ಕರ್ನಾಟಕ

ಗ್ರಾಮೀಣ ಭಾಗದಲ್ಲಿ ವೈದ್ಯರ ಕೊರತೆ ನೀಗಿಸಲು ವೇತನ ಹೆಚ್ಚಳ

Pinterest LinkedIn Tumblr

U.T.Khadar-Minister-in-Sess ಬೆಳಗಾವಿ, ಜು.7- ಗ್ರಾಮೀಣ ಭಾಗದಲ್ಲಿ ವೈದ್ಯರ ಕೊರತೆಯನ್ನು ನಿಗಿಸುವ ಸಲುವಾಗಿ ಸರ್ಕಾರಿ ಸೇವೆ ಸಲ್ಲಿಸುವ ವೈದ್ಯರ ವೇತನ ಹಾಗೂ ಭತ್ಯೆಗಳನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಉನ್ನತ ಅಧಿಕಾರಿಗಳಿಗೆ ಸರಿ ಸಮನಾಗಿ ತಜ್ಞ ವೈದ್ಯರ ವೇತನವನ್ನು ಹೆಚ್ಚಳ

ಮಾಡುವ ಮೂಲಕ ಸರ್ಕಾರ ವೈದ್ಯರ ಕೊರತೆ ನಿಗಿಸಲು ಕಸರತ್ತು ನಡೆಸಿದೆ. ಇಂದು ವಿಧಾನಸಭೆಯ ಕಲಾಪದ ಆರಂಭದಲ್ಲಿ ಸ್ವಯಂ ಪ್ರೇರಿತರಾಗಿ ಹೇಳಿಕೆ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ವೇತನ ಹೆಚ್ಚಳವನ್ನು ಪ್ರಕಟಿಸಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಆರು ವರ್ಷ ಸಲ್ಲಿಸಿದ ಎಂಬಿಬಿಎಸ್/ ಬಿಡಿಎಸ್ ಪದವೀಧರ ವೈದ್ಯರಿಗೆ 54,989 ರೂ.ಗಳಿಂದ 59,989 ರೂಗಳಿಗೆ ವೇತನ ಹೆಚ್ಚಿಸಲಾಗಿದೆ. ಸ್ನಾತಕೋತ್ತರ ಪದವಿ/ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವ ತಜ್ಞ ವೈದ್ಯರಿಗೆ 59,780 ರಿಂದ 84,780 ರೂ.ಗಳಿಗೆ, ಸೂಪರ್ ಸ್ಪೆಷಾಲಿಟಿ ವಿದ್ಯಾರ್ಹತೆ ಹೊಂದಿರುವವ ತಜ್ಞ ವೈದ್ಯರಿಗೆ 62,980 ರಿಂದ 92,989 ರೂ.ಗಳಿಗೆ ಹೆಚ್ಚಿಸಲಾಗಿದೆ.

ಆರರಿಂದ 13 ವರ್ಷ ಸೇವೆ ಸಲ್ಲಿಸಿದವ ಪದವೀಧರ ವೈದ್ಯಾಧಿಕಾರಿಗಳಿಗೆ 63,620 ರೂ.ಗಳಿಂದ 68,620 ರೂ.ಗಳಿಗೆ, ಸ್ನಾತಕೊತ್ತರ ಹಿರಿಯ ತಜ್ಞ ವೈದ್ಯರಿಗೆ 70,166 ರಿಂದ 95,166 ರೂ.ಗಳಿಗೆ, ಸೂಪರ್ ಸ್ಪೆಷಾಲಿಟಿ ತಜ್ಞವೈದ್ಯರಿಗೆ 72,466 ರಿಂದ 1,02,466 ರೂ.ಗಳಿಗೆ ವೇತನ ಹೆಚ್ಚಿಸಲಾಗಿದೆ. 13 ರಿಂದ 20 ವರ್ಷ ಸೇವೆ ಸಲ್ಲಿಸಿದ ಪದವೀಧರ ಉಪಮುಖ್ಯ ವೈದ್ಯಾಧಿಕಾರಿಗಳಿಗೆ 73,569 ರಿಂದ 78,569 ರೂ.ಗಳಿಗೆ, ಸ್ನಾತಕೊತ್ತರ ಹಿರಿಯ ತಜ್ಞ ವೈದ್ಯರಿಗೆ 87,919ರಿಂದ 1,12,919 ರೂ.ಗಳಿಗೆ, ಸೂಪರ್ ಸ್ಪೆಷಾಲಿಟಿ ಹಿರಿಯ ತಜ್ಞ ವೈದ್ಯರಿಗೆ 84,319 ರಿಂದ 1,19,319 ರೂ.ಗಳಿಗೆ, 20 ವರ್ಷಕ್ಕಿಂತ ಹೆಚ್ಚಿನ ಸೇವೆ ಸಲ್ಲಿಸಿದ ಉಪಮುಖ್ಯ ವೈದ್ಯಾಧಿಕಾರಿಗಳಿಗೆ 87,649 ರಿಂದ 92,649 ರೂ.ಗಳವರೆಗೆ ವೇತನ ಹೆಚ್ಚಿಸಲಾಗಿದೆ ಎಂದು ವರಿಸಿದರು.

