ಕರ್ನಾಟಕ

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಸಿನಿಮೀಯ ರೀತಿಯಲ್ಲಿ ಕೊಂದ ಪತ್ನಿ…! ಮೊದಲು ಅಪಘಾತ ಮಾಡಿಸಿ..ಆಗ ಬಚಾವಾದಾಗ …ಕಾರಿನೊಳಗೆ ಕುತ್ತಿಗೆ ಬಿಗಿದು ಕೊಲೆ ಮಾಡಿದ ಹಂತಕರು….

Pinterest LinkedIn Tumblr

Tumakur-Murdr

ತುಮಕೂರು, ಜು.7: ಪ್ರಿಯಕರನ ಜತೆಗೂಡಿ ಅಪಘಾತವೆಂಬಂತೆ ಬಿಂಬಿಸಿ ಗಂಡನ ಕೊಲೆ ಮಾಡಿ ತನಿಖೆ ಹಾದಿ ತಪ್ಪಿಸಲು ಯತ್ನಿಸಿದ್ದ ಆರೋಪಿ ಪತ್ನಿಯನ್ನು ಕ್ಯಾತಸಂದ್ರ ಠಾಣೆ ಪೊಲೀಸರು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ತುಮಕೂರು ನಗರದ ಉಪ್ಪಾರಹಳ್ಳಿ ಬಳಿಯ ಮರಳೂರು ದಿಣ್ಣೆ ನಿವಾಸಿ ಇರ್ಷಾದ್ ಬಾನು (35) ಬಂಧಿತ ಆರೋಪಿ. ಮರಳೂರು ದಿಣ್ಣೆಯ ಅಕ್ರಮ್ ಪಾಷ (40) ಮತ್ತು ಇರ್ಷಾದ್ ಬಾನು (35) ದಂಪತಿಯಾಗಿದ್ದು, ಪ್ರಿಯಕರನೊಂದಿಗೆ ಒಡನಾಟವಿಟ್ಟುಕೊಂಡಿದ್ದ ಇರ್ಷಾದ್ ಬಾನು ಪತಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾಳೆ. ಅದರಂತೆ ಕಳೆದ ಜೂ.6ರಂದು ದರ್ಗಾಕ್ಕೆ ಹೋಗೋಣವೆಂದು ಪತಿಯನ್ನು ಒಪ್ಪಿಸಿ ಅಂದು ಆಟೋದಲ್ಲಿ ತುಮಕೂರು ಹೊರವಲಯದ ಜೈಪುರ ಪಾಳ್ಯಕ್ಕೆ ಹೋಗಿ ಅಲ್ಲಿನ ದರ್ಗಾದಲ್ಲಿ ಜ್ಹಿಯಾರತ್ ಮಾಡಿದ್ದಾರೆ.

ತದನಂತರ ಸ್ವಲ್ಪ ದೂರದಲ್ಲಿ ನಿಲ್ಲಿಸಿದ್ದ ಆಟೋ ಬಳಿ ಇವರಿಬ್ಬರೂ ಬರುತ್ತಿದ್ದಾಗ, ಸಂಚಿನಂತೆ ಈಕೆಯ ಪ್ರಿಯಕರ ಶಬ್ಬೀರ್ ಮತ್ತು ಸಂಬಂಧಿಕ ತೌಶಿಫ್ (26) ಕಾರನ್ನು ಅತಿ ವೇಗವಾಗಿ ಚಲಾಯಿಸಿಕೊಂಡು ಬಂದು ಅಕ್ರಮ್ ಪಾಷಾಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ.

