ಕರ್ನಾಟಕ

ಏಳು ಮಂದಿ ಸರಗಳ್ಳರು -ಕನ್ನಗಳ್ಳರ ಬಂಧನ: 27 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

Pinterest LinkedIn Tumblr

police

ಬೆಂಗಳೂರು, ಜೂ.30: ಆಗ್ನೇಯ ವಿಭಾಗದ ಕಾಡುಗೋಡಿ ಮತ್ತು ವೈಟ್‌ಫೀಲ್ಡ್ ಪೊಲೀಸರು ಏಳು ಮಂದಿ ಸರಗಳ್ಳರು ಮತ್ತು ಕನ್ನಗಳ್ಳರನ್ನು ಬಂಧಿಸಿ 27 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾಡುಗೋಡಿ: ಸರಗಳವು ಮತ್ತು ಕನ್ನಗಳವು ಕೃತ್ಯಗಳಲ್ಲಿ ತೊಡಗಿದ್ದ ಮೂಲತಃ ತಮಿಳುನಾಡಿನ ಅಂಥೋಣಿರಾಜ್ (26), ಆನೇಕಲ್‌ನ ಮೃತ್ಯುಂಜಯ (25) ಮತ್ತು ಶಿವಕುಮಾರ್ (25) ಎಂಬುವರನ್ನು ಕಾಡುಗೋಡಿ ಪೊಲೀಸರು ಬಂಧಿಸಿ 20 ಲಕ್ಷ ಬೆಲೆಯ ಚಿನ್ನದ ಒಡವೆಗಳು, ಬೆಳ್ಳಿ ಸಾಮಾನುಗಳು ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ವ್ಯಾಪ್ತಿಯಲ್ಲಿ ಆಗಿಂದಾಗ್ಗೆ ಸರಗಳವು, ಕನ್ನಗಳವು ನಡೆಯುತ್ತಿದ್ದ ಬಗ್ಗೆ ತನಿಖೆ ಕೈಗೊಂಡಿದ್ದ ಪೊಲೀಸರಿಗೆ ದೊರೆತ ಮಾಹಿತಿ ಮೇರೆಗೆ ಉಪ ಪೊಲೀಸ್ ಕಮಿಷನರ್ ಡಾ.ರೋಹಿಣಿ ಕಟೋಚ್ ಸಪಟ್ ಮತ್ತು ಏರ್‌ಪೋರ್ಟ್ ಉಪವಿಭಾಗದ ಸಹಾಯಕ ಪೊಲೀಸ್ ಕಮಿಷನರ್ ಎಸ್.ಎಚ್.ದುಗ್ಗಪ್ಪ ಮಾರ್ಗದರ್ಶನದಲ್ಲಿ ಕಾಡುಗೋಡಿ ಠಾಣೆ ಇನ್ಸ್‌ಪೆಕ್ಟರ್ ಪ್ರಶಾಂತ್, ಪಿಎಸ್‌ಐ ಪ್ರದೀಪ್, ಪ್ರದೀಪ್‌ಸಿಂಗ್ ಮತ್ತು ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳ ಬಂಧನದಿಂದ ಆಗ್ನೇಯ ವಿಭಾಗದಲ್ಲಿ ವರದಿಯಾಗಿದ್ದಂತಹ ಆರು ಕನ್ನಗಳವು ಹಾಗೂ ಎರಡು ಸರಗಳವು ಪ್ರಕರಣ ಪತ್ತೆಯಾದಂತಾಗಿದೆ.

ವೈಟ್‌ಫೀಲ್ಡ್: ಸರಗಳ್ಳತನ ಪ್ರಕರಣದ ಆರೋಪಿಗಳ ಪತ್ತೆಗಾಗಿ ರಚನೆಗೊಂಡಿದ್ದ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ವೆಂಕಟೇಶ್ (27), ಕಿರಣ್ (19), ಅಂಜನ್‌ಕುಮಾರ್ (24) ಮತ್ತು ಭರತ್ (25) ಎಂಬುವರನ್ನು ಬಂಧಿಸಿದೆ. ಈ ಆರೋಪಿಗಳು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆ ವ್ಯಾಪ್ತಿಯಲ್ಲಿ ಎಸಗಿದ್ದ ಒಟ್ಟು ಆರು ಸರಗಳ್ಳತನ, ಒಂದು ಸುಲಿಗೆ, ಒಂದು ಮನೆಗಳ್ಳತನ ಪ್ರಕರಣ ಪತ್ತೆಯಾದಂತಾಗಿದೆ.

ಮಡಿವಾಳ ಪೊಲೀಸ್ ಠಾಣೆಯ ಎರಡು ಸರಗಳ್ಳತನ, ಮೈಕೋ ಲೇಔಟ್ ಠಾಣೆಯ ಒಂದು ಸರಗಳ್ಳತನ, ನಂದಗುಡಿಯಲ್ಲಿ ನಡೆದ ಸರಗಳ್ಳತನ, ಶಿಡ್ಲಘಟ್ಟ ಗ್ರಾಮಾಂತರ ಠಾಣೆ ವ್ಯಾಪ್ತಿಯ ಎರಡು ಸರಗಳ್ಳತನ ಮತ್ತು ವೈಟ್‌ಫೀಲ್ಡ್ ಠಾಣೆ ವ್ಯಾಪ್ತಿಯ ಒಂದು ಸುಲಿಗೆ, ಒಂದು ಮನೆಗಳ್ಳತನ ಪ್ರಕರಣ ಸೇರಿವೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಹೀರೋಹೊಂಡಾ, ಫ್ಯಾಷನ್ ಪ್ಲಸ್ ಮತ್ತು ಬಜಾಜ್ ಡಿಸ್ಕವರಿ ದ್ವಿಚಕ್ರ ವಾಹನಗಳು, ಚಿನ್ನದ ಆಭರಣ ಸೇರಿ ಒಟ್ಟು 7 ಲಕ್ಷ ರೂ. ಬೆಲೆಬಾಳುವ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Write A Comment