ಕರ್ನಾಟಕ

ಡೇಂಘಿ ಉಲ್ಬಣ ; ಬೆಂಗಳೂರು ತಲ್ಲಣ -ಬಿಬಿಎಂಪಿ ಅಧಿಕಾರಿಗಳು ಎಲ್ಲಣ್ಣಾ…?

Pinterest LinkedIn Tumblr

Bangalore-Dengue-Feverಬೆಂಗಳೂರು, ಜೂ.26- ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ನಗರದಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣಗೊಂಡಿದ್ದರೂ ಬಿಬಿಎಂಪಿ ರೋಗ ತಡೆಗೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಡೇಂಘಿ, ಚಿಕೂನ್‌ಗುನ್ಯಾ, ಇನ್‌ಫ್ಲೂಯೆಂಜ,

ಮಲೇರಿಯಾ ಮತ್ತಿತರರ ಮಾರಕ ರೋಗಗಳು ಕಾಣಿಸಿಕೊಳ್ಳುತ್ತಿದ್ದು ಪ್ರತಿನಿತ್ಯ ಆಸ್ಪತ್ರೆಗಳ ಮುಂದೆ ರೋಗಿಗಳು ಸರದಿ ಸಾಲಿನಲ್ಲಿ ನಿಂತು ಚಿಕಿತ್ಸೆ ಪಡೆಯುವಂತಹ ಸ್ಥಿತಿ ಎದುರಾಗಿದೆ. ನಗರದಲ್ಲಿ ಇದುವರೆಗೂ 500ಕ್ಕೂ ಹೆಚ್ಚು ಡೇಂಘಿ, 250 ಕ್ಕೂ ಹೆಚ್ಚು ಮಂದಿಗೆ ಚಿಕೂನ್‌ಗುನ್ಯಾ , ಸಾವಿರಕ್ಕೂ ಹೆಚ್ಚು ಮಂದಿ ವೈರಲ್ ಫೀವರ್ , ಇನ್‌ಫ್ಲೂಯೆಂಜದಂತಹ ಜ್ವರಕ್ಕೆ ತುತ್ತಾಗುತ್ತಿದ್ದಾರೆ.

ಯಾವುದೇ ಜ್ವರ ಕಾಣಿಸಿಕೊಂಡರೂ ತಕ್ಷಣ ರಕ್ತ ಪರೀಕ್ಷೆಯನ್ನು ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಅಪಾಯ ಸಂಭವಿಸುವುದು ಖಚಿತ. ಆದರೂ ಬಿಬಿಎಂಪಿ ಇದುವರೆಗೂ ಯಾವುದೇ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ. ಅದರಲ್ಲೂ ಮುಖ್ಯವಾಗಿ ಯಲಹಂಕ ಸುತ್ತಮುತ್ತಲ ಪ್ರದೇಶಗಳಲ್ಲಿ ಡೇಂಘಿ ಉಲ್ಬಣಗೊಂಡಿದ್ದು ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ ರೋಗಿಗಳು ಪರಿತಪಿಸುವಂತಾಗಿದೆ. ಅತಿಯಾದ ವಾಹನ ದಟ್ಟಣೆ , ಅಪೂರ್ಣ ಕಾಮಗಾರಿಗಳು, ತಗ್ಗು ಪ್ರದೇಶಗಳಲ್ಲಿ ಕೊಳಚೆ ನೀರು ಶೇಖರಣೆಗೊಂಡು ಸಾಂಕ್ರಾಮಿಕ ರೋಗಗಳು ಉಲ್ಬಣಗೊಳಿಸುತ್ತಿವೆ. ಮಾವಳ್ಳಿಪುರ ತ್ಯಾಜ್ಯ ಸಂಸ್ಕರಣಾ ಘಟಕದ ಕೊಳಚೆ ನೀರನ್ನು ಆಳದ ಗುಂಡಿಗಳಲ್ಲಿ ಮುಚ್ಚುತ್ತಿರುವುದರಿಂದ ಅಂತರ್ಜಲ ಮಲೀನಗೊಂಡಿರುವುದೂ ಮಹಾಮಾರಿ ಆಗಮನಕ್ಕೆ ಪ್ರಮುಖ ಕಾರಣವಾಗಿದೆ.

