ಕರ್ನಾಟಕ

ಅಡಗಿಕೊಂಡು ಕುಳಿತಿರುವ ವಿಸ್ಮಯ, ಈ ಭೀಮನಖಿಂಡಿ ಕಲ್ಲಿನ ಕಮಾನು!

Pinterest LinkedIn Tumblr

bheema_1

ನಮ್ಮ ಕನ್ನಡ ನಾಡು ಹಲವು ವಿಸ್ಮಯಗಳ ತಾಣ, ಇಂತಹ  ವಿಸ್ಮಯಗಳು  ಬೇರೆ ದೇಶಗಳಲ್ಲಿ  ಇದ್ದಿದ್ದರೆ  ಅವುಗಳು ವಿಶ್ವ ವಿಖ್ಯಾತಿ  ಪಡೆದುಬಿಡುತ್ತಿದ್ದವು . ಬನ್ನಿ ಈ ಸಂಚಿಕೆಯಲ್ಲಿ ಅಂತಹ ವಿಸ್ಮಯ ಪ್ರದೇಶದ ಪರಿಚಯ  ಮಾಡಿಕೊಳ್ಳೋಣ .

ಆಳೆತ್ತರ ಬೆಳೆದ ಹುಲ್ಲು ಅಲ್ಲಲ್ಲಿ ಸಿಗುವ ಬಂಡೆ ಕಲ್ಲುಗಳು, ಕರಡಿ ಗುಹೆಗಳು ಇವುಗಳ ನಡುವೆ  ಬೆಟ್ಟ ಹತ್ತುವ ಕಾಯಕ !! ಸುಂದರ ಹಸಿರ ಮಡಿಲಲ್ಲಿ ಅಲ್ಲಲ್ಲಿ ಸಿಗುವ ಸುಂದರ  ಕಾಡಿನ ಹೂ ಗಳ ದರ್ಶನ ಆಳೆತ್ತರದ ಬೃಹತ್ ಕಮಾನು ಸಣ್ಣ ದೇವಾಲಯ ಸುಂದರ ಪ್ರಶಾಂತ ಜಾಗ ಸ್ವರ್ಗ ಇಲ್ಲೇ ಇದೆ  ಅನ್ನಿಸಿಬಿಡುವ ಒಂದು ಪ್ರದೇಶ , ಈ ಭೀಮನ ಖಿಂಡಿ .

ಭೀಮನ ಖಿಂಡಿ  ಬಗ್ಗೆ  ಇಲ್ಲಿನ ಸ್ಥಳೀಯರು  ಒಂದು ಕಥೆ ಹೇಳುತ್ತಾರೆ. ವನವಾಸ ಕಾಲದಲ್ಲಿ  ಇಲ್ಲಿ ಪಾಂಡವರು ಈ ಪ್ರದೇಶದಲ್ಲಿ ಇದ್ದರೆಂದು , ಕುಂತಿಯು  ತನ್ನ ಮಕ್ಕಳಿಗೆ  ಊಟ ತೆಗೆದುಕೊಂಡು  ಹೋಗಲು  ಅಡ್ಡ ವಾಗಿದ್ದ  ಒಂದು ಬೆಟ್ಟಕ್ಕೆ ಭೀಮನು  ತನ್ನ ಗದೆಯಿಂದ ಹೊಡೆದ  ಕಾರಣ ಈ ಕಮಾನು ಗೇಟು  ಆಯಿತೆಂದು  ಆ ಕಥೆಯಲ್ಲಿ ಪೌರಾಣಿಕ ಹಿನ್ನೆಲೆ  ತಿಳಿಸುತ್ತದೆ , ವೈಜ್ಞಾನಿಕವಾಗಿ  ಈ ಪ್ರದೇಶ  ಅಧ್ಯಯನ ಮಾಡಲು  ಯೋಗ್ಯವಾಗಿದೆ , ಇಲ್ಲಿನ ಶಿಲಾಪದರಗಳು,  ಲಕ್ಷಾಂತರ  ವರ್ಷಗಳಿಂದ  ರೂಪಗೊಂಡು  ಎಲ್ಲಾ  ಹವಾಮಾನಗಳನ್ನು  ಎದುರಿಸಿ  ನಿಂತಿರುವ ಕಲ್ಲಿನ ಬೃಹತ್ ಕಮಾನು  ವಿಜ್ಞಾನ ಕ್ಷೇತ್ರದ  ಜನರನ್ನು  ತನ್ನ ವಿಸ್ಮಯದಿಂದ  ಕೈಬೀಸಿ ಕರೆಯುತ್ತಿದೆ .

