ಕರ್ನಾಟಕ

ಬಂಧನ ಭೀತಿ ಎದುರಿಸುತ್ತಿರುವ ಯಡ್ಡಿ-ರೆಡ್ಡಿ: ಕಾನೂನು ಬಾಹಿರ ಡಿನೋಟಿಪೀಕೇಷನ್ -ಆಕ್ರಮವಾಗಿ ಅದಿರು ರಪ್ತು ಪ್ರಕರಣ ಮತ್ತೆ ಮುಳುವಾಗುವ ಸಾಧ್ಯತೆ

Pinterest LinkedIn Tumblr

yadd-reddy

ಬೆಂಗಳೂರು,ಜೂ.25: ಕಾನೂನು ಬಾಹಿರ ಡಿನೋಟಿಪೀಕೇಷನ್ ಹಾಗೂ ಆಕ್ರಮವಾಗಿ ಅದಿರು ರಪ್ತು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯದ ಇಬ್ಬರು ಪ್ರಭಾವಿ ನಾಯಕರನ್ನು ಸದ್ಯದಲ್ಲೇ ಬಂಧನಕ್ಕೊಳಪಡಿಸುವ ಸಾಧ್ಯತೆ ಹೆಚ್ಚಾಗಿದೆ.

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಬಳ್ಳಾರಿ ರಿಪಬ್ಲಿಕ್ ಮೂಲಕ ದೇಶದ ಗಮನ ಸೆಳೆದಿದ್ದ ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಅವರನ್ನು ಯಾವುದೇ ವೇಳೆ ಬಂಧಿಸುವ ಸಾಧ್ಯತೆಯಿದೆ. ಒಂದು ವೇಳೆ ಈ ಇಬ್ಬರು ಬಂಧನಕ್ಕೊಳಪಟ್ಟರೆ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸುನಾಮಿ ಉಂಟಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

2008ರಿಂದ 2011ರವರೆಗೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಕಾನೂನು ಉಲ್ಲಂಘನೆ ಮಾಡಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ( ಬಿಡಿಎ)ಕ್ಕೆ ಸೇರಿದ ಸುಮಾರು 161 ಎಕರೆ ಜಮೀನನ್ನು ಡಿನೋಟೀಫೈ ಮಾಡಿದ್ದಾರೆ ಎಂದು ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.

ದೂರಿನನ್ವಯ ಈಗಾಗಲೇ ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ಸುಮಾರು 12 ಪ್ರಥಮ ವರದಿ ಮಾಹಿತಿ(ಎಪ್‌ಐಆರ್) ದಾಖಲಿಸಿದ್ದಾರೆ. ಇದರ ಜೊತೆಗೆ ತುಮಕೂರಿನ ಮಾಜಿ ಸಂಸದ ಜಿ.ಎಸ್. ಬಸವರಾಜು, ಮಾಜಿ ಶಾಸಕ ನಂದೀಶ್ ರೆಡ್ಡಿ ವಿರುದ್ದವೂ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಯಡಿಯೂರಪ್ಪ ಅಧಿಕಾರವಧಿಯಲ್ಲಿದ್ದ ಮೂವರು ಪ್ರಧಾನ ಕಾರ್ಯದರ್ಶಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಲೋಕಾಯುಕ್ತ ಪೊಲೀಸರು, ಈ ಮೂವರು ಅಧಿಕಾರಿಗಳ ಮೇಲೆಯೂ ಎಫ್‌ಐಆರ್ ದಾಖಲಿಸಲು ಮುಂದಾಗಿದ್ದಾರೆಂದು ತಿಳಿದು ಬಂದಿದೆ.

