ಕರ್ನಾಟಕ

ನಾನು ಯಡಿಯೂರಪ್ಪರೊಂದಿಗೆ ಮಾತನಾಡಿರುವುದರಿಂದ ಕಾಂಗ್ರೆಸ್ಸ್ ನಾಯಕರಿಗೆ ಭಯ ಶುರು ಆಗಿದೆ: ಎಚ್.ಡಿ.ಕುಮಾರಸ್ವಾಮಿ ಲೇವಡಿ

Pinterest LinkedIn Tumblr

kumara

ಹುಬ್ಬಳ್ಳಿ, ಜೂ.25: ಜೆಡಿಎಸ್ ನಾಯಕರೊಂದಿಗೆ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೈ ಜೋಡಿಸಿದರೆ ಕಾಂಗ್ರೆಸ್ ನಾಯಕರಿಗೆ ನಿದ್ದೆಯೇ ಬರುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರೊಂದಿಗೆ ಕೇವಲ 5 ನಿಮಿಷಗಳ ಕಾಲ ಸೌಹಾರ್ಧಯುತ ಭೇಟಿ ಮಾಡಿದ್ದಕ್ಕೆ ಕಾಂಗ್ರೆಸ್ ನಾಯಕರು ನಡುಗಿ ಹೋಗಿದ್ದಾರೆ. ಇನ್ನು ನಾವಿಬ್ಬರೂ ಒಂದಾದರೆ ಕಾಂಗ್ರೆಸ್ಸಿಗರು ನಿದ್ದೆಯೇ ಮಾಡುವುದಿಲ್ಲ ಎಂದು ಟೀಕಿಸಿದರು. ರಾಜಕೀಯವಾಗಿ ವಿಶ್ಲೇಷಿಸುತ್ತಿರುವಂತೆ ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಮತ್ತು ನಾವು ಮತ್ತೆ ಒಂದಾದರೆ ಕಾಂಗ್ರೆಸ್ಸಿಗರಿಗೆ ಆತಂಕ ಕಾಡತೊಡಗುತ್ತದೆ ಎಂದರು.

ಯಡಿಯೂರಪ್ಪ ಅವರ ಮೇಲೆ ವಿನಾಕಾರಣ ರಾಜಕೀಯಕ್ಕಾಗಿ ಕೇಸು ದಾಖಲಿಸಲಾಗುತ್ತಿದೆ. ಈಗಾಗಲೇ ಹಲವು ಕೇಸುಗಳು ಅವರ ಮೇಲಿವೆ. ಅವರ ವಿರುದ್ಧ ಹೂಡುತ್ತಿರುವ ಮೊಕದ್ದಮೆಗಳಂತೆ ಸಿಎಜಿ ವರದಿಯಲ್ಲಿ ಉಲ್ಲೇಖಗೊಂಡ ಪ್ರಕರಣಗಳಲ್ಲಿ ಮೊಕದ್ದಮೆ ಹೂಡಿದರೆ ಲಕ್ಷಾಂತರ ಕೇಸುಗಳನ್ನು ಸರ್ಕಾರ ದಾಖಲಿಸಬೇಕಾಗುತ್ತದೆ. ಅಂತಹ ಕೆಲಸವನ್ನು ಸರ್ಕಾರ ಮಾಡುತ್ತದೆಯೇ? ಎಲ್ಲಾ ಪ್ರಕರಣಗಳಲ್ಲೂ ಎಲ್ಲರ ವಿರುದ್ಧ ಸರ್ಕಾರ ಕೇಸು ಹಾಕಲಿದೆಯೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ರೈತರ ಧ್ವನಿಯಾಗಿ ಪಾದಯಾತ್ರೆ: ಇಂದಿನಿಂದ ಧಾರವಾಡದಿಂದ ಬೆಳಗಾವಿಗೆ ಆರಂಭಿಸಿರುವ ಪಾದಯಾತ್ರೆ ರಾಜಕೀಯ ಅಥವಾ ವೈಯಕ್ತಿಕ ಲಾಭಕ್ಕಾಗಿ ಅಲ್ಲ. ಕಬ್ಬು, ರೇಷ್ಮೆ, ದಾಳಿಂಬೆ, ದ್ರಾಕ್ಷಿ ಸೇರಿದಂತೆ ವಿವಿಧ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗೆ ಸರ್ಕಾರ ತಳೆದಿರುವ ನಿರ್ಲಕ್ಷ್ಯ ಧೋರಣೆ ವಿರುದ್ಧ ನಡೆಸಲಾಗುತ್ತಿದೆ. ಸರ್ಕಾರ ರೈತರ ನೆರವಿಗೆ ಧಾವಿಸದೆ ಇರುವುದರಿಂದ ಸಂಕಷ್ಟದಲ್ಲಿರುವ ಬೆಳೆಗಾರರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಅಂತಹವರಿಗೆ ಧೈರ್ಯ ತುಂಬಲು ಅವರ ಧ್ವನಿಯಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಸರ್ಕಾರಕ್ಕೂ ಎಚ್ಚರಿಕೆಯ ಸಂದೇಶ ನೀಡುವುದು ಯಾತ್ರೆಯ ಉದ್ದೇಶ.

ರಾಜ್ಯದಲ್ಲಿ ಕಳೆದ 2 ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದೆ. ರೈತರ ಒಂದೂ ಸಮಸ್ಯೆಯೂ ಬಗೆಹರಿದಿಲ್ಲ. ಕಳೆದ 2 ವರ್ಷಗಳಿಂದ ಕಬ್ಬು ಬೆಳೆಗಾರರ ಬಾಕಿ ಪಾವತಿಯಾಗಿಲ್ಲ, ಮುಖ್ಯಮಂತ್ರಿ, ಸಹಕಾರ ಸಚಿವರು ಹಾಗೂ ಕೃಷಿ ಸಚಿವರಿಗೆ ಪತ್ರ ಬರೆದರೂ ಯಾವುದೇ ಉಪಯೋಗವೂ ಆಗಲಿಲ್ಲ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನ ಹರಿಸಲು ರೈತರಿಗೆ ಧೈರ್ಯ ತುಂಬಲು ಪಾದಯಾತ್ರೆ ನಡೆಸುತ್ತಿರುವುದಾಗಿ ಸ್ಪಷ್ಟಪಡಿಸಿದರು. ಪಾದಯಾತ್ರೆಗೆ ಚಾಲನೆ: ಎಚ್.ಡಿ.ಕುಮಾರಸ್ವಾಮಿ ಅವರು ಹುಬ್ಬಳ್ಳಿ ಚನ್ನಮ್ಮನವೃತ್ತಕ್ಕೆ ಬೈಕ್ ಮೇಲೆ ಆಗಮಿಸಿ ಪಾದಯಾತ್ರೆಗೆ ಚಾಲನೆ ನೀಡಿದರು.

Write A Comment