ಕರ್ನಾಟಕ

ವಿಭಜಿತ ಬಿಬಿಎಂಪಿಗೆ ಕೆಂಪೇಗೌಡ ಗೋಪುರಗಳೇ ಗಡಿ

Pinterest LinkedIn Tumblr

kempegowda-tower ಬೆಂಗಳೂರು,ಜು.7- ನಗರದ ಗಡಿ ಗುರುತಿಸಲು ನಾಡಪ್ರಭು ಕೆಂಪೇಗೌಡರು ನಿರ್ಮಿಸಿರುವ ನಾಲ್ಕು ಗಡಿಗೋಪುರಗಳೇ  ನಾಲ್ಕು ಪಾಲಿಕೆಗಳಾಗಲಿವೆ. ಇದರ ಜೊತೆಗೆ ಯಲಹಂಕ ಮತ್ತೊಂದು ಪಾಲಿಕೆ. ಈ ಐದು ಪಾಲಿಕೆಗಳ ಉಸ್ತುವಾರಿಗೆ ರಚನೆಯಾಗಲಿದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ.

ಆಡಳಿತಾತ್ಮಕ ದೃಷ್ಟಿಯಿಂದ ಬಿಬಿಎಂಪಿಯನ್ನು ವಿಭಜನೆ ಮಾಡಲು ಮುಂದಾಗಿರುವ ಸರ್ಕಾರದ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿರುವುದರ ಜೊತೆಗೆ ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಒಡೆಯಲು ಬಿಡುವುದಿಲ್ಲ  ಎಂದು ಕೇಳಿಬರುತ್ತಿರುವ  ಅಪಸ್ವರಗಳನ್ನು ತಡೆಯುವ ಉದ್ದೇಶದಿಂದ ವಿಭಜನೆ ಸಂಬಂಧ ರಚಿಸಲಾಗಿರುವ ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್.ಪಾಟೀಲ್ ನೇತೃತ್ವದ ಸಮಿತಿ ಕಂಡುಕೊಂಡಿರುವ ಪರಿಹಾರ ಇದು.  ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಒಡೆಯುವುದಿಲ್ಲ ಬದಲಿಗೆ ಅವರು ನಿರ್ಮಿಸಿರುವ ಗೋಪುರಗಳನ್ನೇ ಆಧಾರವಾಗಿಟ್ಟುಕೊಂಡು ನಾಲ್ಕು ಪಾಲಿಕೆ ರಚನೆ ಮಾಡುವುದು ಮತ್ತು ನಾಡಪ್ರಭು ಆಳಿದ ಯಲಹಂಕವನ್ನು ಒಂದು ಪಾಲಿಕೆಯಾಗಿ ರಚಿಸುವುದು ಸೂಕ್ತ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.  ಮೇಕ್ರಿ ವೃತ್ತ, ಗವಿಪುರಂ, ಲಾಲ್‌ಬಾಗ್ ಹಾಗೂ ಕೋರಮಂಗಲದಲ್ಲಿರುವ ಗೋಪುರಗಳು ತಲಾ ಒಂದೊಂದು ಪಾಲಿಕೆ ವ್ಯಾಪ್ತಿಗೊಳಪಡಲಿವೆ.  ಅದೇ ರೀತಿ ಯಲಹಂಕವನ್ನು ಒಂದು ಪಾಲಿಕೆಯನ್ನಾಗಿ  ರಚನೆ ಮಾಡಿ ಐದು ಪಾಲಿಕೆಗಳ ಉಸ್ತುವಾರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡಿದರೆ ಕೆಂಪೇಗೌಡ ನಿರ್ಮಿಸಿದ ಬೆಂಗಳೂರನ್ನು ಒಡೆದರು ಎಂಬ ಅಪಖ್ಯಾತಿ ಬರುವುದಿಲ್ಲ ಎಂಬ ವರದಿ ಸಿದ್ಧಗೊಂಡಿದೆ. ಈ ವರದಿ ಜು.10ರೊಳಗೆ ಸರ್ಕಾರದ ಕೈಸೇರಲಿದೆ.

