ಬೆಂಗಳೂರು: ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರ್ ರಾವ್ ಅವರ ಪುತ್ರ ಅಶ್ವಿನ್ ರಾವ್ ವಿರುದ್ದ ಎಫ್ಐಆರ್ ದಾಖಲಾಗಿದ್ದು, ಅಶ್ವಿನ್ ರಾವ್ ಅವರೇ ಕೃಷ್ಣ ರಾವ್ ಎಂಬ ಹೆಸರಿನಲ್ಲಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದರೆಂಬ ಅಂಶವೂ ಬಯಲಾಗಿದೆ.
ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಕೃಷ್ಣಮೂರ್ತಿಯವರ ದೂರಿನ ಆಧಾರದ ಮೇಲೆ ವಿವಿಧ ಪ್ರಕರಣಗಳಡಿ ಅಶ್ವಿನ್ ರಾವ್ ವಿರುದ್ದ ಮೊಕದ್ದಮೆ ದಾಖಲಿಸಲಾಗಿದ್ದು, ಇದರಲ್ಲಿ ಆರೋಪಿ ಹೆಸರನ್ನು ‘ಅಶ್ವಿನ್ ರಾವ್ ಅಲಿಯಾಸ್ ಕೃಷ್ಣರಾವ್’ ಎಂದು ಹೆಸರಿಸಲಾಗಿದೆ. ದೂರು ನೀಡಿದ್ದ ಇಂಜಿನಿಯರ್ ಕೃಷ್ಣಮೂರ್ತಿಯವರೂ ಸಹ ಅಶ್ವಿನ್ ರಾವ್ ಅವರೇ ತಮ್ಮನ್ನು ಕೃಷ್ಣ ರಾವ್ ಎಂದು ಪರಿಚಯಿಸಿಕೊಂಡಿದ್ದರೆಂದು ತಿಳಿಸಿದ್ದಾರೆ.
ಈ ಮಧ್ಯೆ ಲೋಕಾಯುಕ್ತ ಪೊಲೀಸರ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ ನಡೆಸುತ್ತಿರುವಾಗ ಮತ್ತೊಂದು ತನಿಖೆಯ ಅಗತ್ಯವಿಲ್ಲವೆಂದು ನ್ಯಾಯಪೀಠ ಹೇಳಿದೆ. ಅಶ್ವಿನ್ ರಾವ್ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ತಡೆಯಾಜ್ಞೆ ನೀಡಿದ್ದು, ಅರ್ಜಿದಾರರ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಹಾಜರಾಗಿದ್ದರು.