ಮೈಸೂರಿನ ರಂಗನತಿಟ್ಟು ಪಕ್ಷಿಧಾಮದಲ್ಲಿ ಹಕ್ಕಿಗಳದ್ದೇ ಕಲರವ. ದಿನ ಬೆಳಗಾದರೆ ಸಾಕು, ಅಲ್ಲಿನ ಪ್ರತಿಯೊಂದು ಮರದ ಮೇಲೆ ಹಾಗೂ ಹರಿಯುವ ನದಿಯ ನಡುವೆ ಇರುವ ಕಲ್ಲು ಬಂಡೆಗಳ ಮೇಲೂ ಹಕ್ಕಿಗಳು ಕುಳಿತು ಹಾಡು ಹೇಳುತ್ತವೆ. ಸೂರ್ಯನ ಬಿಸಿಲು ಏರುತ್ತಲೇ ಮರದ ಮರೆಯಲ್ಲಿನ ತಂಪಿನ ಜಾಗ ಹುಡುಕಿಕೊಂಡು ಸುಮ್ಮನೇ ಕುಳಿತುಕೊಳ್ಳುವ ಹಕ್ಕಿಗಳು ಸಂಜೆಯಾಗುತ್ತಲೇ ಮತ್ತೆ ತಮ್ಮಿಷ್ಟದಂತೆ ಹಾಡುತ್ತಲೇ ಹರಿವ ಹೊಳೆಗೆ ಇಳಿಯುತ್ತವೆ. ತಿನ್ನಲು ಒಂದಿಷ್ಟು ಜಲಚರಗಳನ್ನು ಬೇಟೆಯಾಡುತ್ತವೆ. ಬಳಿಕ ಬೆಳಕು ಮಾಯವಾಗುತ್ತಲೇ ಮರಳಿ ತಮ್ಮ ವಾಸಸ್ಥಾನ ಸೇರಿಕೊಳ್ಳುವ ಬಣ್ಣ-ಬಣ್ಣದ ಹಕ್ಕಿಗಳ ಸೋಜಿಗದ ದಿನಚರಿ ಗಮನಸೆಳೆಯುತ್ತದೆ. ಅದರಲ್ಲೂ ಅಲ್ಲಿರುವ ಬಹುತೇಕ ಎಲ್ಲ ಹಕ್ಕಿಗಳು ತಮ್ಮ ಸಂತಾನೋತ್ಪತ್ತಿ ಕ್ರಿಯೆಯನ್ನು ಮುಗಿಸಿ, ತಮ್ಮ ತಮ್ಮ ಮರಿ ಹಕ್ಕಿಗಳಿಗೆ ಗುಟುಕು ನೀಡುವ ಕೆಲಸದಲ್ಲಿ ಮಗ್ನವಾಗಿವೆ.
ಆದರೂ ಸಹ ಕೆಲವು ಹಕ್ಕಿಗಳು ತಡವಾಗಿ ಮೊಟ್ಟೆ ಇಟ್ಟು ಕಾವು ಕೊಡುವುದರಲ್ಲಿ ತಲ್ಲೀನವಾಗಿರುವುದನ್ನು ಕಾಣಬಹುದು. ರಂಗನತಿಟ್ಟಿನ ಪ್ರಮುಖ ಆಕರ್ಷಣೆ ಅಂದರೆ ಪ್ರತಿವರ್ಷವೂ ಕಲ್ಲು ಬಂಡೆಯ ಮೇಲೆಯೇ ಮೊಟ್ಟೆ ಇಟ್ಟು ಮರಿ ಮಾಡುವ ರೀವರ್ಟರ್ನ್ ಹಕ್ಕಿ. ಸಾಮಾನ್ಯವಾಗಿ ಸದಾ ಜೊತೆ-ಜೊತೆಯಾಗಿಯೇ ಇರುವ ರೀವರ್ಟರ್ನ್ ಹಕ್ಕಿಗಳು ರಾಜಾರೋಷವಾಗಿ ತಮಗೆ ಇಷ್ಟಬಂದಂತೆ ಹಾರಾಡುತ್ತ ಹರಿವ ನೀರಿಗೆ ಧುಮುಕಿ ಮೀನು ಹಿಡಿದುಕೊಂಡು ಬಂದು ಕಲ್ಲು ಬಂಡೆಯ ಮೇಲೆ ಕುಳಿತು ತಿನ್ನುವ ಪರಿ ಅತ್ಯದ್ಭುತ. ಇನ್ನು ಚಮಚ ಕೊಕ್ಕಿನ ಹಕ್ಕಿಗಳು ನೀರಿಗಿಳಿಸು ಕೊಕ್ಕಿನಿಂದ ನೀರು ಎತ್ತಿ-ಎತ್ತಿ ಕುಡಿಯುವುದು ಕಣ್ಮನಸೆಳೆಯುತ್ತದೆ. ಫೈಡ್‍ಕಿಂಗ್‍ಫಿಷರ್ ಹಾಗೂ ನೀಲಿ ಬಣ್ಣದ ಮಿಂಚುಳ್ಳಿಗಳು ಗಾಳಿಯಲ್ಲಿ ರಪ-ರಪನೆ ರೆಕ್ಕೆ ಬಡಿದು ಸುಂಯ್‍ನೆ ನೀರಿಗೆ ಧುಮುಕಿ ಮೀನು ಹಿಡಿದುಕೊಂಡು ಹೋಗಿ
ಎಲ್ಲೋ ಮರೆಯಲ್ಲಿ ಕುಳಿತು ತಿನ್ನುವ ಬಗೆಯನ್ನು ಬಣ್ಣಿಸಲಸಾಧ್ಯ. ಹೀಗೆ ಒಂದೇ…. ಎರಡೇ…. ಹತ್ತಾರು ನಮೂನೆಯ ಹಕ್ಕಿಗಳ ಕಾರ್ಯವೈಖರಿಯನ್ನು ಕಣ್ತುಂಬಿಕೊಳ್ಳಬಹುದು. ಆಂಗ್ಲದಲ್ಲಿ ಗ್ರೆಹೆರಾನ್ ಅನ್ನುವ ಕುಂಡಬಕ, ಕೆನ್ನೇರಿ ಚೌಗು ಕೋಳಿ, ಗೋವಕ್ಕಿ, ನೀರು ಕಾಗೆ ಸೇರಿದಂತೆ ಹತ್ತಾರು ಬಗೆಯ ಜಲಹಕ್ಕಿ ಮತ್ತು ನೆಲಹಕ್ಕಿಗಳು ರಂಗನತಿಟ್ಟು ಪಕ್ಷಿಧಾಮದಲ್ಲಿ ಸದಾ ಕಾಣಸಿಗುತ್ತವೆ. ಆಸಕ್ತ ಪರಿಸರ ಪ್ರಿಯರು, ಪಕ್ಷಿ ವೀಕ್ಷಕರು ರಂಗನತಿಟ್ಟಿಗೆ ಭೇಟಿ ನೀಡಿದರೆ ಇಂತಹ ಪ್ರಕೃತಿ ಸೌಂದರ್ಯದಲ್ಲಿ ಹಕ್ಕಿಗಳ ಕಲರವ ಮನತುಂಬುವುದಂತು ಸತ್ಯ. ಹಕ್ಕಿಗಳ ಅಮೋಘ ಚಿತ್ರಪಟ ಕಾಣಸಿಗುವ ಕರ್ನಾಟಕದ ಪಕ್ಷಿಧಾಮ ರಂಗನತಿಟ್ಟು ನಮ್ಮ ರಾಜ್ಯದ ಪಕ್ಷಿಧಾಮಗಳಲ್ಲೇ ಅತಿ ದೊಡ್ಡದು. ಸುಮಾರು 40 ಎಕರೆ ಪ್ರದೇಶದಲ್ಲಿ ಕಾವೇರಿ ನದಿ ತೀರದಲ್ಲಿರುವ ಹಕ್ಕಿಗಳ ಸುಂದರ ತಾಣವಿದು.
