ಕರ್ನಾಟಕ

ಲೋಕಾಯುಕ್ತರ ಪುತ್ರನ ವಿರುದ್ಧದ 100 ಕೋಟಿ ಲಂಚ ಆರೋಪ ಪ್ರಕರಣ; ರಾಜಿನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದರು ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್ ರಾವ್

Pinterest LinkedIn Tumblr

Bhaskara Rao

ಬೆಂಗಳೂರು: ತಮ್ಮ ಪುತ್ರನ ವಿರುದ್ಧದ 100 ಕೋಟಿ ಲಂಚ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಾಪಕ ಟೀಕೆಗೆ ಗುರಿಯಾಗಿರುವ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್ ರಾವ್ ಅವರು ರಾಜಿನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಪೊಲೀಸರ ತನಿಖೆಗೆ ನಾನು ಯಾವುದೇ ಅಡ್ಡಿಪಡಿಸಲ್ಲ ಎಂದಿರುವ ಲೋಕಾಯುಕ್ತರು, ಸದ್ಯ ರಾಜಿನಾಮೆ ನೀಡುವ ಪರಿಸ್ಥಿತಿ ಇಲ್ಲ ಎಂದು ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ಲೋಕಾಯುಕ್ತದಲ್ಲೇ ತನಿಖೆ ಮಾಡಿದ್ರೆ ಜನ ಸಾಮಾನ್ಯರಲ್ಲಿ ನಂಬಿಕೆ ಇರುವುದಿಲ್ಲ ಎಂಬ ಕಾರಣಕ್ಕೆ ನಾನು ಪ್ರಕರಣವನ್ನು ಸಿಸಿಬಿಗೆ ವಹಿಸಿದ್ದೆ. ಅಲ್ಲದೆ ವಿಶೇಷ ತನಿಖಾ ತಂಡ ರಚಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಎಂದು ಭಾಸ್ಕರ್ ರಾವ್ ಅವರು ತಿಳಿಸಿದ್ದಾರೆ.

ಇದುವರೆಗೂ ನಡೆದ ತನಿಖೆಗೆ ನಾನು ಯಾವುದೇ ಅಡ್ಡಿಪಡಿಸಿಲ್ಲ. ಪ್ರಕರಣದಲ್ಲಿ ನನ್ನ ಮಗ ಭಾಗಿಯಾಗಿದ್ದರೆ ಕಾನೂನು ಪ್ರಕಾರ ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗಲಿ ಎಂದು ಲೋಕಾಯುಕ್ತರು ಹೇಳಿದ್ದಾರೆ.

ಲೋಕಾಯುಕ್ತರ ರಾಜಿನಾಮೆಗೆ ಹೆಚ್ಚಿದ ವಕೀಲರ ಒತ್ತಡ
ಈ ಮಧ್ಯೆ ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಅವರ ರಾಜಿನಾಮೆಗೆ ವಕೀಲರ ಒತ್ತಡ ಮತ್ತಷ್ಟು ಹೆಚ್ಚಾಗುತ್ತಿದ್ದು, ರಾಜಿನಾಮೆ ನೀಡುವವರೆಗೂ ಪ್ರತಿಭಟನೆ ಮಾಡುವುದಾಗಿ ವಕೀಲರ ಸಂಘದ ಮಾಜಿ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ ಅವರು ಘೋಷಿಸಿದ್ದಾರೆ.

ಈ ಸಂಬಂಧ ಇಂದು ಸ್ವತಃ ನ್ಯಾ.ಭಾಸ್ಕರ್ ರಾವ್ ಅವರನ್ನು ಭೇಟಿ ಮಾಡಿದ ಸುಬ್ಬಾರೆಡ್ಡಿ ನೇತೃತ್ವದ ವಕೀಲರ ನಿಯೋಗ, ನೈತಿಕ ಹೊಣೆಹೊತ್ತು ರಾಜಿನಾಮೆ ನೀಡುವಂತೆ ಒತ್ತಾಯಿಸಿದೆ. ಭಾಸ್ಕರ್ ರಾವ್ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಬ್ಬಾರೆಡ್ಡಿ, ನೈತಿಕತೆಯಿಂದ ರಾಜಿನಾಮೆ ನೀಡುವಂತೆ ನಾವು ಒತ್ತಾಯಿಸಿದೆವು. ಆದರೆ ಈಗ ರಾಜಿನಾಮೆ ನೀಡಲು ಅವರು ನಿರಾಕರಿಸಿದ್ದು, ತನಿಖಾ ವರದಿ ಬಂದ ಬಳಿಕ ರಾಜಿನಾಮೆ ನೀಡುಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.

Write A Comment