ಅದೇ ರೀತಿ ಭತ್ಯೆಗಳಲ್ಲೂ ಗಣನೀಯ ಪ್ರಮಾಣದಲ್ಲಿ ಪರಿಷ್ಕರಣೆ ಮಾಡಲಾಗಿದೆ. ಆರು ವರ್ಷ ಸೇವೆ ಸಲ್ಲಿಸಿದ ಎಂಬಿಬಿಎಸ್/ ಬಿಡಿಎಸ್ ವೈದ್ಯರಿಗೆ 16 ಸಾರ ರೂ.ಗಳ ಭತ್ಯೆಯನ್ನು 21 ಸಾವಿರ ರೂ.ಗಳಿಗೆ, ಸ್ನಾತಕ್ಕೊತ್ತರ ಪದವಿ/ ಡಿಪ್ಲೊಮಾ ಪದವಿ ಪಡೆದ ತಜ್ಞರಿಗೆ 17,600 ರಿಂದ 42,600 ರೂ.ಗಳಿಗೆ, ಸೂಪರ್‌ಸ್ಪೆಷಾಲಿಟಿ ವಿದ್ಯಾರ್ಹತೆ ಹೊಂದಿರುವ ತಜ್ಞ ವೈದ್ಯರಿಗೆ 20,800 ರೂ.ಗಳಿಂದ 50,800 ರೂ.ಗಳಿಗೆ ಪರಿಷ್ಕರಿಸಲಾಗಿದೆ. ಆರರಿಂದ 13 ವರ್ಷ ಸೇವೆ ಸಲ್ಲಿಸಿದ ಎಂಬಿಬಿಎಸ್ ವೈದ್ಯರಿಗೆ 17 ಸಾವಿರದಿಂದ 22 ಸಾವಿರ ರೂ.ಗಳಿಗೆ, ಸ್ನಾತಕ್ಕೊತ್ತರ ಪದವೀಧರ ತಜ್ಞರಿಗೆ 18,700 ರೂ.ಗಳಿಂದ 43,700 ರೂ.ಗಳಿಗೆ, ಸೂಪರ್ ಸ್ಪೆಷಾಲಿಟಿ ತಜ್ಞರಿಗೆ 22,100 ರಿಂದ 52,100 ರೂ.ಗಳಿಗೆ, 13 ವರ್ಷದಿಂದ 20 ವರ್ಷ ಸೇವೆ ಸಲ್ಲಿಸಿದ ಎಂಬಿಬಿಎಸ್ ಉಪಮುಖ್ಯಾಧಿಕಾರಿಗಳಿಗೆ 18ರಿಂದ 23 ಸಾವಿರ, ಸ್ನಾತಕೋತ್ತರ ಹಿರಿಯ ತಜ್ಞ ವೈದ್ಯರಿಗೆ 19,800 ರಿಂದ 44,800 ರೂ.ಗಳಿಗೆ, ಸೂಪರ್‌ಸ್ಪೆಷಾಲಿಟಿ ಹಿರಿಯ ತಜ್ಞ ವೈದ್ಯರಿಗೆ 23,400 ರಿಂದ 58,400 ರೂ.ಗಳಿಗೆ, 20 ವರ್ಷ ಮೇಲ್ಪಟ್ಟ ಸೇವೆ ಸಲ್ಲಿಸಿದ ಉಪಮುಖ್ಯಾಧಿಕಾರಿಗಳಿಗೆ 18 ರಿಂದ 23 ಸಾವಿರ ರೂ.ಗಳಿಗೆ. ಸ್ನಾತಕೋತ್ತರ ಹಿರಿಯ ತಜ್ಞರಿಗೆ 19,800 ರಿಂದ 44,800 ರೂ.ಗಳಿಗೆ, ಸೂಪರ್‌ಸ್ಪೆಷಾಲಿಟಿ ಹಿರಿಯ ತಜ್ಞರಿಗೆ 23,400 ಸಾವಿರ ರೂ.ಗಳಿಂದ 58,400 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ ಎಂದು ಖಾದರ್ ವಿವರಿಸಿದರು.