ಜನರು ರೋಗ-ರುಜಿನಗಳಿಗೆ ತುತ್ತಾಗುತ್ತಿದ್ದರೂ ಸಾರ್ವಜನಿಕ ಆಸ್ಪತ್ರೆಗಳಲ್ಲಿ ವೈದ್ಯರಾಗಲಿ, ಬಿಬಿಎಂಪಿ ಆರೋಗ್ಯಾಧಿಕಾರಿಗಳಾಗಲಿ ಸಮರ್ಪಕ ಮಾಹಿತಿ ನೀಡುತ್ತಿಲ್ಲ . ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯ ಜೊತೆಗೆ ರೋಗ ತಡೆಗೆ ಅಗತ್ಯವಾದ ಸಲಕರಣೆಗಳು ಇಲ್ಲದಿರುವುದು ವಿಪರ್ಯಾಸ. ಅಳ್ಳಾಳಸಂದ್ರದ ಕೆರೆ ಸೇರಿದಂತೆ ಮತ್ತಿತರ ಕೆರೆಗಳು ಮಲೀನಗೊಂಡಿದ್ದು ಕೊಳಚೆ ನೀರಿನಲ್ಲಿ ಉತ್ಪತ್ತಿಯಾಗುತ್ತಿರುವ ಸೊಳ್ಳೆಗಳು ಇಡೀ ಯಲಹಂಕದಾದ್ಯಂತ ರೋಗರುಜಿನಗಳ ಹೆಚ್ಚಳಕ್ಕೆ ಕಾರಣವಾಗಿದೆ.
ಇದುವರೆಗೂ ಮಾರಣಾಂತಿಕ ಡೇಂಘಿಗೆ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಬೆರಳೆಣಿಕೆಯಷ್ಟು ಲೆಕ್ಕ ನೀಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ವಾರ ದಿಲೀಪ್ ಎಂಬ ಯುವಕ ಹಾಗೂ ನಿನ್ನೆ ಹೊಸಕೋಟೆ ಮೂಲದ ವನಜಾಕ್ಷಿ ಎಂಬುವವರು ಡೇಂಘಿಗೆ ಬಲಿಯಾಗಿದ್ದಾರೆನ್ನಲಾಗಿದೆ. ಆದರೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುಧಾ ಹಾಗೂ ಬೆಂಗಳೂರು ಉತ್ತರ ತಾಲ್ಲೂಕು ಸಾಂಕ್ರಾಮಿಕ ರೋಗಗಳ ವಿಚಾರಣಾಧಿಕಾರಿಯಾದ ಡಾ.ಸುನಂದ ಅವರು ಇದುವರೆಗೂ 16 ಮಂದಿ ಸಾವನ್ನಪ್ಪಿದ್ದು ಇವರು ಡೇಂಘಿಗೆ ಬಲಿಯಾಗಿದ್ದಾರೆಯೇ ಎಂಬ ಬಗ್ಗೆ  ಮಾದರಿ ಪರೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಯಲಹಂಕ ಸೇರಿದಂತೆ ಬೆಂಗಳೂರಿನ ಇತರ ಹಲವಾರು ಪ್ರದೇಶಗಳಲ್ಲೂ ಡೇಂಘಿ, ಚಿಕೂನ್‌ಗುನ್ಯಾದಂತಹ ಮಾರಣಾಂತಿಕ ರೋಗಗಳು ಉಲ್ಬಣಗೊಂಡಿದ್ದರೂ ಆರೋಗ್ಯ ಸಚಿವ ಯು.ಟಿ.ಖಾದರ್ ಆಗಲಿ, ಬಿಬಿಎಂಪಿ ಆಡಳಿತವಾಗಲಿ ರೋಗ ನಿವಾರಣೆಗೆ ಮುಂದಾಗದಿರುವುದು ಸಾರ್ವಜನಿಕರ ನೆಮ್ಮದಿ ಕೆಡಿಸಿದೆ.
ಮತ್ತಷ್ಟು ಅಪಾಯ ಸಂಭವಿಸುವ ಮುನ್ನ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡು ಸಾರ್ವಜನಿಕರಲ್ಲಿ ರೋಗ ರುಜಿನಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ರೋಗ ನಿಯಂತ್ರಣಕ್ಕೂ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.

Write A Comment