ಕರ್ನಾಟಕ

ಲೋಕಾಯುಕ್ತ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಹೈಗ್ರೌಂಡ್ಸ್ ಠಾಣೆ ಮುಂದೆ ಆಮ್‌ಆದ್ಮಿ ಪ್ರತಿಭಟನೆ; ದೂರು ದಾಖಲು

Pinterest LinkedIn Tumblr

AAP-Protest

ಬೆಂಗಳೂರು,ಜೂ.29: ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿಗಳ ಸಂಬಂಧಿಗಳೇ ಆಗಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿರುವ ಆಮ್ ಆದ್ಮಿ ಪಕ್ಷದ ಮುಖಂಡರು ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿ ದೂರು ನೀಡಿದ್ದಾರೆ.

ದೂರು ನೀಡಿರುವ ಆಮ್‌ಆದ್ಮಿ ಕಾರ್ಯಕರ್ತರು ಕೂಡಲೇ ಈ ಬಗ್ಗೆ ಎಫ್‌ಐಆರ್ ದಾಖಲಿಸುವಂತೆ ಹೈಗ್ರೌಂಡ್ಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.

ಆಮ್ ಆದ್ಮಿ ಪಕ್ಷದ ಮುಖಂಡರಾದ ರವಿಕೃಷ್ಣ ರೆಡ್ಡಿ ಮತ್ತು ಸಿದ್ಧಾರ್ಥ ಶರ್ಮ ಅವರು ಹೈಗ್ರೌಂಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದು , ಲೋಕಾಯುಕ್ತ ನ್ಯಾಯಮೂರ್ತಿಗಳ ನಿಕಟ ಸಂಬಂಧಿಗಳ ವಿರುದ್ಧವೇ ಭ್ರಷ್ಟಾಚಾರದ ಆರೋಪ ಸತತವಾಗಿ ಕೇಳಿಬಂದಿದೆ. ಅವರ ಅಧಿಕೃತ ನಿವಾಸದಲ್ಲಿ ಕೆಲವು ಖಾಸಗಿ ವ್ಯಕ್ತಿಗಳು ಅವ್ಯವಹಾರ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಪ್ರಮುಖವಾಗಿ ಕೃಷ್ಣರಾವ್ ಮತ್ತು ಅಶ್ವಿನ್ ರಾವ್ ಎಂಬುವರು ಸರ್ಕಾರಿ ಅಧಿಕಾರಿಗಳನ್ನು ಲೋಕಾಯುಕ್ತರ ನಿವಾಸಕ್ಕೆ ಕರೆಸಿಕೊಂಡು ಅವರನ್ನು ಬೆದರಿಸಿ ಬ್ಲಾಕ್‌ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅಶ್ವಿನ್ ರಾವ್ ಎಂಬ ಹೆಸರಿನ ಮಗ ಇರುವುದಾಗಿ ಖುದ್ದು ಲೋಕಾಯುಕ್ತರಿಗೆ ಒಪ್ಪಿಕೊಂಡಿದ್ದಾರೆ.

ಅಶ್ವಿನ್ ರಾವ್ ಎಂಬುವರು ಹಣ ಸುಲಿಗೆ ಕೃತ್ಯಗಳಲ್ಲಿ ತೊಡಗಿದ್ದಾರೆಂಬುದು ವರದಿಗಳಿಂದ ತಿಳಿದುಬಂದಿದೆ. ಸರ್ಕಾರಿ ಅಧಿಕಾರಿಯನ್ನು ಕರೆಸಿಕೊಂಡು ಬಳಸಲ್ಪಟ್ಟ ದೂರವಾಣಿ ಸಂಖ್ಯೆಯೂ ಕೂಡ ತಿಳಿದುಬಂದಿದೆ. ಲೋಕಾಯುಕ್ತರ ನಿವಾಸವನ್ನು ಅಕ್ರಮಕ್ಕೆ ಬಳಸಿಕೊಂಡಿರುವುದು ಲೋಕಾಯುಕ್ತರ ಹೆಸರು ಮತ್ತು ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಅಶ್ವಿನ್ ರಾವ್ ಮತ್ತು ಕೃಷ್ಣರಾವ್ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.

Write A Comment