ಕರ್ನಾಟಕ

ಪ್ರಕರಣ ಮುಚ್ಚಿಹಾಕಲು ಲೋಕಾಯುಕ್ತ ಅಧಿಕಾರಿಗಳಿಂದ 5 ಕೋಟಿ ಲಂಚದ ಬೇಡಿಕೆ

Pinterest LinkedIn Tumblr

Corruprion-in-inidaಬೆಂಗಳೂರು,ಜೂ.27- ತಮ್ಮ ಮೇಲೆ ದಾಖಲಾಗಿರುವ ಪ್ರಕರಣವನ್ನು ಮುಚ್ಚಿಹಾಕಬೇಕಾದರೆ ಐದು ಕೋಟಿ ರೂ. ಲಂಚ ನೀಡಬೇಕೆಂದು ಶಾಸಕರೊಬ್ಬರಿಗೆ ಲೋಕಾಯುಕ್ತ ಅಧಿಕಾರಿಗಳು ಒತ್ತಡ ಹಾಕಿರುವುದು ಬೆಳಕಿಗೆ ಬಂದಿದೆ. ಸರ್ಕಾರದ ಹಿರಿಯ ಅಧಿಕಾರಿಯೊಬ್ಬರಿಗೆ ಒಂದು ಕೋಟಿ ಲಂಚ ಕೇಳಿದ

ಪ್ರಕರಣ ಹೊರಬಿದ್ದ ಬೆನ್ನಲ್ಲೆ ಲೋಕಾಯುಕ್ತ ಸಂಸ್ಥೆ ವಿರುದ್ಧ ಈ ಆರೋಪ ಕೇಳಿಬಂದಿದೆ. ಬೆಂಗಳೂರು ಮೂಲದ ರಾಷ್ಟ್ರೀಯ ಪಕ್ಷವೊಂದರ ಶಾಸಕರಾಗಿರುವ ಇವರು ಮೂಲತಃ ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ನಡೆಸುತ್ತಿದ್ದರು.  ಜಮೀನು ಖರೀದಿಗೆ ಸಂಬಂಧಿಸಿದಂತೆ ಈ ಶಾಸಕರ ವಿರುದ್ಧ ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾ ಸಗಿ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದರು. ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್‌ರಾವ್ ಅವರಿಗೆ ಸೇರಿದ ಬೆಂಗಳೂರಿನ ಸ್ಯಾಂಕಿ ರಸ್ತೆಯಲ್ಲಿರುವ ನಿವಾಸಕ್ಕೆ ಬರಬೇಕೆಂದು ಈ ಶಾಸಕರಿಗೆ ಸಂಸ್ಥೆ ಅಧಿಕಾರಿಗಳೇ ದೂರವಾಣಿ ಕರೆ ಮಾಡಿದ್ದರು.

ಸರಿಸುಮಾರು ಒಂದು ತಿಂಗಳ ಹಿಂದೆ ಈ ಪ್ರಕರಣ ನಡೆದಿದ್ದು, ಶಾಸಕರು ಇದನ್ನು ಬಹಿರಂಗಪಡಿಸಲು ಹಿಂದೇಟು ಹಾಕಿದ್ದಾರೆ. ಮಾಧ್ಯಮಗಳ ಮುಂದೆ ಹೇಳಿಕೆ ನೀಡಲು ತಮ್ಮ ಬಳಿ ಯಾವ ದಾಖಲೆಗಳೂ ಇಲ್ಲ. ಅಲ್ಲದೆ, ಇದನ್ನು ಮಾಧ್ಯಮದವರು ಒಪ್ಪುತ್ತಾರೆಯೇ ಎಂಬ ಜಿಜ್ಞಾಸೆ ಎದುರಾಗಿತ್ತು. ಯಾವಾಗ ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಸೋನಿಯಾ ನಾರಂಗ್ ಸಂಸ್ಥೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದರೋ ಆಗ ಈ ಪ್ರಕರಣದ ಕುರಿತು ಲೋಕಾಯುಕ್ತರಿಗೆ ದೂರು ನೀಡಬೇಕೆಂದು ಶಾಸಕರು ತೀರ್ಮಾನಿಸಿದ್ದಾರೆ. ಬೆಂಗಳೂರು ಹೊರವಲಯದಲ್ಲಿ ಈ ಶಾಸಕರು ಸುಮಾರು ನೂರಕ್ಕೂ ಹೆಚ್ಚು ಎಕರೆ ಜಮೀನನ್ನು ಖರೀದಿಸಿದ್ದರು. ಅರಣ್ಯ ಭೂಮಿಗೆ ಸೇರಿದ ಜಮೀನನ್ನು ಒತ್ತುವರಿ ಮಾಡಿಕೊಂಡು ಶಾಸಕರು ಲೇಔಟ್ ನಿರ್ಮಾಣ ಮಾಡಲು ಮುಂದಾಗಿದ್ದಾರೆಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸಲು ಮುಂದಾಗಿದ್ದರು.

