ಕರ್ನಾಟಕ

ಶಿಕ್ಷಕರಿಗೆ 5ನೇ ತಾರೀಖಿನೊಳಗೆ ವೇತನ : ಕಿಮ್ಮನೆ ರತ್ನಾಕರ

Pinterest LinkedIn Tumblr

kimmane-In-Assebly

ಬೆಳಗಾವಿ, ಜು.೩-ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಐದನೇ ತಾರೀಖಿನೊಳಗೆ ವೇತನ ಪಾವತಿಸುವಂತೆ ಆಯುಕ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡುತ್ತೇನೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ವಿಧಾನ ಪರಿಷತ್‌ನಲ್ಲಿ ತಿಳಿಸಿದರು.

ಸದಸ್ಯ ವೈ.ಎ.ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು,೧ ರಿಂದ ೫ನೇ ತಾರೀಖಿನೊಳಗೆ ಶಿಕ್ಷಕರಿಗೆ ವೇತನ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು, ಅಪರ ಆಯುಕ್ತರು, ಗುಲ್ಬರ್ಗ, ಧಾರವಾಡ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆ  ನಿರ್ದೇಶಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಒಂದು ವೇಳೆ ವೇತನ ವಿಳಂಬವಾದರೆ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ತಿಂಗಳ ಕೊನೆಯ ದಿನಾಂಕದಲ್ಲೇ ಕಾಲಕಾಲಕ್ಕೆ ವೇತನ ನೀಡುವಂತೆ ಸುತ್ತೋಲೆ ಹೊರಡಿಸಲಾಗುತ್ತದೆ. ಆಯುಕ್ತರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮೂಲಕ ಜಿಲ್ಲಾ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ೫ನೇ ತಾರೀಖಿನೊಳಗೆ ವೇತನ ಪಾವತಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವೇತನ ವಿತರಣೆಯಲ್ಲಿ ಉಂಟಾಗುತ್ತಿರುವ ವಿಳಂಬ ತಪ್ಪಿಸಲು ಆರ್ಥಿಕ ಇಲಾಖೆಯಿಂದ ನೇರವಾಗಿ ರಾಜ್ಯವಲಯ, ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತಿಗಳಿಗೆ ವಿವಿಧ ಲೆಕ್ಕ ಶೀರ್ಷಿಕೆಯಡಿ ಸಕಾಲಿಕವಾಗಿ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ವಿವರಿಸಿದರು. ಜೊತೆಗೆ ೩ ತಿಂಗಳ ಮುಂಚಿತವಾಗಿಯೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವೇತನದ ವರದಿಯನ್ನು ಸಿದ್ಧಪಡಿಸುವಂತೆ ಸೂಚಿಸಲಾಗಿದೆ. ಯಾವ ಕಾರಣಕ್ಕೂ ಸಂಬಳ ಪಡೆಯಲು ಹಿಂದೆ ಜಾರಿಯಲ್ಲಿದ್ದಂತೆ ಬಿಲ್ ತಯಾರಿಸುವ ರೀತಿಯನ್ನು ಕೈಬಿಟ್ಟು ಎಚ್‌ಆರ್‌ಎಂಎಸ್ ಆನ್‌ಲೈನ್ ತಂತ್ರಾಂಶ ವ್ಯವಸ್ಥೆ ಜಾರಿಯಲ್ಲಿದೆ. ಯಾವುದೇ ಕಾರಣಕ್ಕೂ ವಿಳಂಬವಾಗದಂತೆ ನೋಡಿಕೊಳ್ಳುವುದಾಗಿ ಕಿಮ್ಮನೆ ಭರವಸೆ ನೀಡಿದರು.
———————
* ವೇತನ ತಾರತಮ್ಯ ಸರಿಪಡಿಸಲು ಶೀಘ್ರವೇ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಕ್ರಮ
ಬೆಳಗಾವಿ, ಜು.3-ಪ್ರೌಢಶಾಲಾ ಸಹ ಶಿಕ್ಷಕರು, ಪದವಿಪೂರ್ವ ಕಾಲೇಜಿನ ಉಪನ್ಯಾಸಕರು, ಪ್ರಾಂಶುಪಾಲರ ವೇತನ ತಾರತಮ್ಯ ಸರಿಪಡಿಸಲು ಶೀಘ್ರವೇ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ವಿಧಾನಪರಿಷತ್‌ಗೆ ತಿಳಿಸಿದರು. ಪ್ರಶ್ನೋತ್ತರ ಅವಧಿಯಲ್ಲಿ ಎಸ್.ವಿ.ಸಂಕನೂರ, ವೈ.ಎ.ನಾರಾಯಣಸ್ವಾಮಿ, ಮರಿತಿಬ್ಬೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ ಏಪ್ರಿಲ್ 15 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರೌಢಶಾಲಾ ಸಹ ಶಿಕ್ಷಕರು, ಪದವಿಪೂರ್ವ ಕಾಲೇಜಿನ ಉಪನ್ಯಾಸಕರು ಮತ್ತು ಪ್ರಾಂಶುಪಾಲರ ವೇತನ ತಾರತಮ್ಯ ಸರಿದೂಗಿಸಬೇಕೆಂದು ತೀರ್ಮಾನ ಕೈಗೊಳ್ಳಲಾಗಿದೆ. ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಧಿಕಾರಿಗಳ ಜೊತೆ ಮತ್ತೊಮ್ಮೆ ಮಾತುಕತೆ ನಡೆಸಲಾಗುವುದು. ಆದಷ್ಟು ಶೀಘ್ರದಲ್ಲಿ ಕುಮಾರನಾಯಕ್ ವರದಿಯನ್ನು ಅನುಷ್ಠಾನ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಆಶ್ವಾಸನೆ ನೀಡಿದರು.