ನಮ್ಮ ಸರ್ಕಾರ ವೇತನ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿತ್ತು, ಅದರಂತೆ ನಡೆದುಕೊಂಡಿದೆ. ವೇತನ ಹೆಚ್ಚಳವನ್ನು ಪೂರಕ ಬಜೆಟ್‌ನಲ್ಲಿ ಸೇರಿಸಿ ಆರ್ಥಿಕ ಇಲಾಖೆ ಅನುಮತಿ ಪಡೆದ ತಕ್ಷಣವೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಸಚಿವ ಖಾದರ್ ತಿಳಿಸಿದರು.
ಆಯುರ್ವೇಧ ವೈದ್ಯರಿಗೆ ವೇತನ ಪರಿಷ್ಕರಣೆ ಮಾಡದೆ ಇರುವ ಬಗ್ಗೆ ಬಿಜೆಪಿ ಶಾಸಕ ಸಿ.ಟಿ.ರ ಆಕ್ಷೇಪ ವ್ಯಕ್ತಪಡಿಸಿದರು. ಇದು ವೇತನ ತಾರತಮ್ಯವಾಗಲಿದೆ. ಎಂಬಿಬಿಎಸ್ ವೈದ್ಯರಂತೆ ಆಯುರ್ವೇಧ ವೈದ್ಯರು ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಅಲ್ಲದೆ ಇದ್ದರೂ, ಸ್ವಲ್ಪ ಮಟ್ಟಿಗಾದರೂ ಆಯುರ್ವೇಧ ವೈದ್ಯರ ವೇತನ ಪರಿಷ್ಕರಣೆ ಮಾಡಬೇಕಿತ್ತು ಎಂದು ಮರುಕ ವ್ಯಕ್ತ ಪಡಿಸಿದರು.
ಜೆಡಿಎಸ್‌ನ ಶಾಸಕ ಶಿವಲಿಂಗೇಗೌಡ ಅವರು ಮಾತನಾಡಿ, ಎಂಬಿಬಿಎಸ್ ಪದವೀದರರನ್ನು ನಾನು ದೂರವಾಣಿಯಲ್ಲಿ ಮಾತನಾಡಿಸಿದ್ದೇನೆ. ಒಂದು ಲಕ್ಷಕ್ಕಿಂತಲೂ ಕಡಿಮೆ ವೇತನ ಕೊಟ್ಟರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆಗೆ ಬರುವುದಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಈಗ ಸರ್ಕಾರ ಹೆಚ್ಚಿಸಿರುವ ವೇತನಕ್ಕೆ ಯಾವ ವೈದ್ಯರು ಸರ್ಕಾರಿ ಸೇವೆಗೆ ಬರಲ್ಲ. ಮತ್ತೆ ವೈದ್ಯರ ಕೊರತೆ ಮುಂದುವರೆಯಲಿದೆ. ನಾವು ಹಳ್ಳಿಗಳಿಗೆ ಕಾಲಿಡಲಾಗುತ್ತಿಲ್ಲ ಜನ ಉಗಿಯುತ್ತಿದ್ದಾರೆ. ಯಾವುದಾದರೂ ಭಾಗ್ಯ ಕೊಡಿ ಮೊದಲು ವೈದ್ಯರನ್ನು ಗ್ರಾಮೀಣ ಸೇವೆಗೆ ಬರುವಂತೆ ಮಾಡಿ. ಜನರ ಬೈಗುಳಗಳಿಂದ ಶಾಸಕರಿಗೆ ಮುಕ್ತಿ ಕೊಡಿಸಿ ಎಂದು ಅವಲತುಕೊಂಡರು. ವೈದ್ಯರ ಜೊತೆಗೆ ನರ್ಸ್‌ಗಳ ವೇತನವನ್ನು ಹೆಚ್ಚಿಸಿ ಎಂದು ಜೆಡಿಎಸ್ ಶಾಸಕ ಬಾಲಕೃಷ್ಣ ಆಗ್ರಸಿದರು.
ಜೆಡಿಎಸ್‌ನ ವೈ.ಎಸ್..ದತ್ತಾ ಮಾತನಾಡಿ, ಗ್ರಾಮೀಣ ಸೇವೆ ಕಡ್ಡಾಯಗೊಳಿಸಿರುವ ಕಾಯ್ದೆಯನ್ನು ಕಟ್ಟು ನಿಟ್ಟಾಗಿ ಜಾರಿಗೆ ತನ್ನಿ ಗ್ರಾಮೀಣ ಪ್ರದೇಶದ ವೈದ್ಯರ ಕೊರತೆ ತನ್ನಷ್ಟಕ್ಕೆ ತಾನೆ ಬಗೆ ಹರಿಯಲಿದೆ ಎಂದು ಸಲಹೆ ನೀಡಿದರು.
ಇದಕ್ಕೆ ಉತ್ತರ ನೀಡಿದ ಸಚಿವ ಖಾದರ್, ಸರ್ಕಾರಿ ಆಸ್ಪತ್ರೆಗಳಲ್ಲಿ 2300 ಹುದ್ದೆಗಳ ಪೈಕಿ 331 ವೈದ್ಯರ ಕೊರತೆ ಮಾತ್ರ ಇದೆ. ಈ ವೇತನ ಪರಿಷ್ಕರಣೆಯಿಂದ ಎಂಬಿಬಿಎಸ್ ಪದವೀಧರರು ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ಮುಂದೆ ಬರುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

Write A Comment