ಬೆಂಗಳೂರು ಸುತ್ತಮುತ್ತ ಕೋಟ್ಯಾಂತರ ರೂ. ಬೆಲೆಬಾಳುವ ಜಮೀನನ್ನು ಯಡಿಯೂರಪ್ಪ ಕಾನೂನು ಉಲ್ಲಂಘನೆ ಮಾಡಿ, ಡಿನೋಟಿಫೈ ಮಾಡಿದ್ದಾರೆ. ಸ್ವಜನ ಪಕ್ಷಪಾತ, ಭ್ರಷ್ಟಚಾರ ನಡೆದಿದೆ ಎಂಬುದು ಸಿಎಜಿ ವರದಿಯಲ್ಲಿ ಉಲ್ಲೇಖವಾಗಿತ್ತು. ಇದರ ಜೊತೆಗೆ ಮಾಹಿತಿ ಹಕ್ಕು ಹೋರಾಟಗಾರ ಜಯಕುಮಾರ್ ಹಿರೇಮಠ್ ಎಂಬುವರು ಕೂಡ ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ನೀಡಿ ವಿಚಾರಣೆ ನಡೆಸುವಂತೆ ಕೋರಿದ್ದರು. ಸಿಎಜಿ ವರದಿ ಅನುಸಾರ ಸಿಐಡಿ ತನಿಖೆಯಲ್ಲೂ ಬಿಎಸ್‌ವೈ ಅಕ್ರಮವಾಗಿ ಡಿನೋಟಿಪೈ ಮಾಡಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂ. ನಷ್ಟವಾಗಿದೆ ಎಂಬುದು ಗೊತ್ತಾಗಿತ್ತು.

ಈಗಾಗಲೇ ಲೋಕಾಯುಕ್ತ ಪೊಲೀಸರು ಯಡಿಯೂರಪ್ಪ ಹಾಗೂ ಇತರರ ಮೇಲೆ ಎಫ್‌ಐಆರ್ ದಾಖಲಿಸಿರುವುದರಿಂದ ಅವರ ವಿರುದ್ದ ಸದ್ಯದಲ್ಲೇ ಸಮನ್ಸ್ ಜಾರಿ ಮಾಡಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಎಫ್‌ಐಆರ್ ದಾಖಲಾದ ಮೇಲೆ ಆರೋಪಿಗಳ ವಿರುದ್ದ ಸಮನ್ಸ್ ಜಾರಿ ಮಾಡುವುದು ಪೊಲೀಸರ ಜವಬ್ದಾರಿಯಾಗಿರುತ್ತದೆ. ಹೆಚ್ಚಿನ ವಿಚಾರಣೆಗಾಗಿ ತನಿಖಾ ಕಚೇರಿಗೆ ಬರುವಂತೆ ಸೂಚಿಸಬಹುದು. ಒಂದು ವೇಳೆ ತಮ್ಮನ್ನು ಲೋಕಾಯುಕ್ತ ಪೊಲೀಸರು ಬಂಧಿಸಬಹುದೆಂಬ ಭೀತಿಯಿಂದ ಆರೋಪಿಗಳು ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ನೀಡುವಂತೆ ಮನವಿ ಮಾಡಿಕೊಳ್ಳುವ ಸಾಧ್ಯತೆಯೂ ಇದೆ. ನ್ಯಾಯಾಲಯ ಜಾಮೀನು ನೀಡಿದರೆ ಬಂಧನದಿಂದ ಪಾರಾಗಬಹುದು.

ಈ ವೇಳೆ ಆರೋಪಿಗಳು ಸಾಕ್ಷಿಗಳನ್ನು ನಾಶಪಡಿಸುವ ಸಾಧ್ಯತೆಯಿದೆ. ಹಾಗಾಗಿ ಅವರನ್ನು ವಿಚಾರಣೆಗೆ ತೆಗೆದುಕೊಳ್ಳಬೇಕು. ಈ ಹಂತದಲ್ಲಿ ಜಾಮೀನು ನೀಡಿದರೆ ವಿಚಾರಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಲೋಕಾಯುಕ್ತ ಪೊಲೀಸರು ನ್ಯಾಯಾಧೀಶರಿಗೆ ಮನವರಿಕೆ ಮಾಡಿಕೊಟ್ಟರೆ ಯಡಿಯೂರಪ್ಪ ಹಾಗೂ ಇತರರನ್ನು ಬಂಧಿಸುವುದು ಖಚಿತ. ನ್ಯಾಯಾಲಯ ಸಮನ್ಸ್ ರದ್ದು ಮಾಡದಿದ್ದರೆ ಬಿಎಸ್ ವೈ ಎರಡನೇ ಬಾರಿ ಶ್ರೀಕೃಷ್ಣನ ಜನ್ಮಸ್ಥಳದ ದರ್ಶನ ಪಡೆಯುವುದನ್ನು ಸಾಕ್ಷತ್ ದೇವರು ಕೂಡಾ ರಕ್ಷಣೆ ಮಾಡಲು ಸಾಧ್ಯವಿಲ್ಲ.

