ಕರ್ನಾಟಕ

ಕಿಮ್ಸ್ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಸಾವು

Pinterest LinkedIn Tumblr

Kims-hospital

ಬೆಂಗಳೂರು,ಜು.9-ಕಿಮ್ಸ್  ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಸಾವು ಮುಂದುವರೆದಿದ್ದು, ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ.  ನಿನ್ನೆ ಎರಡು ಶಿಶುಗಳು ಮೃತಪಟ್ಟಿದ್ದು , ಇಂದು ಕೂಡ ಬೆಳಗ್ಗೆ ಎರಡು ಹಸುಗೂಸುಗಳು ಮರಣ ಹೊಂದಿವೆ. ಪೋಷಕರಲ್ಲಿ ಆಕ್ರೋಶ ಹೆಚ್ಚಾಗಿದೆ.

ಇದಲ್ಲದೆ ಇನ್ನು ಹಲವು ಶಿಶುಗಳು ಕೊನೆಯುಸಿರೆಳೆದಿವೆ ಎಂದು ಹೇಳಲಾಗುತ್ತಿದ್ದು ಆದರೆ ಆಸ್ಪತ್ರೆಯ ವೈದ್ಯಾಧಿಕಾರಿಗಳು ಸ್ಪಷ್ಟನೆ ನೀಡುತ್ತಿಲ್ಲ.  ಇಂದು ಬೆಳಗ್ಗಿನಿಂದಲೇ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಧುಶಂಕರ್ ಅವರು ಮಕ್ಕಳ ತಜ್ಞರು ಹಾಗೂ ಹಿರಿಯ ವೈದ್ಯರ ಜೊತೆಗೂಡಿ ಸಭೆ ನಡೆಸುತ್ತಿದ್ದು, ಶಿಶುಗಳ ಮರಣಕ್ಕೆ ಕಾರಣ ಏನೆಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.  ಇದೇ ವೇಳೆ ಮೃತಪಟ್ಟ ಶಿಶುಗಳ ಪೋಷಕರು ಸಾವಿಗೆ ನಿಖರ ಕಾರಣ ನೀಡುವವರೆಗೂ ಶವವನ್ನು ಕೊಂಡೊಯ್ಯುವುದಿಲ್ಲ ಎಂದು  ಪಟ್ಟು ಹಿಡಿದಿರುವುದರಿಂದ ಸ್ಥಳದಲ್ಲೇ ಗೊಂದಲ ಸೃಷ್ಟಿಯಾಗಿದೆ.

ಸುಮಾರು 25 ಶಿಶುಗಳನ್ನು ಇಲ್ಲಿನ ನಿಗಾಘಟಕಗಳಲ್ಲಿ(ಇನ್‌ಕ್ಯೂಬೇಟರ್) ಘಟಕದಲ್ಲಿರಿಸಲಾಗಿದ್ದು, ಅದರಲ್ಲಿ ಎರಡು ಶಿಶುಗಳು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಸುಮಾರು 12 ಮಂದಿ ತಮ್ಮ ಶಿಶುಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.  ಇನ್ನು ಇಲ್ಲಿ 10ಕ್ಕೂ ಹೆಚ್ಚು ಶಿಶುಗಳಿದ್ದು , ಯಾವುದೇ ಅಪಾಯವಿಲ್ಲ ಎಂದು ಹೇಳಲಾಗುತ್ತಿದ್ದರೂ ಪೋಷಕರಲ್ಲಿ ಆತಂಕ ದೂರವಾಗಿಲ್ಲ. ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಯಾವುದೇ ಗಲಾಟೆಗೆ ಆಸ್ಪದ  ನೀಡದೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.  ಕೆಲವು ಪೋಷಕರಿಗೆ ಶಿಶುಗಳ ಸಾವಿನ ಬಗ್ಗೆ ಡೆತ್ ಸರ್ಟಿಫಿಕೇಟ್ ನೀಡಿದ್ದು, ಅದರಲ್ಲಿ ಕಡಿಮೆ ತೂಕವಿರುದರಿಂದ ಸ್ವಾಭಾವಿಕವಾಗಿ ಶಿಶು ಸಾವನ್ನಪ್ಪಿದೆ. ಇದರಲ್ಲಿ ವೈದ್ಯರ ಲೋಪವಿಲ್ಲ ಎಂದು ತಿಳಿಸಲಾಗಿದೆ.  ಇದರ ನಡುವೆ ಮಕ್ಕಳ ಹಕ್ಕು ಆಯೋಗದ ಕೆಲ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Write A Comment