ವೇತನ ತಾರತಮ್ಯ ನಿವಾರಣೆ ಮಾಡಿದರೆ ಬೊಕ್ಕಸಕ್ಕೆ 174 ಕೋಟಿ ರೂ. ಹೊರೆಯಾಗುತ್ತದೆ. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿರುವುದರಿಂದ ವರದಿ ಅನುಷ್ಠಾನಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ ಇಂತಿಷ್ಟೇ ಕಾಲಮಿತಿಯೊಳಗೆ ಅನುಷ್ಠಾನ ಮಾಡುತ್ತೇವೆಂದು ಭರವಸೆ ಕೊಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಒಂದು ಹಂತದಲ್ಲಿ ಪ್ರತಿಪಕ್ಷದ ನಾಯಕ ಈಶ್ವರಪ್ಪ, ಸದಸ್ಯರಾದ ನಾರಾಯಣಸ್ವಾಮಿ, ಮರಿತಿಬ್ಬೇಗೌಡ, ಸಂಕನೂರ, ಅರುಣ್ ಶಹಾಪೂರ್ ಮತ್ತಿತರ ಸದಸ್ಯರು, ಇದು 20 ವರ್ಷಗಳ ಬೇಡಿಕೆಯಾಗಿದೆ. ಯಾವ ತಿಂಗಳೊಳಗೆ ಅನುಷ್ಠಾನ ಮಾಡುತ್ತೀರೆಂದು ತಿಳಿಸಿ ಎಂದು ಪಟ್ಟು ಹಿಡಿದರು. ನಾನು ನಿರ್ದಿಷ್ಟ ದಿನವನ್ನು ತಿಳಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳು ಮತ್ತು ನಾನು ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದೇವೆ. 2-3 ತಿಂಗಳೊಳಗೆ ಅನುಷ್ಠಾನ ಮಾಡುತ್ತೇವೆ ಎಂದು ಕಿಮ್ಮನೆ ಭರವಸೆ ನೀಡಿದರು. ಇದರಿಂದ ಆಕ್ರೋಶಗೊಂಡ ಹೊರಟ್ಟಿ, ಮರಿತಿಬ್ಬೇಗೌಡ, ಸಂಕನೂರ ಸಭಾತ್ಯಾಗ ಮಾಡಿದರು.
****
* ಆರ್‌ಟಿಇ ಕಾಯ್ದೆಯಡಿ 4.20 ಲಕ್ಷ ಮಕ್ಕಳು ಶಾಲೆಗೆ ದಾಖಲು
ಬೆಳಗಾವಿ, ಜು.3- ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸರ್ಕಾರಿ ಶಾಲೆಗಳಿಂದ ಹೊರಗುಳಿದಿದ್ದ 4 ಲಕ್ಷ 20 ಸಾವಿರ ಮಕ್ಕಳನ್ನು ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆಯಡಿ ಖಾಸಗಿ  ಶಾಲೆಗಳಿಗೆ ಸರ್ಕಾರದ ವತಿಯಿಂದಲೇ ವೆಚ್ಚ ಭರಿಸಿ ಶಾಲೆಗೆ ದಾಖಲಿಸಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು. ವಿಧಾನ ಪರಿಷತ್‌ನಲ್ಲಿಂದು ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ರಾಮಚಂದ್ರೇಗೌಡರ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರಿ ಶಾಲೆಯಿಂದ ಹೊರಗುಳಿದಿದ್ದ ಮಕ್ಕಳ ಮನೆಗೆ ಭೇಟಿ ನೀಡಿ ಪತ್ತೆ ಮಾಡಲಾಯಿತು. ಒಟ್ಟು 4 ಲಕ್ಷದ 20 ಸಾವಿರ ಮಕ್ಕಳಿಗೂ ಸರ್ಕಾರವೇ ವೆಚ್ಚ ಭರಿಸಿ ಆರ್‌ಟಿಇ ಕಾಯ್ದೆಯಡಿ ಖಾಸಗಿ ಶಾಲೆಗಳಿಗೆ ದಾಖಲಿಸಿದೆ. ಯಾವ ಕಾರಣಕ್ಕಾಗಿ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದರು ಎಂಬುದನ್ನು ಪತ್ತೆ ಮಾಡಲು ಶಿಕ್ಷಕರಿಗೆ ಸೂಚಿಸಲಾಗಿದೆ ಎಂದರು.
2010 ಮಾರ್ಚ್ ತಿಂಗಳ ಜನಗಣತಿ ವರದಿಯಂತೆ ಕರ್ನಾಟಕದಲ್ಲಿ ಹುಟ್ಟಿದ 67 ಲಕ್ಷ ಮಕ್ಕಳಲ್ಲಿ 27 ಲಕ್ಷ ಮಕ್ಕಳು ಗ್ರಾಮೀಣ ಪ್ರದೇಶಕ್ಕೆ ಸೇರಿದರೆ, 40 ಲಕ್ಷ ಮಕ್ಕಳು ನಗರ ಪ್ರದೇಶಕ್ಕೆ ಸೇರಿದ್ದಾರೆ. ಮಕ್ಕಳು ಶಾಲೆಯಿಂದ ಹೊರಗುಳಿಯಲು ವಲಸೆಯೂ ಒಂದು ಕಾರಣ ಎಂದರು.
ಸುಪ್ರೀಂಕೋರ್ಟ್ ನಿರ್ದೇಶನದಂತೆ ಶಿಕ್ಷಕರನ್ನು ಜನಗಣತಿಗೆ ಹೊರತುಪಡಿಸಿದರೆ ಬೇರಾವ ಕೆಲಸಕ್ಕೂ ನಿಯೋಜಿಸಿಲ್ಲ. ಶಿಕ್ಷಣ ಇಲಾಖೆ ಶಿಕ್ಷಕರಿಗೆ ವಿವಿಧ ರೀತಿಯ ತರಬೇತಿ ನೀಡುವುದು ಶೈಕ್ಷಣಿಕ ಚಟುವಟಿಕೆಗಳ ಒಂದು ಭಾಗ. ಮಧ್ಯಾಹ್ನದ ಬಿಸಿಯೂಟ, ಬೋಧನಾ ಚಟುವಟಿಕೆ ಬಿಟ್ಟು ಯಾವುದೇ ಚಟುವಟಿಕೆಗಳಲ್ಲಿ ಶಿಕ್ಷಕರು ತೊಡಗಿಸಿಕೊಳ್ಳುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಸಚಿವ ಕಿಮ್ಮನೆ ಹೇಳಿದರು.
—————
* 11 ಸಾವಿರ ಶಿಕ್ಷಕರ ನೇಮಕಾತಿಗೆ 2 ತಿಂಗಳೊಳಗಾಗಿ ಆದೇಶ