ಈ ಪ್ರದೇಶಕ್ಕೆ  ಗುಂಪಾಗಿ ಹೋಗುವುದು ಒಳ್ಳೆಯದು , ಒಂಟಿಯಾಗಿ ಹೋದರೆ ಕೆಲವೊಮ್ಮೆ   ವನ್ಯಜೀವಿಗಳ  ಹಾವಳಿಗೆ ಒಳಗಾಗುವ  ಸಾಧ್ಯತೆ ಇದೆ,   ಪ್ರವಾಸಿಗರು  ಎರಡು ಹೊತ್ತಿಗೆ ಆಗುವಷ್ಟು ನೀರು ಮತ್ತು ಆಹಾರ ತೆಗೆದುಕೊಂಡು ಹೋಗುವುದು ಒಳ್ಳೆಯದು, ಬೆಟ್ಟದ ತಪ್ಪಲಿನಲ್ಲಿರುವ  ಕಂಚುಗಹಳ್ಳಿ  ಗ್ರಾಮದಲ್ಲಿನ ಗ್ರಾಮಸ್ಥರ  ಸಹಕಾರ ಪಡೆದರೆ ನಿಮ್ಮ  ಪ್ರವಾಸ  ಸುಲಭವಾಗುತ್ತದೆ , ನೀವು ಸ್ವಂತವಾಹನ ತೆಗೆದುಕೊಂಡು  ಹೋಗಿದ್ದಾರೆ ಅದನ್ನು ಈ ಊರಿನಲ್ಲೇ ನಿಲ್ಲಿಸಬೇಕಾಗುತ್ತದೆ , ಸಾರ್ವಜನಿಕ ಸಾರಿಗೆ ಆದರೆ  ಹಲಗೂರು ಚನ್ನಪಟ್ಟಣ  ರಸ್ತೆಯಲ್ಲಿ ಬರುವ ಕಂಚುಗಹಳ್ಳಿ ಗೇಟ್  ಎಂಬಲ್ಲಿ ಇಳಿಯಬೇಕು ಅಲ್ಲಿಂದ ಎರಡು ಕಿಲೋಮೀಟರು ನಡೆದರೆ ಕಂಚುಗಹಳ್ಳಿ ಸಿಗುತ್ತದೆ . ನಂತರ ಈ ಊರಿನಿಂದ  ಸುಮಾರು ನಾಲ್ಕು ಕಿಲೋಮೀಟರು ನಡೆದರೆ  ನಿಮಗೆ ಭೀಮನಖಿಂಡಿ  ದರ್ಶನ ಆಗುತ್ತದೆ .

