ಕರ್ನಾಟಕ

ಪ್ರತಿಪಕ್ಷಗಳ ತಂತ್ರಕ್ಕೆ ಪ್ರತಿ ತಂತ್ರ ರೂಪಿಸಲು ಸಚಿವರ ಜೊತೆ ಸಿಎಂ ಚರ್ಚೆ

Pinterest LinkedIn Tumblr

CM--Meeting

ಬೆಳಗಾವಿ(ಸುವರ್ಣಸೌಧ),ಜೂ.29: ಅಧಿವೇಶನದಲ್ಲಿ ಪ್ರತಿಪಕ್ಷಗಳ ತಂತ್ರಕ್ಕೆ ಪ್ರತಿ ತಂತ್ರ ರೂಪಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನಗರದ ಸರ್ಕ್ಯೂಟ್ ಹೌಸ್‌ನಲ್ಲಿಂದು ಸಂಪುಟ ಸಚಿವರ ಜೊತೆ ಮಹತ್ವದ ಚರ್ಚೆ ನಡೆಸಿದರು.

ಸಚಿವರಾದ ಕೆ.ಜೆ.ಜಾರ್ಜ್, ಎಚ್.ಕೆ.ಪಾಟೀಲ್, ಮಹದೇವಪ್ರಸಾದ್, ಎಚ್.ಸಿ.ಮಹದೇವಪ್ಪ , ಜಾರಕಿಹಳ್ಳಿ , ರಾಮಲಿಂಗಾರೆಡ್ಡಿ , ರೋಷನ್ ಬೇಗ್ ಸೇರಿದಂತೆ ಹಲವು ಸಚಿವರೊಂದಿಗೆ ಮಹತ್ವದ ಸಭೆ ನಡೆಸಿದ ಸಿದ್ದರಾಮಯ್ಯನವರು ಉಭಯ ಸದನಗಳಲ್ಲಿ ಸರ್ಕಾರವನ್ನು ಸಮರ್ಥಿಸಿಕೊಳ್ಳುವುದು, ಪ್ರತಿಪಕ್ಷಗಳ ಹೋರಾಟವನ್ನು ನಿಯಂತ್ರಿಸುವ ಕುರಿತು ಪ್ರತಿ ತಂತ್ರಗಳ ಬಗ್ಗೆ ಚರ್ಚೆ ನಡೆಸಿದರು.

ಕಬ್ಬು ಬೆಳೆಗಾರರಿಗೆ ಪಾವತಿಯಾಗದ ಬಾಕಿ ಹಣ, ರಾಜ್ಯದಲ್ಲಿರುವ ನಡೆಯುತ್ತಿರುವ ರೈತರ ಆತ್ಮಹತ್ಯೆ ಮುಂತಾದ ವಿಷಯಗಳ ಬಗ್ಗೆ ಪ್ರತಿಪಕ್ಷಗಳು ಸರ್ಕಾರದ ವಿರುದ್ದ ಹರಿಹಾಯುತ್ತಾರೆ. ಇದನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಮುಖ್ಯಮಂತ್ರಿಗಳು ಸಚಿವರೊಂದಿಗೆ ಚರ್ಚೆ ನಡೆಸಿದರು.

ಈ ಹಿಂದೆ ಇದ್ದ ಸರ್ಕಾರಗಳು ಸಕ್ಕರೆ ಕಂಪನಿ ಮಾಲೀಕರ ವಿರುದ್ಧ ಕೈಗೊಂಡ ಕ್ರಮಗಳು, ಕಬ್ಬು ಬೆಳೆಗಾರರಿಗೆ ನೀಡಿದ ದರ ಮುಂತಾದ ವಿವರಗಳನ್ನು ಸದನದಲ್ಲಿ ಮಂಡಿಸಲು ನಿರ್ಧರಿಸಿದ್ದಾರೆ. ಈವರೆಗೆ ಯಾವುದೇ ಸರ್ಕಾರ ಸಕ್ಕರೆ ಕಂಪನಿಯ ಗೋದಾಮುಗಳನ್ನು ಜಪ್ತಿ ಮಾಡಿರಲಿಲ್ಲ. ನಾವು ಜಪ್ತಿ ಮಾಡಿ ಸಕ್ಕರೆ ಮಾರಾಟ ಮಾಡಿ ರೈತರ ಕಬ್ಬಿನ ಬಾಕಿಯನ್ನು ಪಾವತಿಸುತ್ತೇವೆ ಎಂದು ಭರವಸೆ ನೀಡಿದ್ದೇವೆ. ಈ ಎಲ್ಲ ವಿಷಯವನ್ನು ಸಮರ್ಥವಾಗಿ ಸದನದಲ್ಲಿ ವಿವರಿಸಬೇಕಾಗಿದೆ.

ಸರ್ಕಾರ ವಶಪಡಿಸಿಕೊಂಡಿರುವ ಸಕ್ಕರೆಯನ್ನು ತಾಂತ್ರಿಕ ಕಾರಣಗಳಿಂದ ಮಾರಾಟ ಮಾಡಲು ಸಾಧ್ಯವಾಗದಿದ್ದರೆ ಕಬ್ಬಿನ ಬಾಕಿಯನ್ನು ಸರ್ಕಾರವೇ ನೀಡಲು ಮುಂದಾದರೆ ಎಷ್ಟು ಸರ್ಕಾರಕ್ಕೆ ಹೊರೆಯಾಗುತ್ತದೆ, ಅದನ್ನು ಯಾವ ಮೂಲದಿಂದ ಭರಿಸಬೇಕು ಎಂಬ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ.

ಎಲ್ಲ ಶಾಸಕರೂ ಕಡ್ಡಾಯವಾಗಿ ಸದನದ ಕಾರ್ಯ ಕಲಾಪಗಳಲ್ಲಿ ಹಾಜರಿರಬೇಕೆಂದು ಮುಖ್ಯ ಸಚೇತಕರು ವಿಪ್ ಜಾರಿಗೊಳಿಸಿದ್ದಾರೆ. ಮೂರು ಪಕ್ಷಗಳವರು ಕಡ್ಡಾಯವಾಗಿ ಹಾಜರಿರಬೇಕೆಂದು ಶಾಸಕರಿಗೆ ಸೂಚಿಸಿರುವುದರಿಂದ ಅಧಿವೇಶನಕ್ಕೆ ಖದರ್ ಬಂದಿದೆ.

Write A Comment