ವರದಿಯಲ್ಲಿ ಏನಿದೆ?: ಹಾಲಿ ಇರುವ 198 ವಾರ್ಡ್‌ಗಳನ್ನು 400 ವಾರ್ಡ್‌ಗಳನ್ನಾಗಿ ಪರಿವರ್ತಿಸಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸುವುದು.  ಈ ಐದು ಪಾಲಿಕೆಗಳಿಗೆ ಆಯ್ಕೆಯಾಗುವ  ಮೇಯರ್‌ಗಳು, ಆಯುಕ್ತರು ಪ್ರಾಧಿಕಾರದ ಅಧೀನದಲ್ಲಿ ಕರ್ತವ್ಯ ನಿರ್ವಹಿಸುವರು.  ಪ್ರಾಧಿಕಾರದ ಉಸ್ತುವಾರಿಯನ್ನು ಸ್ವತಃ ಮುಖ್ಯಮಂತ್ರಿಗಳೇ 10 ವರ್ಷಗಳ ಕಾಲ ನಿರ್ವಹಿಸಬೇಕು ನಂತರ ಅಧಿಕಾರ ವಿಕೇಂದ್ರೀಕರಣ  ಮಾಡಿ ಮೇಯರ್‌ಗಳಿಗೆ ಆಡಳಿತಾತ್ಮಕ ಅಧಿಕಾರ ನೀಡಬೇಕು ಎಂಬುದು ವರದಿಯಲ್ಲಿದೆ. ಅಂದಾಜು 25 ಲಕ್ಷ ಜನಸಂಖ್ಯೆಯುಳ್ಳ 70ರಿಂದ 90 ವಾರ್ಡ್‌ಗಳನ್ನು ರಚಿಸುವುದು, ಈ ರೀತಿ ಮಾಡುವುದರಿಂದ ತೆರಿಗೆ ಸಂಗ್ರಹ ಸೇರಿದಂತೆ ವಾರ್ಡ್‌ಗಳ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಅನುಕೂಲವಾಗಲಿದೆ.  ರಚನೆಯಾಗುವ ಐದು ಪಾಲಿಕೆಗಳಿಗೂ ಯಾವುದೇ ರೀತಿಯ ಆರ್ಥಿಕ ಅಸಮತೋಲನ ಉಂಟಾಗದಂತೆ ವಾರ್ಡ್‌ಗಳನ್ನು ಪುನರ್ ವಿಂಗಡಣೆ ಮಾಡುವುದು.  ವಾರ್ಡ್‌ಗಳ ಅಭಿವೃದ್ದಿ ಹಾಗೂ ಕಾಮಗಾರಿಗಳ ತ್ವರಿತ ಜಾರಿ ಉದ್ದೇಶದಿಂದ ಸ್ಥಳೀಯ ಪಾಲಿಕೆ ಸದಸ್ಯರ ನೇತೃತ್ವದಲ್ಲಿ ವಾರ್ಡ್ ಕಮಿಟಿಗಳನ್ನು ರಚನೆ ಮಾಡಬೇಕು.  20 ಸದಸ್ಯರನ್ನೊಳಗೊಂಡ ಸಮಿತಿಗೆ 10 ಜನರನ್ನು ಚುನಾಯಿಸಬೇಕು.

ಉಳಿದ 10 ಮಂದಿಯನ್ನು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರನ್ನು ಆಯ್ಕೆ ಮಾಡುವುದು ಸೂಕ್ತ.  ಪ್ರಾಧಿಕಾರದ ಕೆಲಸವೇನು : ಐದು ಪಾಲಿಕೆಗಳ ಉಸ್ತುವಾರಿಯು ಪ್ರಾಧಿಕಾರಕ್ಕೆ ಬರಲಿದೆ. ಇದರ ಜತೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬಿಡಿಎ, ಜಲಮಂಡಳಿ, ಅಗ್ನಿಶಾಮಕ ದಳ, ಸಾರಿಗೆ, ಪೊಲೀಸ್ ಇಲಾಖೆಗಳು ಕರ್ತವ್ಯ ನಿರ್ವಹಿಸುವುದು ಅನಿವಾರ್ಯ.  ನಗರದ ಅಭಿವೃದ್ಧಿಗೆ ಯೋಜನೆ ರೂಪಿಸುವುದು, ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು, ಸಾರಿಗೆ ವ್ಯವಸ್ಥೆ ಸುಗಮಗೊಳಿಸುವುದು ಸೇರಿದಂತೆ ಒಟ್ಟಾರೆ ಬೆಂಗಳೂರಿನ ಸಮಗ್ರ ಅಭಿವೃದ್ದಿ ಹೊಣೆ ಪ್ರಾಧಿಕಾರದ್ದು.  ಸಾಧ್ಯವೆ ?: ಈಗಾಗಲೇ ಬೆಂಗಳೂರು ವಿಭಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಸಚಿವ ಎಸ್.ಆರ್.ಪಾಟೀಲ್ ನೇತೃತ್ವದಲ್ಲಿ ಸೆಲೆಕ್ಟ್ ಕಮಿಟಿ ರಚನೆ ಮಾಡಿದೆ. ಈ ಸಮಿತಿಯ ಬಹುತೇಕ ಸದಸ್ಯರು ಬಿಬಿಎಂಪಿ ವಿಭಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಮಾತ್ರವಲ್ಲ ಯಾವುದೇ ಕಾರಣಕ್ಕೂ ವಿಭಜನೆಗೆ ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.  ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್.ಪಾಟೀಲ್ , ಸಚಿವ ಎಸ್.ಆರ್.ಪಾಟೀಲ್ ನೇತೃತ್ವದ ಸಮಿತಿಗಳು ವಿಭಿನ್ನ ವರದಿ ನೀಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪಾಲಿಕೆ ಐದು ಭಾಗಗಳಾಗುವುದೇ ಅಥವಾ ಯಥಾಸ್ಥಿತಿ ಇರಲಿದೆಯೇ ಕಾದು ನೋಡಬೇಕಿದೆ.

ರಮೇಶ್ ಪಾಳ್ಯ

Write A Comment