೇಶನದ ವೇಳೆ ಒಂದಿಲ್ಲೊಂದು ಕಾರಣಗಳಿಂದ ರೈತ ಆತ್ಮಹತ್ಮೆ ಮಾಡಿಕೊಳ್ಳುತ್ತಾನೆ. ಇದು  ಸರ್ಕಾರಕ್ಕೆ ಮುಜುಗರ ಉಂಟುಮಾಡಿದರೆ, ಉರಿಯುವ ಮನೆಯಲ್ಲಿ ಗಳ ಹಿರಿದರು ಎಂಬ ಗಾದೆಯಂತೆ ಪ್ರತಿಪಕ್ಷಗಳು ಇದನ್ನೇ ಅಸ್ತ್ರ ಮಾಡಿಕೊಂಡು ಸರ್ಕಾರವನ್ನು ಹಣಿಯಲು ಮುಂದಾಗುತ್ತವೆ. ಹೀಗಾಗಿ ರಾಜ್ಯ ಸರ್ಕಾರ ಮುಂದಿನ ಡಿಸೆಂಬರ್ ಅಂತ್ಯಕ್ಕೆ ಇಲ್ಲಿ ನಡೆಸಬೇಕಾಗಿದ್ದ ಚಳಿಗಾಲದ ಅಧಿವೇಶನವನ್ನು ಬೆಂಗಳೂರಿನಲ್ಲಿಯೇ ನಡೆಸಲು ತೀರ್ಮಾನಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸಾಮಾನ್ಯವಾಗಿ ಮಳೆಗಾಲ ಮತ್ತು ಚಳಿಗಾಲದ ಅಧಿವೇಶನವನ್ನು ಇಲ್ಲಿನ ಸುವರ್ಣಸೌಧದಲ್ಲಿ ವರ್ಷಕ್ಕೆ ಎರಡು ಬಾರಿ ನಡೆಸಲು ಪ್ರತಿ ಸರ್ಕಾರಗಳು ಒಂದು ಸಾಲಿನ ನಿರ್ಣಯವನ್ನು ಕೈಗೊಂಡಿದ್ದವು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದ ವೇಳೆ ನಡೆದ ಮೊದಲ ಅಧಿವೇಶನದಲ್ಲೇ ಈ ತೀರ್ಮಾನವಾಗಿತ್ತು. ಇದರಂತೆ ಜೂನ್ – ಜುಲೈ ತಿಂಗಳಿನಲ್ಲಿ ಮಳೆಗಾಲದ 10 ದಿನ ಹಾಗೂ ಡಿಸೆಂಬರ್ ತಿಂಗಳಿನಲ್ಲಿ 10 ದಿನ ಚಳಿಗಾಲದ ಅಧಿವೇಶನ ನಡೆಸಬೇಕೆಂಬುದು ಸರ್ಕಾರದ ಉದ್ದೇಶವಾಗಿತ್ತು. ಆದರೆ ಇತ್ತೀಚೆಗೆ ಅಧಿವೇಶನದ ಪ್ರಾರಂಭದಲ್ಲೇ  ನೂರೆಂಟು ವಿಘ್ನಗಳು ಎದುರಾಗುತ್ತಿವೆ. ಹೀಗಾಗಿ ಚಳಿಗಾಲದ ಅಧಿವೇಶನವನ್ನು ನಡೆಸಬೇಕೆಂಬ ಇಚ್ಛೆಯೂ ಸರ್ಕಾರಕ್ಕೆ ಇದ್ದಂತೆ ಕಾಣುತ್ತಿಲ್ಲ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಸಚಿವರೊಬ್ಬರು.

ಕಳೆದ ಡಿಸೆಂಬರ್‌ನಲ್ಲಿ ನಡೆದ ಚಳಿಗಾಲದ ಅಧಿವೇಶನದ ವೇಳೆ ಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬಿನ ಬಾಕಿ  ಹಣ ನೀಡುತ್ತಿಲ್ಲ ಎಂಬ ಕಾರಣಕ್ಕಾಗಿ ವಿಠ್ಠಲ್ ಅರಬಾವಿ ಎಂಬ ರೈತ ಸುವರ್ಣಸೌಧದ ಮುಂದೆಯೇ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಭಾರೀ ಇರಿಸುಮುರಿಸು ತಂದಿತ್ತು. ಇನ್ನು ಈ ಬಾರಿಯ ಮಳೆಗಾಲದ ಅಧಿವೇಶನ ಆರಂಭಕ್ಕೂ ಮುನ್ನವೇ ಸಾಲ ಬಾಧೆ ತಾಳಲಾರದೆ ಅಂಕಲಗಿ ಗ್ರಾಮದ ರೈತ ಗುರುನಾಥ್ ಸಾವಿಗೆ ಶರಣಾಗಿದ್ದ. ಹೀಗೆ ಪ್ರತಿ ಅಧಿವೇಶನದಲ್ಲೂ ಇಂತಹದ್ದೇ ಪ್ರಕರಣಗಳು ಮರುಕಳಿಸುತ್ತಿರುವುದರಿಂದ ಸರ್ಕಾರ ಚಳಿಗಾಲದ ಅಧಿವೇಶನವನ್ನು ಮುಂದೂಡಲು ಮುಂದಾಗಿದೆ ಎಂದು ತಿಳಿದು ಬಂದಿದೆ.

ಮುಂದಿದೆ ಮಾರಿಹಬ್ಬ : ಇನ್ನು ಡಿಸೆಂಬರ್ ತಿಂಗಳಿನಲ್ಲಿ ಚಳಿಗಾಲದ ಅಧಿವೇಶನ ಆರಂಭವಾದರೂ ಸರ್ಕಾರಕ್ಕೆ ಮತ್ತೆ ರೈತರ ಆತ್ಮಹತ್ಯೆ ಭೂತ ಬಿಡುವ ಲಕ್ಷಣಗಳಂತೂ ಕಾಣುತ್ತಿಲ್ಲ. ಈ ಸಮಯಕ್ಕೆ ಸರಿಯಾಗಿ ಕಬ್ಬು ಅರೆಯುವ ಸಮಯ ಬರುತ್ತದೆ.ಈ ಭಾಗದಲ್ಲಿ ಸರಿಸುಮಾರು 20 ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ರೈತರು ಕಬ್ಬನ್ನು ಬೆಳೆಯುತ್ತಾರೆ. ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಂದ ಕಬ್ಬು ಖರೀದಿ ಮಾಡಿದರೂ ನಿಗದಿತ ಸಮಯಕ್ಕೆ ಸರಿಯಾಗಿ  ಹಣ ಪಾವತಿ ಮಾಡಿರುವುದಿಲ್ಲ. ಇದೇ ಕಾರಣಕ್ಕಾಗಿ ಸರ್ಕಾರದ ಮೇಲೆ ಒತ್ತಡ ತಂತ್ರ  ಹಾಕುವ ಉದ್ದೇಶದಿಂದಲೋ, ಇಲ್ಲವೆ ಸಾಲಬಾಧೆ ತಾಳಲಾರದೆ ಸಾವಿಗೆ ಶರಣಾಗುತ್ತಾನೆ.ಈ ಎಲ್ಲ ಕಾರಣಗಳಿಗಾಗಿಯೇ ಮುಂದಿನ ಡಿಸೆಂಬರ್‌ನಲ್ಲಿ ನಡೆಯಬೇಕಾಗಿರುವ ಚಳಿಗಾಲದ ಅಧಿವೇಶನದ ಮೇಲೆ ಕಾರ್ಮೋಡ ಆವರಿಸಿದೆ.
ವೈ.ಎಸ್.ರವೀಂದ್ರ

Write A Comment