ಬೆಳಗಾವಿ, ಜು.3-ಪ್ರಾಥಮಿಕ ಶಾಲೆಗಲ್ಲಿ ಖಾಲಿ ಇರುವ 11 ಸಾವಿರ ಶಿಕ್ಷಕರ ನೇಮಕಾತಿಗೆ 2 ತಿಂಗಳೊಳಗಾಗಿ ಆದೇಶ ನೀಡಲಾಗುವುದೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ವಿಧಾನಪರಿಷತ್‌ನಲ್ಲಿ ತಿಳಿಸಿದರು. ಸದಸ್ಯ ಜಿ.ಎಸ್.ನ್ಯಾಮೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಈಗಾಗಲೇ 11 ಸಾವಿರ ಶಿಕ್ಷಕರ ನೇಮಕಾತಿಗೆ ಸಿಇಟಿ ಪರೀಕ್ಷೆ ನಡೆಸಲಾಗಿದೆ. 2 ತಿಂಗಳೊಳಗೆ ನೇಮಕಾತಿ ಆದೇಶ ಪೂರ್ಣ ಮಾಡಲಾಗುವುದು. ಜತೆಗೆ 14 ಸಾವಿರ ಅತಿಥಿ ಶಿಕ್ಷಕರ ನೇಮಕಾತಿಗೂ ಮುಖ್ಯಮಂತ್ರಿ ಸಮ್ಮತಿ ಸೂಚಿಸಿದ್ದಾರೆ ಎಂದು ಹೇಳಿದರು. ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ನಕಲು ತಡೆಗಟ್ಟುವ ಉದ್ದೇಶದಿಂದ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳೆ ಸಿಸಿಟಿವಿ ಅಳವಡಿಸುವುದಾಗಿ ಹೇಳಿಕೆ ನೀಡಿದ್ದೆ. ವಾಸ್ತವವಾಗಿ ಇದು ಸಾಧ್ಯವಿಲ್ಲ ಎಂದು ಗೊತ್ತಿತ್ತು. ಏಕೆಂದರೆ ಎಲ್ಲ ಶಾಲೆಗಳಿಗೆ ಸಿಸಿಟಿವಿ ಅಳವಡಿಸಿದರೆ ಆರ್ಥಿಕ ಹೊರೆಯಾಗುತ್ತದೆ. ಆದರೆ ನಾನು ಹೇಳಿಕೆ ಕೊಟ್ಟ ಪರಿಣಾಮ ನಕಲು ಪ್ರಮಾಣ ಕಡಿಮೆಯಾಗಿ ಖಾಸಗಿಯೇತರ ಶಾಲೆಗಿಂತ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬಂದಿದೆ ಎಂದರು. ಕೆಲವು ಸಂದರ್ಭಗಳಲ್ಲಿ ಮಕ್ಕಳಿಗೆ ನಕಲು ಮಾಡುವುದನ್ನು ಪೋಷಕರೇ ಹೇಳಿಕೊಡುತ್ತಾರೆ. ಶಾಸಕರೊಬ್ಬರು ತಮ್ಮ ಪುತ್ರನಿಗೆ ನಕಲು ಮಾಡಲು ಪ್ರೋತ್ಸಾಹ ನೀಡಿದ್ದು ನನ್ನ ಮುಂದಿದೆ. ಆದರೆ ಅವರ ಹೆಸರನ್ನು ಬಹಿರಂಗ ಪಡಿಸುವುದಿಲ್ಲ ಎಂದು ತಿಳಿಸಿದರು. ನಕಲು ತಡೆಗಟ್ಟುವ ಉದ್ದೇಶದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳೆ 3300 ಸಿಸಿಟಿವಿ ಅಳವಡಿಸುವುದಾಗಿ ಹೇಳಿದ್ದು ಸದ್ಯಕ್ಕೆ 800 ರಿಂದ 9000 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಹಂತ ಹಂತವಾಗಿ ಎಲ್ಲಾ ಪರೀಕ್ಷಾ ಕೇಂದ್ರಗಳಿಗೂ ಇದು ಕಡ್ಡಾಯ ಮಾಡುವುದಾಗಿ ಘೋಷಿಸಿದರು.

Write A Comment