ಕೆಲ ದಿನಗಳ ಹಿಂದೆ ನ್ಯಾಯಮೂರ್ತಿ ಭಾಸ್ಕರ್‌ರಾವ್ ಜಿಲ್ಲಾ ಪ್ರವಾಸಕ್ಕೆ ಹೊರಟ ವೇಳೆ ಸಂಸ್ಥೆಯಲ್ಲಿರುವ ನಾಲ್ವರು ಅಧಿಕಾರಿಗಳು ಈ ಶಾಸಕರಿಗೆ ದೂರವಾಣಿ ಕರೆ ಮಾಡಿ ಭಾಸ್ಕರ್‌ರಾವ್ ನಿವಾಸಕ್ಕೆ ಬರುವಂತೆ ಸೂಚನೆ ಕೊಟ್ಟಿದ್ದರು. ಹೀಗೆ ಹಲವಾರು ಬಾರಿ ದೂರವಾಣಿ ಕರೆ ಮಾಡಿದ್ದರೂ ಇದರ ಬಗ್ಗೆ ಶಾಸಕರು ಗಂಭೀರವಾಗಿ ಪರಿಗಣಿಸಿರಲಿಲ್ಲ. ನೀವು ಭಾಸ್ಕರ್‌ರಾವ್ ನಿವಾಸಕ್ಕೆ ಬರದಿದ್ದರೆ ನಿಮ್ಮ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಲಾಗುತ್ತದೆ. ಪ್ರಕರಣ ಗಂಭೀರವಾಗಿರುವುದರಿಂದ ಎಫ್‌ಐಆರ್ ದಾಖಲಿಸುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಯಾವಾಗ ದಾಳಿ ನಡೆಸುತ್ತೇವೆಂದು ದೂರವಾಣಿ ಕರೆ ಬಂದಿತೋ ಹೆದರಿಕೊಂಡ ಶಾಸಕರು ಸ್ಯಾಂಕಿಟ್ಯಾಂಕಿ ನಿವಾಸಕ್ಕೆ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಶಾಸಕರನ್ನು ನಿವಾಸದಲ್ಲಿ ಕೂರಿಸಿಕೊಂಡ ಲೋಕಾಯುಕ್ತ ಸಂಸ್ಥೆ ಅಧಿಕಾರಿಗಳು ಪ್ರಕರಣ ಮುಚ್ಚಿಹಾಕಬೇಕಾದರೆ 5 ಕೋಟಿ ಹಣ ನೀಡಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ವಿಚಾರಣೆಯನ್ನು ತ್ವರಿತಗತಿಯಲ್ಲಿ ನಡೆಸುತ್ತೇವೆ ಎಂದು ಬೆದರಿಸಿದ್ದರು. ತಾವು ಲೋಕಾಯುಕ್ತ ನ್ಯಾಯಮೂರ್ತಿಗಳ ಕಾರ್ಯದರ್ಶಿಗಳು. ಈ ವಿಷಯವನ್ನು  ಎಲ್ಲಿಯೂ ಕೂಡ ಬಹಿರಂಗಪಡಿಸಬಾರದು. ಹಾಗೊಂದು ವೇಳೆ ಬಹಿರಂಗವಾದರೆ ಮರುದಿನವೇ ನಿಮ್ಮ ಮನೆಯ ಮೇಲೆ ದಾಳಿ ನಡೆಯುತ್ತದೆ ಎಂದು ಎಚ್ಚರಿಸಿದರು.
ಆದರೆ, ಶಾಸಕರು ಲೋಕಾಯುಕ್ತ ಅಧಿಕಾರಿಗಳಿಗೆ ಬೇಡಿಕೆಯಂತೆ ಐದು ಕೋಟಿ ಹಣ ಕೊಟ್ಟಿದ್ದಾರೋ, ಇಲ್ಲವೋ ಎಂಬುದು ಮಾತ್ರ ಖಚಿತವಾಗಿಲ್ಲ. ಹಣ ಕೇಳಿರುವುದು ಮಾತ್ರ ಸತ್ಯ ಎಂದು ಈ ಶಾಸಕರೇ ಒಪ್ಪಿಕೊಂಡಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯ್ತು ಎಂಬ ಕಥೆಯಂತಿದೆ ಲೋಕಾಯುಕ್ತ ಅಧಿಕಾರಿಗಳ ಭ್ರಷ್ಟಾಚಾರ ವಿರುದ್ಧದ ಹೋರಾಟ.

Write A Comment