ಕರ್ನಾಟಕ

ಲೋಕಾಯುಕ್ತ ರಾಜೀನಾಮೆಗೆ ಬಿಎಸ್‌ಪಿ ಆಗ್ರಹ

Pinterest LinkedIn Tumblr

lok

ಬೆಂಗಳೂರು, ಜು. ೪- ಲೋಕಾಯುಕ್ತ ಸಂಸ್ಥೆಯಲ್ಲಿ ಅವ್ಯವಹಾರ ನಡೆದಿರುವ ವಿಷಯ ಬಹಿರಂಗಗೊಂಡ ಬಳಿಕ ಲೋಕಾಯುಕ್ತ ಕಚೇರಿ ಆವರಣ ಪ್ರತಿಭಟನೆಯ ತಾಣವಾಗಿದೆ.

ಕಳೆದ ನಾಲ್ಕೈದು ದಿನಗಳಿಂದ ಕಚೇರಿಯ ಎದುರು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಲೋಕಾಯುಕ್ತರ ರಾಜೀನಾಮೆಗೆ ಆಗ್ರಹಿಸಿದ್ದು, ಇಂದು ಕೂಡ ಪ್ರತಿಭಟನೆ ಮುಂದುವರೆದಿದೆ. ಬಹುಜನ ಸಮಾಜಪಕ್ಷದ ಕಾರ್ಯಕರ್ತರು ಇಂದು ಲೋಕಾಯುಕ್ತ ಕಚೇರಿಯ ಎದುರು ಪ್ರತಿಭಟನೆ ನಡೆಸಿ ಲೋಕಾಯುಕ್ತರ ವಿರುದ್ಧ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿ.ಎಸ್.ಪಿ. ಮುಖಂಡ ಮಾರಸಂದ್ರ ಮುನಿಯಪ್ಪ, ಲೋಕಾಯುಕ್ತರ ಮಗನ ವಿರುದ್ಧ ಈಗಾಗಲೇ ಎಫ್‌ಐಆರ್ ದಾಖಲಾಗಿರುವುದರಿಂದ ಕೂಡಲೇ ಅವರನ್ನು ಬಂಧಿಸಬೇಕು. ವೈ. ಭಾಸ್ಕರ್ ರಾವ್ ಅವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಅವ್ಯವಹಾರದ ತನಿಖೆ ನಡೆಸುತ್ತಿರುವ ಸೋನಿಯಾ ನಾರಂಗ್ ಅವರ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು. ಯಾವುದೇ ಸಾಕ್ಷ್ಯ ನಾಶವಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಭಾಸ್ಕರ್ ರಾವ್ ಅವರು ರಾಜೀನಾಮೆ ನೀಡದಿದ್ದರೆ ರಾಜ್ಯಪಾಲರೇ ಅವರನ್ನು ವಜಾ ಮಾಡಬೇಕು. ಇಲ್ಲದಿದ್ದರೆ ಸರ್ಕಾರ ಅವರಿಂದ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.

ರಾಜ್ಯಾಧ್ಯಕ್ಷ ಎನ್. ಮಹೇಶ್, ಉಪಾಧ್ಯಕ್ಷ ಕೋರಮಂಗಲ ಮುನಿಯಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್. ಮುನಿಯಪ್ಪ, ಕಮಲನಾಭನ್, ಲಕ್ಷ್ಮಿನಾರಾಯಣ ಮತ್ತಿತರರು ಭಾಗವಹಿಸಿದ್ದರು.

ಲೋಕಾಯುಕ್ತರ ಪ್ರತಿಕೃತಿ ದಹನ

lok1

ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರ್ ರಾವ್ ಅವರ ರಾಜೀನಾಮೆಗೆ ಒತ್ತಾಯಿಸಿ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ವಿಜಯನಗರ ಬಸ್ ನಿಲ್ದಾಣದ ಬಳಿ ಇಂದು ಪ್ರತಿಭಟನೆ ನಡೆಸಿ ಭಾಸ್ಕರ್ ರಾವ್ ಅವರ ಪ್ರತಿಕೃತಿಯನ್ನು ದಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಜಗದೀಶ್, ನ್ಯಾಯಮೂರ್ತಿ ವೈ.ಭಾಸ್ಕರ್ ರಾವ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ತಮ್ಮ ಮಗನ ವಿರುದ್ಧವೇ ಎಪ್‌ಐಆರ್ ದಾಖಲಾಗಿರುವುದರಿಂದ ಅಧಿಕಾರದಲ್ಲಿ ಮುಂದುವರಿಯುವುದು ಸರಿಯಲ್ಲ. ಕೂಡಲೇ ರಾಜೀನಾಮೆ ನೀಡಿ, ತನಿಖೆಗೆ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು.

ಯುವ ಘಟಕದ ರಾಜ್ಯಾಧ್ಯಕ್ಷ ಕೆ.ಎನ್. ಜಗದೀಶ್ ಹಾಗೂ ಮತ್ತಿತರರು ಭಾಗವಹಿಸಿದ್ದರು. ಕನ್ನಡ ಅನುಷ್ಠಾನ ಮಂಡಳಿಯ ಆರ್ಯ ಪ್ರಸಾದ್ ಪ್ರತ್ಯೇಕ ಪ್ರತಿಭಟನೆ ನಡೆಸಿ, ಲೋಕಾಯುಕ್ತರ ರಾಜೀನಾಮೆಗೆ ಒತ್ತಾಯಿಸಿದರು. ಅಶ್ವಿನ್ ರಾವ್ ಅವರ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿರುವುದರಿಂದ ನೈತಿಕ ಹೊಣೆಹೊತ್ತು ಲೋಕಾಯುಕ್ತರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು

Write A Comment