ಭೀಮನ ಖಿಂಡಿ ಪ್ರದೇಶ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ  ಸಾತನೂರು ಹೋಬಳಿಯಲ್ಲಿನ ಕಬ್ಬಾಳ ಅರಣ್ಯ ವಲಯಕ್ಕೆ ಸೇರಿದೆ   ಆದರೆ  ಇಲ್ಲಿಗೆ ತೆರಳಲು  ಮಂಡ್ಯಜಿಲ್ಲೆಯ ಮಳವಳ್ಳಿ ತಾಲೂಕಿನ  ಹಲಗೂರು  ಎಂಬ  ಊರಿಗೆ ಬಂದು ನಂತರ  ತೆರಳಬೇಕು .   ಬೆಂಗಳೂರಿನಿಂದ  ಬರುವವರು  ಕನಕಪುರ  , ಸಾತನೂರು, ಹಲಗೂರು ಮಾರ್ಗವಾಗಿ ಬಂದರೆ  ೯೦ ಕಿಲೋಮೀಟರು  ಆಗುತ್ತದೆ , ಅಥವಾ  ರಾಮನಗರ ಚೆನ್ನಪಟ್ಟಣ ಕಡೆಯಿಂದ  ಹಲಗೂರು ರಸ್ತೆಯಲ್ಲಿ ಬಂದರೆ  ೮೧ ಕಿಲೋಮೀಟರು ಆಗುತ್ತದೆ,  ಮೈಸೂರಿನಿಂದ ಬಂದರೆ ಬನ್ನೂರು, ಮಳವಳ್ಳಿ,  ಹಲಗೂರು  ಮಾರ್ಗವಾಗಿ   ೭೯ ಕಿಲೋಮೀಟರು ಆಗುತ್ತದೆ .

ಬೆಳಗ್ಗಿನಿಂದ ಸಂಜೆವರೆಗೆ  ಈ ಪ್ರದೇಶದಲ್ಲಿ ಚಾರಣ ಮಾಡುತ್ತಾ , ಭೀಮನಖಿಂಡಿ ಕಮಾನು ಇರುವ ಗುಹೆಯಂತಹ ಜಾಗದಲ್ಲಿ  ಕಾಣುವ ನಿಸರ್ಗದ ಸುಂದರ ದೃಶ್ಯ ನೋಡುತ್ತಾ, ವಿವಿಧ ಬಗೆಯ  ಕಾಡಿನ ಪುಷ್ಪಗಳ ಹಾಗು ಪಕ್ಷಿಗಳ  ನೋಡುತ್ತಾ  ಒಂದು ದಿನ ಕಳೆಯಲು ಈ ಜಾಗ ಅತ್ಯುತ್ತಮ,  ಹೆಚ್ಚು ಪ್ರಚಾರವಿಲ್ಲದೆ  ತನ್ನ ಒಡಲಲ್ಲಿ ವಿಸ್ಮಯ ಬಚ್ಚಿಟ್ಟಿರುವ   ಈ ಭೀಮನಖಿಂಡಿಗೆ  ಮೈಸೂರಿನ   ಯೂತ್ ಹಾಸ್ಟೆಲ್  ವತಿಯಿಂದ  ಕೆಲವೊಮ್ಮೆ ಚಾರಣ  ಹಮ್ಮಿಕೊಳ್ಳುತ್ತಾರೆ  , ಇದನ್ನು ಬಿಟ್ಟರೆ  ಹೆಚ್ಚಿನ ಜನರಿಗೆ ಇದರ ಪರಿಚಯವಿಲ್ಲ ,  ಜೊತೆಗೆ  ಹತ್ತಿರದ  ಬೆನುಮನ ಹಳ್ಳಿ ಎಂಬ ಊರಿನಿನ ಸನಿಹದಿಂದ  ಈ ಭೀಮನ ಖಿಂಡಿ  ಬೆಟ್ಟದ  ಬೃಹತ್  ಕಮಾನನ್ನು  ನೋಡುವ  ಆ ದೃಶ್ಯ  ವೈಭವ ವರ್ಣಿಸಲು  ಆಗದು,   ಬಾಯಿತೆರೆದ  ಹೆಬ್ಬುಲಿಯಂತೆ  ಕಾಣುವ ಆ ನೋಟ  ಅದ್ಭುತವಾಗಿರುತ್ತದೆ . ಒಮ್ಮೆ ಹೋಗಿ ಬನ್ನಿ ನಿಮ್ಮ ಅನುಭವ  ಮತ್ತಷ್ಟು  ಸುಂದರವಾಗಿರುತ್ತದೆ.

Write A Comment