ಕರ್ನಾಟಕ

ಹಾಸಿಗೆ- ದಿಂಬು ಖರೀದಿಯಲ್ಲಿ ಅವ್ಯವಹಾರ : ಸದನದಲ್ಲಿ ಕೋಲಾಹಲ

Pinterest LinkedIn Tumblr

sweekerಬೆಳಗಾವಿ, ಜು.7- ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಪರಿಶಿಷ್ಟ ಜಾತಿ, ವರ್ಗದ ಹಾಸ್ಟೆಲ್‌ಗಳಲ್ಲಿ ಹಾಸಿಗೆ ಮತ್ತು ದಿಂಬು ಖರೀದಿಯಲ್ಲಿ ನಡೆದಿರುವ 19 ಕೋಟಿ ರೂ.ಅವ್ಯವಹಾರ ಪ್ರಕರಣವನ್ನು ಜಂಟಿ ಸದನ ಸಮಿತಿಗೆ ಒಪ್ಪಿಸಬೇಕೆಂದು ಪ್ರತಿಪಕ್ಷಗಳು  ಪಟ್ಟು ಹಿಡಿದ ಪರಿಣಾಮ ತೀವ್ರ ಮಾತಿನ ಚಕಮಕಿ ನಡೆದು ಸದನವನ್ನು ಕೆಲಕಾಲ ಮುಂದೂಡಿದ ಪ್ರಸಂಗ ವಿಧಾನಪರಿಷತ್‌ನಲ್ಲಿಂದು ನಡೆಯಿತು.

ಸದನ ಆರಂಭವಾಗುತ್ತಿದ್ದಂತೆ ಸಭಾಪತಿ ಶಂಕರಮೂರ್ತಿ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಳ್ಳಲು ಮುಂದಾದರು. ಈ ವೇಳೆ ಪ್ರತಿಪಕ್ಷಗಳ  ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಜಂಟಿ ಸದನ ಸಮಿತಿಗೆ ಪ್ರಕರಣವನ್ನು ಒಪ್ಪಿಸಬೇಕೆಂದು ಸದನದ ಬಾವಿಗಿಳಿದು ಪ್ರತಿಭಟನೆ ಮುಂದುವರೆಸಿದರು.
ವಿಷಯ ಪ್ರಸ್ತಾಪಿಸಿದ ಕೆ.ಎಸ್.ಈಶ್ವರಪ್ಪ ಎಸ್ಸಿ, ಎಸ್ಟಿ ಹಾಸ್ಟೆಲ್‌ಗಳ ಹಾಸಿಗೆ ಮತ್ತು ದಿಂಬು  ಖರೀದಿಯಲ್ಲಿ 19 ಕೋಟಿ ಗೂ. ಅಧಿಕ  ಅವ್ಯವಹಾರ ನಡೆದಿದೆ ಎಂದು ಸಮಾಜ ಕಲ್ಯಾಣ ಸಚಿವ  ಎಚ್.ಆಂಜನೇಯ ಅವರೇ ಒಪ್ಪಿಕೊಂಡಿದ್ದಾರೆ. ಸಿಐಡಿ ತನಿಖೆಯಿಂದ ನಿಷ್ಪಕ್ಷಪಾತ ತನಿಖೆ ನಡೆಯಲು ಸಾಧ್ಯವಿಲ್ಲ. ಹೀಗಾಗಿ ಜಂಟಿ ಸದನ ಸಮಿತಿಗೆ ಒಪ್ಪಿಸಬೇಕೆಂದು ಆಗ್ರಹ ಮಾಡಿದರು. ನಮಗೆ ಸಚಿವರ ಮೇಲೆ ಎಳ್ಳಷ್ಟು ಅನುಮಾನವಿಲ್ಲ.

ಈ ಪ್ರಕರಣದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಯಾವುದೇ ಪಕ್ಷದವರು ಭಾಗಿಯಾಗಿದ್ದರೂ ಶಿಕ್ಷೆಯಾಗಬೇಕು. ಸಿಐಡಿಯಲ್ಲಿ ಈಗಾಗಲೇ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದು, ವಿಚಾರಣಾ ಹಂತದಲ್ಲಿದೆ. ಸದನ ಸಮಿತಿ ರಚಿಸಿ ವಿಚಾರಣೆಗೆ ಇಂತಿಷ್ಟು ಸಮಯವೆಂದು  ನಿಗದಿ ಪಡಿಸಿ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಅಭ್ಯಂತರವಿಲ್ಲ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನು ಅಹಿಂದ ಪರ ಎಂದು ಹೇಳುತ್ತಿದ್ದಾರೆ. ದಲಿತರಿಗೆ ಸೇರಿದ ಈ ಪ್ರಕರಣವನ್ನು ಸದನ ಸಮಿತಿಗೆ ಒಪ್ಪಿಸಲು ಹಿಂಜರಿಕೆ ಏಕೆ. ಯಾವುದೇ ಕಾರಣಕ್ಕೂ ದಲಿತರ ಅನುದಾನವನ್ನ ಲೂಟಿ ಹೊಡೆಯಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು. ಈ ಸದನದ ಮೂಲಕ ಲೂಟಿಕೋರರಿಗೆ ಕಠಿಣ ಸಂದೇಶ ರವಾನಿಸಬೇಕಾದರೆ ಸದನ ಸಮಿತಿ ರಚನೆಯಾಗಬೇಕು. ಇದು ಸದಸ್ಯರ ಅಭಿಪ್ರಾಯವಾಗಿದ್ದು,

