ಕರ್ನಾಟಕ

ಪೊಲೀಸರ ದೌರ್ಜನ್ಯ : ಸಿಎಮ್ ಜಿಲ್ಲೆಯೇ ಪ್ರಥಮ

Pinterest LinkedIn Tumblr

Pilice-of-Mysote-and-tumakuಬೆಂಗಳೂರು, ಜು.7- ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಪೊಲೀಸರ  ಕಾರ್ಯ ವೈಖರಿ ಮತ್ತು ದೌರ್ಜನ್ಯಗಳ ವಿರುದ್ಧ ಹೆಚ್ಚಿನ ದೂರು ದಾಖಲಾಗಿದ್ದು, ಉಳಿದಂತೆ ಕೆಪಿಸಿಸಿ ಅಧ್ಯಕ್ಷ ಜಿ.ಪರ ಮೇಶ್ವರ್ ಅವರ ತವರು ಜಿಲ್ಲೆ ತುಮಕೂರು 2ನೆ ಸ್ಥಾನ ಪಡೆದಿದೆ. ಕೆಲವೆಡೆ ದೂರು ಪ್ರಾಧಿಕಾರಗಳು ಯಾವುದೆ ದೂರುಗಳಿಲ್ಲದೆ, ಕೆಲಸವೂ ಇಲ್ಲದೆ ಖಾಲಿ ಕುಳಿತಿವೆ.

ಸರ್ಕಾರ ರಾಜ್ಯದ 30 ಜಿಲ್ಲೆಗಳ ಪೈಕಿ 23 ಜಿಲ್ಲೆಗಳಲ್ಲಿ ಪೊಲೀಸ್ ದೂರು ಪ್ರಾಧಿಕಾರಗಳನ್ನು ರಚಿಸಿದೆ. ಉಳಿದಂತೆ ರಾಮನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಯಾದಗಿರಿ ಜಿಲ್ಲೆಗಳಲ್ಲಿ ಪೊಲೀಸ್ ದೂರು ಪ್ರಾಧಿಕಾರಗಳು ಅಸ್ತಿತ್ವದಲ್ಲಿ ಇಲ್ಲ. ಉಳಿದಂತೆ ಎಲ್ಲ ಜಿಲ್ಲೆಗಳಲ್ಲೂ ಕೆಲಸ ಮಾಡುತ್ತಿವೆ.  ಪ್ರಾಧಿಕಾರಕ್ಕೆ ಕೋಲಾರ, ಶಿವಮೊಗ್ಗ, ಹಾವೇರಿ, ಕೊಡಗು,  ಚಾಮರಾಜನಗರ, ಉತ್ತರ ಕನ್ನಡ, ಬಾಗಲಕೋಟೆ, ಗದಗ,  ಬೀದರ್, ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲಿ ಪೊಲೀಸ್ ಕಾರ್ಯವೈಖರಿಯ ಬಗ್ಗೆ ಯಾವುದೇ ದೂರುಗಳಿಲ್ಲ ಎಂದು ಸರ್ಕಾರ ತಿಳಿಸಿದೆ. ಬೆಂಗಳೂರು ನಗರ ಪೊಲೀಸರ ಕಾರ್ಯವೈಖರಿಯ ಬಗ್ಗೆ ಒಂದು ದೂರು ದಾಖಲಾಗಿದೆ. ಆನೇಕಲ್ ಪಟ್ಟಣದ ಪಿಎಸ್‌ಐ ವಿರುದ್ಧ ಕೆ.ಮಂಜುನಾಥ್ ಎಂಬುವರು ಮಾಡಿದ್ದ ಆರೋಪ ಸಾಬೀತಾಗಿಲ್ಲ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಪತ್ರಕರ್ತೆಯೊಬ್ಬರಿಗೆ ಅನಾಮಿಕ ಮೊಬೈಲ್‌ನಿಂದ ಅಶ್ಲೀಲ ಸಂದೇಶ ಬರುತ್ತಿದ್ದು, ದೂರು ನೀಡಿದರೂ ಪ್ರಯೋಜನವಾಗಿಲ್ಲ  ಎಂದು ಪಿರಿಯಾಪಟ್ಟಣ ಠಾಣೆ ಪೊಲೀಸ್ ಅಧಿಕಾರಿಗಳ ವಿರುದ್ಧ ದೂರು ನೀಡಲಾಗಿದೆ. ಇಲವಾಲ ಠಾಣೆಯ ಪಿಎಸ್‌ಐ ಕಳ್ಳಸಾಗಾಣೆದಾರರಿಗೆ ನೆರವಾಗುತ್ತಿದ್ದಾರೆ ಎಂಬುದು ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪೊಲೀಸ್ ಅಧಿಕಾರಿಗಳ ನಿಷ್ಕ್ರಿಯತೆ ಪ್ರಶ್ನಿಸಿ 11ಕ್ಕೂ ಹೆಚ್ಚು ದೂರುಗಳು ಪ್ರಾಧಿಕಾರದ ಮುಂದೆ ದಾಖಲಾಗಿವೆ. ಬೆಂಗಳೂರು ಸಮೀಪದಲ್ಲಿರುವ ತುಮಕೂರು ಜಿಲ್ಲೆಯ ತಿಲಕ್ ಪಾರ್ಕ್ ಪೊಲೀಸ್ ಠಾಣೆ, ಕೋರಾ ಪೊಲೀಸ್ ಠಾಣೆ, ತಿಪಟೂರು ನಗರ ಪೊಲೀಸ್ ಠಾಣೆ, ದಂಡಿನಶಿವರ ಪೊಲೀಸ್ ಠಾಣೆ, ಅಮೃತೂರು ಪೊಲೀಸ್ ಠಾಣೆಗಳ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ದೂರುಗಳು ದಾಖಲಾಗಿವೆ. ಮಂಡ್ಯ ಜಿಲ್ಲೆಯ ಮಳವಳ್ಳಿ ಪೊಲೀಸ್ ಕಾರ್ಯವೈಖರಿಯ ಬಗ್ಗೆ ರಾಜ್ಯ ಪೊಲೀಸ್ ಪ್ರಾಧಿಕಾರಕ್ಕೆ ನೀಡಲಾಗಿದ್ದ ಒಂದು ದೂರು ದಾಖಲಾಗಿದೆ. ಕಲ್ಬುರ್ಗಿ ಜಿಲ್ಲೆಯಲ್ಲಿ 5, ಧಾರವಾಡ ಜಿಲ್ಲೆಯಲ್ಲಿ 3, ದಕ್ಷಿಣ ಕನ್ನಡ, ವಿಜಯಪುರ ಜಿಲ್ಲೆಗಳಲ್ಲಿ 2, ಉಡುಪಿ, ಚಿಕ್ಕಮಗಳೂರು, ಬೆಳಗಾವಿ ಜಿಲ್ಲೆಗಳಲ್ಲಿ ತಲಾ ಒಂದು ದೂರು ದಾಖಲಾಗಿವೆ ಎಂದು ಸರ್ಕಾರ ವಿವರಿಸಿದೆ. ಪೊಲೀಸರು ನೇರವಾಗಿ ದೌರ್ಜನ್ಯ ಎಸಗಿದ ಪ್ರಕರಣಗಳಿಗಿಂತಲೂ ದೂರು ನೀಡಿದ್ದರೂ ಕ್ರಮ ಕೈಗೊಳ್ಳದೆ ಆರೋಪಿಗಳ ಪರವಾಗಿರುವ ವರ್ತಿಸಿರುವ ಕುರಿತ ದೂರುಗಳೆ ಹೆಚ್ಚಾಗಿವೆ.

Write A Comment