ಕರ್ನಾಟಕ

ಲೋಕಾಯುಕ್ತ ಲಂಚ ಪ್ರಕರಣ : ಕಮಲ್‌ಪಂಥ್‌ ನೇತೃತ್ವದ ವಿಶೇಷ ತನಿಖಾ ದಳ ರಚನೆ

Pinterest LinkedIn Tumblr

kamal panth

ಬೆಳಗಾವಿ, ಜೂ.30: ಲೋಕಾಯುಕ್ತ ಕಚೇರಿಯಲ್ಲಿನ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಎಡಿಜಿಪಿ ಕಮಲ್‌ಪಂಥ್ ನೇತೃತ್ವದಲ್ಲಿ ವಿಶೇಷ ತನಿಖಾ ದಳ (ಎಸ್‌ಐಟಿ)ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದ ಲೋಕಾಯುಕ್ತದಲ್ಲಿನ ಭ್ರಷ್ಟಾಚಾರ ಪ್ರಕರಣವನ್ನು ಸ್ವತಂತ್ರ ತನಿಖೆಗೆ ವಹಿಸಬೇಕೆಂದು ಖುದ್ದು ಲೋಕಾಯುಕ್ತರೇ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣವನ್ನು ಎಸ್‌ಐಟಿಗೆ ವಹಿಸಿ ಆದೇಶ ಹೊರಡಿಸಿದೆ. ಲೋಕಾಯುಕ್ತ ಸಂಸ್ಥೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್‌ರಾವ್ ಅವರ ಸಂಬಂಧಿಕರು ಮತ್ತು ಇಲಾಖೆಯ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳು ಇದ್ದವು.

ಈ ಹಿಂದೆ ಲೋಕಾಯುಕ್ತರು ಈ ಪ್ರಕರಣವನ್ನು ಸಿಸಿಬಿಗೆ ವಹಿಸಿದ್ದರು. ಸಿಸಿಬಿ ಜಂಟಿ ಆಯುಕ್ತ ಚಂದ್ರಶೇಖರ್ ಅವರು ನಮ್ಮ ಮಾವನವರಾದ ರಾಮಾಂಜನೇಯ ಅವರ ಮೇಲೆ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಈ ಪ್ರಕರಣವನ್ನು ಸಿಸಿಬಿ ತನಿಖೆ ನಡೆಸುವುದು ಎಷ್ಟು ಸೂಕ್ತ? ಈ ಆದೇಶವನ್ನು ಪುನರ್ ಪರಿಶೀಲಿಸಬೇಕೆಂದು ಲೋಕಾಯುಕ್ತಕ್ಕೆ ಪತ್ರ ಬರೆದಿದ್ದರು.

ಆಗ ಲೋಕಾಯುಕ್ತ ನ್ಯಾಯಮೂರ್ತಿಗಳು ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದಕ್ಕೂ ಮುನ್ನ ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪ ಕೇಳಿಬಂದ ಕೂಡಲೇ ಉಪ ಲೋಕಾಯುಕ್ತರು ಲೋಕಾಯುಕ್ತ ಎಸ್ಪಿ ಸೋನಿಯಾನಾರಂಗ್ ಅವರಿಗೆ ತನಿಖೆ ನಡೆಸುವಂತೆ ಆದೇಶಿಸಿದ್ದರು. ಆದೇಶದಂತೆ ಅವರು ತನಿಖೆ ನಡೆಸುತ್ತಿದ್ದರು. ನಿನ್ನೆ ಲೋಕಾಯುಕ್ತ ನ್ಯಾಯಮೂರ್ತಿಗಳು ತನಿಖೆ ನಡೆಸದಂತೆ ಸೂಚಿಸಿದ್ದರು. ಇಂದು ಸರ್ಕಾರ ಕಾರಾಗೃಹ ಎಡಿಜಿಪಿಯಾಗಿರುವ ಕಮಲ್‌ಪಂಥ್ ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ಲೋಕಾಯುಕ್ತದಲ್ಲಿನ ಭ್ರಷ್ಟಾಚಾರ ಪ್ರಕರಣ ತನಿಖೆ ನಡೆಸಬೇಕೆಂದು ಆದೇಶಿಸಿದೆ.

ಆಪ್ ಮುಖಂಡರ ದೂರು ಕಾನೂನು ತಜ್ಞರಿಗೆ ಹಸ್ತಾಂತರ
ಬೆಂಗಳೂರು:ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣ ಸಂಬಂಧ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಹೈಗ್ರೌಂಡ್ಸ್ ಪೊಲೀಸರಿಗೆ ನೀಡಿರುವ ದೂರನ್ನು ಕಾನೂನು ತಜ್ಞರಿಗೆ ಕಳುಹಿಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಸಂದೀಪ್‌ಪಾಟೀಲ್ ತಿಳಿಸಿದ್ದಾರೆ.

ಕಾನೂನು ತಜ್ಞರ ಅಭಿಪ್ರಾಯ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ ಮುಖಂಡರು, ಕಾರ್ಯಕರ್ತರು ನಿನ್ನೆ ಹೈಗ್ರೌಂಡ್ಸ್ ಆಣೆ ಪೊಲೀಸರಿಗೆ ದೂರು ನೀಡಿ ಧರಣಿ ನಡೆಸಿ ಎಫ್‌ಐಆರ್ ದಾಖಲಿಸುವಂತೆ ಪಟ್ಟು ಹಿಡಿದಿದ್ದನ್ನು ಸ್ಮರಿಸಬಹುದು.

Write A Comment