ಸಮಿತಿ ರಚಿಸುವಂತೆ ಮನವಿ ಮಾಡಿದರು. ಈ ವೇಳೆ ಜೆಡಿಎಸ್‌ನ ಬಸವರಾಜ ಹೊರಟ್ಟಿ ನಮಗೆ ಸಚಿವರ ಬಗ್ಗೆ ಯಾವುದೇ ಅನುಮಾನವಿಲ್ಲ. ಇದರಲ್ಲಿ  ಅಧಿಕಾರಿಗಳು ಹಾಗೂ ಯಾವುದೇ ಪಕ್ಷದವರು ಭಾಗಿಯಾಗಿದ್ದರೆ ಕಾನೂನಿನ ಪ್ರಕಾರ ಶಿಕ್ಷೆಯಾಗುತ್ತದೆ. ಜಂಟಿ ಸದನ ಸಮಿತಿಗೆ ಒಪ್ಪಿಸಲು ನಿವೇಕೆ ಹಿಂದೇಟು ಹಾಕುತ್ತಿದ್ದೀರಿ. ಸರ್ಕಾರ ತನ್ನ ತೀರ್ಮಾನವೇನೆಂದು ಪ್ರಕಟಿಸಬೇಕೆಂದು ಒತ್ತಾಯಿಸಿದರು.  ಸರ್ಕಾರದ ಪರವಾಗಿ ಸಭಾನಾಯಕ ಎಸ್.ಆರ್.ಪಾಟೀಲ್ ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಭ್ರಷ್ಟರಿಗೆ ಅವಕಾಶ ನೀಡುವುದಿಲ್ಲ. ಪಾರದರ್ಶಕ ಆಡಳಿತ ಭ್ರಷ್ಟಾಚಾರ ರಹಿತ ಆಡಳಿತ  ಸಿ.ಎಂ.ಸಿದ್ದರಾಮಯ್ಯನವರ ದೃಢನಿಲುವು. ಇದರಲ್ಲಿ ಯಾರೇ ಭಾಗಿಯಾಗಿದ್ದರೂ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸಿ (ಚಾರ್ಜ್‌ಶೀಟ್) ತಪ್ಪಿತಸ್ಥರನ್ನು ಬಂಧಿಸಿ ಜೈಲಿಗೆ ಕಳುಹಿಸುತ್ತಾರೆ.

ಇದರ ಬಗ್ಗೆ ಅನುಮಾನ ಬೇಡ  ಎಂದರು. ಎಸ್ಸಿ, ಎಸ್ಟಿಗೆ ಮೀಸಲಿಟ್ಟ ಅನುದಾನವನ್ನು ಕಾಲಮಿತಿಯಲ್ಲಿ ಬಳಕೆ ಮಾಡದಿದ್ದರೆ ಅಂತಹವರ ಮೇಲೆ ಕ್ರಿಮಿನಲ್ ಕೇಸು ಹಾಕುವ ಕಾಯ್ದೆಯನ್ನು ರಾಷ್ಟ್ರದಲ್ಲೇ ಮೊದಲ ಬಾರಿಗೆ ಜಾರಿಗೆ ತಂದಿದ್ದು, ನಮ್ಮ ಸರ್ಕಾರ ಸಿಐಡಿಯಿಂದ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಪ್ರತಿ ಪಕ್ಷಗಳ ಸದಸ್ಯರು ತಮ್ಮ ಧರಣಿ ಕೈ ಬಿಡಬೇಕೆಂದು ಮನವಿ ಮಾಡಿದರು. ಇದಕ್ಕೆ ಆಕ್ಷೇಪಿಸಿದ ಈಶ್ವರಪ್ಪ ಸಿದ್ದರಾಮಯ್ಯ ನವರ ಗುಣಗಾನ ಮಾಡುವುದನ್ನು ಬಟ್ಟು ದಲಿತರಿಗೆ ನ್ಯಾಯ ಒದಗಿಸಿಕೊಡಿ. ಇಲ್ಲದಿದ್ದರೆ ಕಾಂಗ್ರೆಸ್ ಭ್ರಷ್ಟರಿಗೆ  ರಕ್ಷಣೆ ನೀಡುತ್ತದೆ ಎಂಬ ಆರೋಪ ಬರುತ್ತದೆ.  ಒಂದು ಕಡೆ ಲೋಕಾಯುಕ್ತರನ್ನು ರಕ್ಷಣೆ ಮಾಡಲು ಹೋರಡುತ್ತೀರಿ, ಇನ್ನೊಂದು ಕಡೆ ಲೂಟಿಕೋರರಿಗೆ ಕಾನೂನಿನ ರಕ್ಷಣೆ ಕೊಡುತ್ತೀರಿ. ಹಾಗಾದರೆ ಕಾಂಗ್ರೆಸ್ ಸರ್ಕಾರ ಭ್ರಷ್ಟರಿಗೆ ಲೈಸೆನ್ಸ್ ನೀಡಲಿ ಎಂದು ಕೆಣಕಿದರು. ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷದವರ ನಡುವೆ ತೀವ್ರ ವಾಗ್ವಾದ ಉಂಟಾದ್ದರಿಂದ ಸಭಾಪತಿ  ಸದನವನ್ನು ಕೆಲಕಾಲ ಮುಂದೂಡಿದರು.

**************

Write A Comment