ಕರ್ನಾಟಕ

ಪೂಜಾ ಗಾಂಧಿ ವಿರುದ್ಧ ವಂಚನೆ ಆರೋಪ; ವಾಣಿಜ್ಯ ಮಂಡಳಿಗೆ ದೂರು

Pinterest LinkedIn Tumblr

pooja

ಬೆಂಗಳೂರು: ‘ಅಭಿನೇತ್ರಿ’ ಚಿತ್ರಕ್ಕಾಗಿ ಪಡೆದ ಒಂದು ಕೋಟಿ ರೂಪಾಯಿಗಳನ್ನು ಹಿಂದಿರುಗಿಸದೇ ವಂಚನೆ ಎಸಗಿದ್ದಾರೆ ಎಂಬ ಆರೋಪಕ್ಕೆ ಚಿತ್ರನಟಿ ಪೂಜಾಗಾಂಧಿ ಗುರಿಯಾಗಿದ್ದಾರೆ.

ಸೆಟ್ಟೇರಿದ ಮೊದಲ ದಿನದಿಂದಲೂ ‘ಅಭಿನೇತ್ರಿ’ ಚಿತ್ರ ಒಂದಿಲ್ಲೊಂದು ವಿವಾದಕ್ಕೆ ಸಿಲುಕುತ್ತಲೇ ಇತ್ತು. ಈಗ ಚಿತ್ರ ತೆರಕಂಡು 5 ತಿಂಗಳು ಕಳೆದರೂ ವಿವಾದ ಮಾತ್ರ ತಣ್ಣಗಾಗಿಲ್ಲ. ಆ ಚಿತ್ರದ ಸಲುವಾಗಿ ಡಾ. ಸುರೇಶ್ ಶರ್ಮ ಅವರಿಂದ 1 ಕೋಟಿ ರೂ. ಪಡೆದ ಪೂಜಾ ಗಾಂಧಿ ಮತ್ತು ಅವರ ತಂದೆ ಪವನ್ ಗಾಂಧಿ ಇದೀಗ ಹಣ ಹಿಂದಿರುಗಿಸದೇ ವಂಚನೆ ಆರೋಪ ಎದುರಿಸುತ್ತಿದ್ದಾರೆ.

ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಡಾ. ಸುರೇಶ್ ಶರ್ವ ಲಿಖಿತ ರೂಪದಲ್ಲಿ ದೂರು ಸಲ್ಲಿಸಿದ್ದಾರೆ. ‘ಅಭಿನೇತ್ರಿ’ ಚಿತ್ರದ ಚಿತ್ರೀಕರಣೋತ್ತರ ಕೆಲಸಗಳಿಗಾಗಿ ಪೂಜಾ ಗಾಂಧಿ ಮತ್ತು ಪವನ್ ಗಾಂಧಿ ನನ್ನಿಂದ 1 ಕೋಟಿ ರೂ. ಸಾಲ ಪಡೆದಿದ್ದರು. ಚಿತ್ರದ ಸ್ಯಾಟಲೈಟ್ ಹಕ್ಕುಗಳ ಮಾರಾಟವಾಗುತ್ತಿದ್ದಂತೆ ಒಂದು ತಿಂಗಳೊಳಗೆ ಹಣ ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ಇಂದು ನಾಳೆ ಎಂದು ಸತಾಯಿಸುತ್ತಿದ್ದಾರೆ’ ಎಂದು ಶರ್ವ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೇ ಇಬ್ಬರನ್ನೂ ಮಂಡಳಿಗೆ ಕರೆಸಿ ತಮ್ಮ ಹಣವನ್ನು ವಾಪಸ್ಸು ಕೊಡಿಸುವಂತೆ ಅವರು ವಿನಂತಿಸಿಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಡಳಿ ಅಧ್ಯಕ್ಷ ಥಾಮಸ್ ಡಿಸೋಜಾ, ‘ಈಗಾಗಲೇ ಪೂಜಾಗಾಂಧಿ ಜತೆ ಒಮ್ಮೆ ಮಾತನಾಡಿದ್ದೇವೆ. ಆದರೆ ಅವರಿಂದ ಸೂಕ್ತ ಪ್ರತಿಕ್ರಿಯೆ ಸಿಕ್ಕಿಲ್ಲ. ಹಾಗಾಗಿ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

ಆರೋಪ ನಿರಾಧಾರ ಪೂಜಾ ಸ್ಪಷ್ಟನೆ

ಸುರೇಶ್ ಶರ್ಮಾ ನನ್ನ ವಿರುದ್ಧ ಮಾಡಿರುವ ಆರೋಪ ನಿರಾಧಾರ. ವೈಯಕ್ತಿಕ ತೇಜೋವಧೆ ಮಾಡುವ ಹುನ್ನಾರ ನಡೆಸಿದ್ದಾರೆ. ಅದನ್ನು ಬಿಟ್ಟು ಬೇರೇನೂ ಇಲ್ಲ ಎಂದು ನಟಿ ಪೂಜಾಗಾಂಧಿ ಪ್ರತಿಕ್ರಿಯಿಸಿದ್ದಾರೆ. ಸುರೇಶ್ ಶರ್ಮಾ ಅವರ ಬಗ್ಗೆ ಅಪಾರವಾದ ಗೌರವವಿತ್ತು ಅದು ಈಗ ಸುಳ್ಳಾಗಿದೆ. ಅವರ ವಿರುದ್ಧ ಮಾತನಾಡುವುದಕ್ಕೆ ಸಾಕಷ್ಟು ವಿಷಯಗಳಿವೆ. ಅದನ್ನು ಸಮಯ ಬಂದಾಗ ವಿಷಯ ಬಹಿರಂಗಪಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.

ಚಿತ್ರದ ಪ್ರಚಾರಕ್ಕಾಗಿ ಈ ರೀತಿ ಗಿಮಿಕ್ ಮಾಡುತ್ತಿದ್ದಾರೆ. ಅನಗತ್ಯ ವಿವಾದ ಮೇಲೆ ಎಳೆದುಕೊಳ್ಳಲು ಸಿದ್ಧರಿಲ್ಲ. ವಾಣಿಜ್ಯ ಮಂಡಳಿಯ ದೂರಿಗೆ ತಕ್ಕ ಉತ್ತರ ನೀಡುತ್ತೇನೆ. ಸಮಯ ಬಂದಾಗ ಸುರೇಶ್ ಶರ್ಮಾ ವಿರುದ್ಧ ಮಾತನಾಡುತ್ತೇನೆ ಎಂದು ಪೂಜಾಗಾಂಧಿ ಹೇಳಿದ್ದಾರೆ. ಆದರೆ, ಅವರಿಂದ ಹಣ ಪಡೆದಿರುವ ಅಥವಾ ಇಲ್ಲವೆ? ಎನ್ನುವ ಬಗ್ಗೆ ಪೂಜಾಗಾಂಧಿ ಯಾವುದೇ ಪ್ರತಿಕ್ರಿಯೆ ನೀಡದೆ ಜಾರಿಕೊಂಡಿದ್ದಾರೆ.

Write A Comment