ಕರ್ನಾಟಕ

ಅಧಿವೇಶನದಲ್ಲಿ ಉ.ಕ ಅಭಿವೃದ್ಧಿ ಬಗ್ಗೆ ನಡೆಯದ ಚರ್ಚೆ: ವಾಟಾಳ್ ಪ್ರತಿಭಟನೆ

Pinterest LinkedIn Tumblr

vatal-protest-in-suvarna

ಬೆಂಗಳೂರು, ಜು.5-ಹೈದರಾಬಾದ್ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ನಡೆಯದಿರುವುದು ದುರದೃಷ್ಟಕರ ಸಂಗತಿ ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಕಿಡಿಕಾರಿದರು.  ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಪರಿಹಾರಕೈಗೊಳ್ಳಬೇಕೆಂದು ಆಗ್ರಹಿಸಿ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಕತ್ತೆಗಳ ಸಮ್ಮೇಳನ ನಡೆಸುವ ಮೂಲಕ ವಿನೂತನ ಚಳುವಳಿ ನಡೆಸಿ ಗಮನಸೆಳೆದರು.

ಕನ್ನಡ ಒಕ್ಕೂಟದ ವತಿಯಿಂದ ಹುಬ್ಬಳ್ಳಿಯಿಂದ ಗೋವಾವರೆಗೆ ಮೆರವಣಿಗೆ  ನಡೆಸಿ ಕಳಸಾ ಭಂಡೂರಿ ಸೇರಿದಂತೆ ಸಮಗ್ರ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಬೇಕೆಂದು ಒತ್ತಾಯ ಮಾಡಲಾಗಿತ್ತು. ಆದರೆ ಸುವರ್ಣ ಸೌಧದಲ್ಲಿ ಯಾವುದೇ ಚರ್ಚೆಯಾಗದೆ ನಮ್ಮ ನಿರೀಕ್ಷೆ ಹುಸಿಯಾಯಿತು ಎಂದು ಹೇಳಿದರು.

ಹೈದರಾಬಾದ್ ಕರ್ನಾಟಕ ಅಭಿವೃದ್ದಿಗೆ 371ನೇ ವಿಧಿ ಅನ್ವಯ ಇನ್ನು ಯಾವುದೇ ಕೆಲಸ ಕಾರ್ಯಗಳು ಆಗಿಲ್ಲ. ಉತ್ತರ ಕರ್ನಾಟಕದ ಈ ಯೋಜನೆಗಳು ನೆನೆಗುದಿಗೆ ಬಿದ್ದಿದೆ. ನಂಜುಂಡಪ್ಪ ವರದಿ  ಅನುಷ್ಠಾನವಾಗಿಲ್ಲ. ಸರ್ಕಾರಿ ನೌಕರರಿಗೆ ಉದ್ಯೋಗದಲ್ಲಿ ಬಡ್ತಿ ದೊರೆತಿಲ್ಲ. ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ ಎಂದು ಆರೋಪಿಸಿದರು.  ಕಳಸ ಬಂಡೂರಿ ಯೋಜನೆ ಬಗ್ಗೆ ಇರುವ ತಡೆಯಾಜ್ಞೆಯನ್ನು ತೆರವುಗೊಳಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಬೇಕು ಎಂದು ಒತ್ತಾಯಿಸಿದರು.  ಅಭಿವೃದ್ಧಿ ನೆಪದಲ್ಲಿ ವಿಭಜನೆಯ ಸೊಲ್ಲೆತ್ತಿರುವ ಶಾಸಕರ ಕ್ರಮ ಖಂಡನೀಯ. ಚರ್ಚೆ ಮಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಆ ಭಾಗದ ಶಾಸಕರು, ಮಂತ್ರಿಗಳು ಉತ್ತರ ಕರ್ನಾಟಕದ ಬಗ್ಗೆ ಅಭಿಮಾನ ಇದ್ದರೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಹೋರಾಟ ಮಾಡಲಿ ಎಂದು ಸವಾಲು ಹಾಕಿದರು.

Write A Comment