ಕರ್ನಾಟಕ

ಆಗುಂಬೆ ವೈಭವಕ್ಕೆ ಮೆರುಗು ನೀಡುತ್ತಿದ್ದ ಜೀವ ಇನ್ನಿಲ್ಲ

Pinterest LinkedIn Tumblr

3324padiyarಶಿವಮೊಗ್ಗ: ತಮ್ಮ ವಿಶಿಷ್ಟ ಮಾತುಗಾರಿಕೆ, ರುಚಿಕಟ್ಟಾದ ಗರಂ ಗರಂ ಆಂಬೊಡೆ ಮೂಲಕ ಆಗುಂಬೆಯ ಪ್ರವಾಸಿಗಳ ಮನಸ್ಸಿನಲ್ಲಿ ಅಚ್ಚಳಿಯದ ಅನುಭವ ಮೂಡಿಸುತ್ತಿದ್ದ ಆಗುಂಬೆಯ ಆಂಬೊಡೆ ಗಾಡಿ ಕ್ಯಾಂಟೀನಿನ ಡಿ.ಪಿ ಪಡಿಯಾರ್ ಇನ್ನಿಲ್ಲ.

ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 64 ವರ್ಷದ ಪಡಿಯಾರ್ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಅವರಿಗೆ ಪತ್ನಿ, ಒಬ್ಬ ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

ವಿಶಿಷ್ಟ ವ್ಯಕ್ತಿತ್ವ: ಕಾರ್ಕಳ ಸಮೀಪದ ದೊಡ್ಡೇರಂಗಡಿ ಮೂಲದ ಪಡಿಯಾರ್ ಅವರು ಕಳೆದ 22 ವರ್ಷದಿಂದ ಆಗುಂಬೆ ಘಾಟಿ ಆರಂಭದ ತಿರುವಲ್ಲಿ ತಳ್ಳುವ ಗಾಡಿ ಕ್ಯಾಂಟೀನ್ ನಡೆಸಿಕೊಂಡು ಬರುತ್ತಿದ್ದರು.

ಅವರ ಕ್ಯಾಂಟೀನಿನ ಆಂಬೊಡೆ, ಗೋಲಿಬಜೆ, ನೀರು ದೋಸೆ, ಕಷಾಯವನ್ನು ಒಮ್ಮೆ ಸವಿದವರು ಮತ್ತೆ ಮತ್ತೆ ಅದರ ರುಚಿಯ ಮೋಹಕ್ಕೆ ಒಳಗಾಗುತ್ತಿದ್ದರು. ಅತ್ಯಂತ ಸರಳ, ಸಜ್ಜನಿಕೆಯ ಪಡಿಯಾರ್ ತಮ್ಮ ಕೈರುಚಿಯ ತಿನಿಸುಗಳಷ್ಟೇ ವಿಶಿಷ್ಟ ಅನುಭವವನ್ನು ಮೋಡಿ ಮಾಡುವ ಮಾತುಗಾರಿಕೆಯಿಂದಲೂ ನೀಡುತ್ತಿದ್ದರು.

ಸುರಿವ ಮಳೆ, ಕೊರೆವ ಚಳಿಯ ನಡುವೆ ಅವರ ಕ್ಯಾಂಟೀನಿನ ಬಿಸಿ ಬಿಸಿ ಆಂಬೊಡೆ ಮೆಲ್ಲುತ್ತಾ, ಅವರ ಮಾಂತ್ರಿಕ ಮಾತುಗಾರಿಕೆಗೆ ಮರುಳಾಗದವರೇ ಇರಲಿಲ್ಲ. ಚಿಕ್ಕ ಕ್ಯಾಂಟೀನಿನಲ್ಲಿ ಅಡುಗೆ ಸಾಮಗ್ರಿಗಳೊಂದಿಗೆ ಯು.ಆರ್. ಅನಂತಮೂರ್ತಿ, ಎಸ್.ಎಲ್. ಭೈರಪ್ಪರಂತಹ ಮೇರು ಲೇಖಕರ ಕೃತಿಗಳೂ, ಸ್ವಾಮಿ ವಿವೇಕಾನಂದರಂತಹ ಆಧ್ಯಾತ್ಮ ಚಿಂತಕರ ಪುಸ್ತಕಗಳನ್ನೂ ಪೇರಿಸಿಟ್ಟುಕೊಂಡಿದ್ದರು.

ನಿರಂತರ ಓದು ಮತ್ತು ಜನಸಂಪರ್ಕದ ಮೂಲಕ ಅವರು ಹೊಂದಿದ್ದ ಅನುಭವ ಮತ್ತು ಅರಿವು ಅವರನ್ನು ವಿಶಿಷ್ಟ ವ್ಯಕ್ತಿಯನ್ನಾಗಿ ರೂಪಿಸಿದ್ದು, ಒಮ್ಮೆ ಪರಿಚಿತರಾದವರು ಮತ್ತೆ- ಮತ್ತೆ ಭೇಟಿಯಾಗುವಂತಹ ಆಕರ್ಷಣೆ ಅವರಲ್ಲಿತ್ತು. ಅಲ್ಲದೆ ಆಗುಂಬೆ ಸುತ್ತಮುತ್ತಲ ಜನರ ಪಾಲಿಗೆ ಆಪ್ತ ಬಂಧುವಂತೆಯೇ ಇದ್ದ ಪಡಿಯಾರ್, ಎಲ್ಲರ ನೋವು-ನಲಿವಿಗೆ ಆಗುವ ವ್ಯಕ್ತಿಯಾಗಿದ್ದರು.

ಅವರ ನಿಧನದೊಂದಿಗೆ ಆಗುಂಬೆಯ ವೈಭವದೊಂದಿಗೆ ಬೆಸೆದಿದ್ದ ಅದ್ಭುತ ಅನುಭವ ಲೋಕವೊಂದು ಮುಕ್ಕಾದಂತಾಗಿದ್ದು, ಆಗುಂಬೆ ಮಾರ್ಗದ ಪ್ರಯಾಣಿಕರು, ಪ್ರವಾಸಿಗಳಿಗೆ ಆಂಬೊಡೆ ಪಡಿಯಾರ್ ಅನುಪಸ್ಥಿತಿ ಕಾಡಲಿದೆ ಎಂಬುದಂತೂ ದಿಟ. ವಿ ರಿಯಲೀ ಮಿಸ್ ಯೂ ಪಡಿಯಾರಣ್ಣ!

Write A Comment