ಐತಿಹಾಸಿಕ ಸ್ಥಳ ಶ್ರೀರಂಗಪಟ್ಟಣದ ಸಮೀಪವಿರುವ ಈ ಪಕ್ಷಿಧಾಮ ಲಕ್ಷಾಂತರ ಮಂದಿ ಪ್ರವಾಸಿಗರನ್ನು ಸೆಳೆಯುವಲ್ಲಿಯೂ ಗಮನ ಸೆಳೆಯುತ್ತಿದೆ. ಕಾವೇರಿ ತೀರದ ಸಣ್ಣ ದ್ವೀಪವಾದ ಈ ಪ್ರದೇಶದಲ್ಲಿ ಹಕ್ಕಿಗಳು ಗೂಡು ಕಟ್ಟಿ ಸಂತನೋತ್ಪತ್ತಿಗೆ ಇಲ್ಲಿಗೆ ದೇಶ-ವಿದೇಶಗಳಿಂದ ಬರುವ ಬಗ್ಗೆ ಅಧ್ಯಯನ ನಡೆಸಿದ ಪಕ್ಷಿ ವಿಜ್ಞಾನಿ ಡಾ.ಸಲೀಮ್ ಆಲಿ ಸೂಚಿಸಿದ್ದರಿಂದ ಕಂಠೀರವ ನರಸಿಂಹರಾಜ ಒಡೆಯರ್ ಅವರು ಇದನ್ನು 1940ರಲ್ಲಿ ಪಕ್ಷಿಧಾಮವೆಂದು ಘೋಷಿಸಿದರು. 170ಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳು ಹೊರ ದೇಶಗಳಿಂದ ಇಲ್ಲಿಗೆ ವಲಸೆ ಬಂದು ಸಂತಾನೋತ್ಪತ್ತಿ ಮಾಡುತ್ತವಲ್ಲದೆ, ಅತಿ ಚಳಿ ಅಥವಾ ಅತಿ ಬೇಸಿಗೆಯಿಂದ ಬಚಾವಾಗಲು ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತವೆ. ಅದರಲ್ಲಿ ಪ್ರಮುಖವಾಗಿ ಬಣ್ಣದ ಕೊಕ್ಕರೆ, ಏಷ್ಯನ್ ಓಪನ್‍ಬಿಲ್, ಚಮಚಕೊಕ್ಕಿನ ಕೊಕ್ಕರೆ, ಕಪ್ಪು ತಲೆಯ ಎಬೀಸ್, ಶಿಲ್ಲೆಬಾತು,
ಭಾರತೀಯ ಶಾಗ್, ಬೆಳ್ಳಕ್ಕಿ, ನೀರುಕಾಗೆ ವಿಶಿಷ್ಟ ಪಕ್ಷಿಪ್ರಭೇದಗಳು ಇಲ್ಲಿ ಕಾಣಸಿಗುತ್ತವೆ. ಈ ಪುಟ್ಟ ದ್ವೀಪವನ್ನು ನಿರಂತರವಾಗಿ ಕಾಡುತ್ತಿದ್ದ ಜಲಪ್ರವಾಹದಿಂದ ಈ ಪ್ರದೇಶ ರಕ್ಷಿಸಲು ಹಾಗೂ ಅಭಿವೃದ್ಧಿಪಡಿಸಲು ಸುತ್ತಮುತ್ತಲಿನ ಪ್ರದೇಶವನ್ನು ಖರೀದಿಸಿ ಪಕ್ಷಿಧಾಮವನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಿದೆ. ದ್ವೀಪದಲ್ಲಿರುವ ಬಿದಿರು, ಜಾಲಿಮರ, ಅಕೇಶಿಯಾ ದಂತಹ ಮರಗಳು ಬೆಳೆದು ನಿಂತು ಹಳ್ಳಿಗಳಿಂದ ವಲಸೆ ಬಂದು ಗೂಡು ಕಟ್ಟಿ ಸಂತಾನೋತ್ಪತ್ತಿ ಮಾಡುವ ನಿಸರ್ಗದತ್ತ ರಮ್ಯತಾಣ ಇದಾಗಿದೆ. ಅಪರೂಪದ ಪಕ್ಷಿಗಳು, ಬಾವುಲಿಯೂ ಇಲ್ಲಿ ಕಾಣಸಿಗುತ್ತವೆ. ಪ್ರವಾಸಿಗಳು ಪಕ್ಷಿಧಾಮ ವೀಕ್ಷಿಸಲು ಜೂನ್‍ನಿಂದ ನವೆಂಬರ್‍ವರೆಗೆ ಪ್ರಸಕ್ತ ಕಾಲವಾಗಿದ್ದರೂ, ವಲಸೆ ಬಂದ ಹಕ್ಕಿಗಳನ್ನು ವೀಕ್ಷಿಸಬೇಕಾದರೆ ಡಿಸೆಂಬರ್‍ನಲ್ಲಿ ಇಲ್ಲಿಗೆ ಭೇಟಿ ನೀಡುವುದು ಉತ್ತಮ. ಪ್ರತಿದಿನ ಬೆಳಗ್ಗೆ 8.30ರಿಂದ ಸಂಜೆ 6 ಗಂಟೆವರೆಗೆ ಪಕ್ಷಿಧಾಮ ಪ್ರವೇಶಕ್ಕೆ ಅವಕಾಶವಿದೆ.