ರೆಡ್ಡಿಗೂ ಬಂಧನದ ಭೀತಿ:
ಒಂದು ಕಡೆ ಲೋಕಾಯುಕ್ತ ಪೊಲೀಸರು ಯಡಿಯೂರಪ್ಪನವರನ್ನು ಬಂಧಿಸಲು ಸಿದ್ಧತೆ ನಡೆಸುತ್ತಿದ್ದರೆ ಮತ್ತೊಂದೆಡೆ ಗಾಲಿ ಜನಾರ್ಧನರೆಡ್ಡಿ ಕೂಡ ಎರಡನೇ ಬಾರಿಗೆ ಬಂಧನಕ್ಕೊಳಪಡುವ ಸಂಭವವಿದೆ. ಈ ಹಿಂದೆ ರೆಡ್ಡಿ ಅವರ ಬೆಂಬಲಿಗರು ಕಾರವಾರ ಜಿಲ್ಲೆ ಬೇಲೇಕೆರಿ ಬಂದರು ಮೂಲಕ ಬೆಲೆಬಾಳುವ ಅದಿರನ್ನು ವಿದೇಶಕ್ಕೆ ಕಾನೂನು ಬಾಹಿರವಾಗಿ ರಫ್ತು ಮಾಡಿದ ಆರೋಪ ಎದುರಿಸುತ್ತಿದ್ದಾರೆ.

ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅವರ ನೇತೃತ್ವದ ಹಸಿರು ಪೀಠ ವಿಶೇಷ ತನಿಖಾ ದಳ( ಎಸ್‌ಐಟಿ)ದ ಮೂಲಕ ತನಿಖೆಗೆ ಆದೇಶ ನೀಡಿದೆ. ಈಗಾಗಲೇ ವಿಚಾರಣೆ ನಡೆಸುತ್ತಿರುವ ಎಸ್‌ಐಟಿ ಪ್ರಕರಣದಲ್ಲಿ ಜನಾರ್ಧನರೆಡ್ಡಿ ಮೊದಲನೇ ಆರೋಪಿ ಎಂದು ಪರಿಗಣಿಸಿದೆ. ರೆಡ್ಡಿ ಮತ್ತು ಅವರ ಬೆಂಬಲಿಗರು ಸುಮಾರು 50 ಸಾವಿರ ಮೆಟ್ರಿಕ್ ಟನ್ ಅದಿರನ್ನು ಬೇಲೇಕೆರಿ ಬಂದರಿನ ಮೂಲಕ ವಿದೇಶಕ್ಕೆ ರಪ್ತು ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ತನಿಖಾ ವರದಿ ಹೇಳಿದೆ. ಈ ಹಿನ್ನಲೆಯಲ್ಲಿ ಎಸ್‌ಐಟಿ ಮುಖ್ಯಸ್ಥ ಚರಣ್‌ರೆಡ್ಡಿ , ಜನಾರ್ಧನರೆಡ್ಡಿಯನ್ನು ವಿಚಾರಣೆಗೊಳಪಡಿಸಲು ತೀರ್ಮಾನಿಸಿದ್ದಾರೆಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ. ಈ ಹಿಂದೆ ಅಕ್ರಮ ಗಣಿಕಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖಾ ತಂಡ ಜನಾರ್ಧನರೆಡ್ಡಿ ಅವರನ್ನು ಬಂಧಿಸಿತ್ತು. ಷರತ್ತು ಬದ್ದ ಜಾಮೀನಿನ ಮೇಲೆ ನ್ಯಾಯಾಲಯ ಜಾಮೀನು ನೀಡಿತ್ತು.

Write A Comment