ಬಿಹಾರ್: ನಾಲ್ವರ ತಂಡವೊಂದು 12 ವರ್ಷದ ಬಾಲಕ ಹಾಗೂ ಆತನ ತಂದೆಗೆ ಗುಂಡಿಕ್ಕಿ ಪರಾರಿಯಾಗುತ್ತಿದ್ದ ವೇಳೆ ಅವರನ್ನು ಹಿಡಿದ ಸಾರ್ವಜನಿಕರ ಗುಂಪು ಮೂವರನ್ನು ಥಳಿಸಿ ಹತ್ಯೆ ಮಾಡಿದೆ. ಮತ್ತೊಬ್ಬ ತಪ್ಪಿಸಿಕೊಳ್ಳುವಲ್ಲಿ ಸಫಲನಾಗಿದ್ದಾನೆ.
ಬಿಹಾರದ ಸೀತಾಮಾಹ್ರಿ ಎಂಬಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಅವಧ್ ಕಿಶನ್ ಸಿಂಗ್ ಎಂಬವರ ಮೊಬೈಲ್ ರಿಪೇರಿ ಅಂಗಡಿಗೆ ಹೋಗಿದ್ದ ಶಸ್ತ್ರಸಜ್ಜಿತರಾಗಿದ್ದ ನಾಲ್ವರ ಗುಂಪು ಯರ್ರಾಬಿರ್ರಿ ಗುಂಡು ಹಾರಿಸಿದೆ. ಇದರ ಪರಿಣಾಮ ತಂದೆ ಜೊತೆಯಿದ್ದ ರತ್ನೇಶ್ ಎಂಬ 12 ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದರೆ ಗುಂಡೇಟಿನಿಂದ ಗಾಯಗೊಂಡ ಅವಧ್ ಕಿಶನ್ ಸಿಂಗ್ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ.
ತಂದೆ ಮತ್ತು ಮಗನ ಮೇಲೆ ಗುಂಡು ಹಾರಿಸಿದ ನಾಲ್ವರ ತಂಡ ಪರಾರಿಯಾಗುವ ಸನ್ನಾಹದಲ್ಲಿದ್ದಾಗ ಗುಂಡಿನ ಸದ್ದು ಕೇಳಿ ಆಗಮಿಸಿದ ಸಾರ್ವಜನಿಕರ ಗುಂಪು ಅವರನ್ನು ಹಿಡಿಯಲು ಮುಂದಾಗಿದೆ. ಗಾಳಿಯಲ್ಲಿ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದರೂ ಅವರನ್ನು ಹಿಡಿದ ಸಾರ್ವಜನಿಕರು ಚೆನ್ನಾಗಿ ಥಳಿಸಿದ್ದಾರೆ. ಇದರ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೊಬ್ಬ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.