ತೀವ್ರ ಗಾಯಗೊಂಡ ಪತಿ ಅಕ್ರಮ್‌ಪಾಷನನ್ನು ಆಟೋ ಮಾಡಿಕೊಂಡು ತುಮಕೂರು ಜಿಲ್ಲಾಸ್ಪತ್ರೆಗೆ ಕರೆತಂದು ದಾಖಲಿಸಿದ್ದಾಳೆ. ಕಾರು ಡಿಕ್ಕಿ ಹೊಡೆದರೂ ಗಂಡ ಸಾಯಲಿಲ್ಲವೆಂದು ಮತ್ತೊಂದು ಸಂಚು ರೂಪಿಸಿ ಅದರಂತೆ ವೈದ್ಯರಿಗೆ ನಾವು ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸುವುದಾಗಿ ಹೇಳಿ ಜೂ.13ರಂದು ಡಿಸ್ಚಾರ್ಜ್ ಮಾಡಿಸಿಕೊಂಡಿದ್ದಾಳೆ. ನಂತರ ಆಟೋ ಮಾಡಿಕೊಂಡು ಅಲ್ಲಿಂದ ದಾಬಸ್‌ಪೇಟೆ ಬಳಿ ಬಂದಿದ್ದಾರೆ. ಇತ್ತ ಈಕೆಯ ಪ್ರಿಯಕರ ಶಬ್ಬೀರ್ ಮತ್ತು ಸಂಬಂಧಿಕ ತೌಶಿಫ್ ಕ್ವಾಲಿಸ್ ವಾಹನದಲ್ಲಿ ಬಂದಾಗ ಆಟೋದಿಂದ ಅಕ್ರಮ್ ಪಾಷನನ್ನು ಕ್ವಾಲಿಸ್‌ಗೆ ಕುಳ್ಳರಿಸಿಕೊಂಡು ಈಕೆಯೂ ಜತೆಯಲ್ಲಿ ಕುಳಿತಿದ್ದಾಳೆ.

ಆಗ ಸಂಜೆ 7 ಗಂಟೆ. ಸುಮಾರು 3ಕಿ.ಮೀ. ದೂರ ಬರುತ್ತಿದ್ದಂತೆ ಕ್ವಾಲಿಸ್‌ನಲ್ಲಿದ್ದ ಶಬ್ಬೀರ್ ದಾರದಿಂದ ಅಕ್ರಮ್ ಪಾಷನ ಕುತ್ತಿಗೆ ಬಿಗಿದು ಚೀರಾಟದಂತೆ ಬಾಯಿಗೆ ಬಟ್ಟೆ ತುರುಕಿ ಕೊಲೆ ಮಾಡಿದ್ದಾನೆ. ಈತ ಮೃತಪಟ್ಟಿರುವುದು ಖಚಿತಪಡಿಸಿಕೊಂಡು ಅಲ್ಲಿಂದ ಆಟೋ ಮಾಡಿಕೊಂಡು ಮರಳೂರು ದಿಣ್ಣೆಗೆ ವಾಪಸಾಗಿ, ದಾರಿಯಲ್ಲಿ ಅಪಘಾತವಾಯಿತು. ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟರೆಂದು ಪೊಲೀಸರು ಹಾಗ ಸಂಬಂಧಿಕರನ್ನು ನಂಬಿಸಿ ಕ್ಯಾತಸಂದ್ರ ಪೊಲೀಸರಿಗೆ ದೂರು ನೀಡಿದ್ದಾಳೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶವವನ್ನು ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಶವವನ್ನು ವಾರಸುದಾರರಿಗೆ ಹಸ್ತಾಂತರಿಸಿ ತನಿಖೆ ಕೈಗೊಂಡಿದ್ದರು. ತನಿಖೆ ವೇಳೆ ಸರ್ಕಾರಿ ಆಸ್ಪತ್ರೆ ವೈದ್ಯರಾದ ರುದ್ರಮೂರ್ತಿ ಎಂಬುವರು ಮರಣೋತ್ತರ ಪರೀಕ್ಷೆಯ ವರದಿ ನೀಡಿದ್ದಾರೆ. ವರದಿಯಲ್ಲಿ ಈ ವ್ಯಕ್ತಿಯನ್ನು ಹಗ್ಗದಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿರುವುದು ದೃಢಪಟ್ಟಿದೆ.

ಈ ಮಾಹಿತಿಯನ್ನು ಆಧರಿಸಿ ಪೊಲೀಸರು ದೂರು ನೀಡಿದ ಮೃತನ ಹೆಂಡತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಈ ಪ್ರಕರಣವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಲಕ್ಷ್ಮಣ್, ಡಿವೈಎಸ್‌ಪಿ ಚಿದಾನಂದಸ್ವಾಮಿ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ರವಿಕುಮಾರ್, ಸಬ್‌ಇನ್ಸ್‌ಪೆಕ್ಟರ್ ಮಂಜುನಾಥ್ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದ್ದು, ಇವರ ಕಾರ್ಯವೈಖರಿಯನ್ನು ಕಾರ್ತಿಕ್‌ರೆಡ್ಡಿ ಶ್ಲಾಘಿಸಿದ್ದಾರೆ. ಈ ಪ್ರಕರಣದ ಇನ್ನಿಬ್ಬರು ಆರೋಪಿಗಳಿಗಾಗಿ ತನಿಖೆ ಚುರುಕುಗೊಳಿಸಲಾಗಿದೆ.

Write A Comment